Thursday, February 5, 2015

ತಾ. ೯: ಕಟೀಲು ಭ್ರಾಮರೀವನದ ನೂತನ ಗುಡಿಯಲ್ಲಿ ಬ್ರಹ್ಮಕಲಶ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೂಲಸ್ಥಳವಾದ ಭ್ರಾಮರೀ ಅವತಾರವಾಗಿ ಅರುಣಾಸುರನ ಸಂಹಾರವಾದ ಸ್ಥಳ ಇನ್ನು ಮುಂದಕ್ಕೆ ಭ್ರಾಮರೀವನ ಎನಿಸಿಕೊಳ್ಳಲಿದೆ. ಇಲ್ಲಿ ಉದ್ಭವ ಲಿಂಗವಿರುವಲ್ಲಿ ನೂತನವಾಗಿ ಗರ್ಭಗುಡಿಯನ್ನು ನಿರ್ಮಿಸಲಾಗಿದ್ದು, ತಾ.೯ರಂದು ಬೆಳಿಗ್ಗೆ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ದೇಗುಲದ ಆಡಳಿತಾಧಿಕಾರಿ ನಿಂಗಯ್ಯ ದೇಗುಲದಲ್ಲಿ ತಿಳಿಸಿದರು.

ನೂತನ ಗರ್ಭಗುಡಿಯನ್ನು ಪಡುಬಿದ್ರಿ ಎರ್ಮಾಳುಗುತ್ತು ಶ್ರೀಮತಿ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳು ಕಲ್ಲಟೆಗುತ್ತು ಮೂಲಕುಟುಂಬಸ್ಥರು ಸೇವಾರೂಪದಲ್ಲಿ ನಿರ್ಮಿಸಿದ್ದಾರೆ.
s
ಕಲಾತ್ಮಕ ಗರ್ಭಗುಡಿ
೨೦೧೩ನೇ ಇಸವಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ನಿರ್ದೇಶಿಸಿದಂತೆ ಮೂಲಲಿಂಗದ ಸುತ್ತ ಧ್ವಜ ಆಯದಲ್ಲಿ ಗರ್ಭಗುಡಿಯು ಚತುಃಶಾಲೆಯ ಮಾದರಿಯಂತೆ ನಿರ್ಮಾಣವಾಗಿದ್ದು ಅದರ ಅಂಗಣದಲ್ಲಿ ನೆಲಮಟ್ಟದಲ್ಲೇ ಮೂಲಬಿಂಬವು ಮಳೆ ಸೂರ್ಯ ರಶ್ಮಿಯನ್ನು ಪಡೆಯುವ ರೀತಿಯಲ್ಲಿ ವಾಸ್ತುವನ್ನು ವಿನ್ಯಾಸಗೊಳಿಸಲಾಗಿದೆ. ಗುಡಿಯು ಶಿಲಾಮಯವಾಗಿದ್ದು ಮರ ಹಾಗೂ ತಾಮ್ರದಿಂದ ಮಾಡು ನಿರ್ಮಾಣವಾಗಿದೆ. ಶಿಲಾಮಯ ಗರ್ಭಗುಡಿಯು ಕಲಶಬಂಧ ಅಧಿಷ್ಠಾನವನ್ನು ಹೊಂದಿದ್ದು, ಭಿತ್ತಿಸ್ತಂಭ, ಪಂಜರ, ಕುಂಭಲತೆಗಳನ್ನು ಒಳಗೊಂಡಿದೆ. ಚಾಲುಕ್ಯ ಶೈಲಿಯ ೨ ಕಂಭಗಳ ಮೇಲೆ ಮುಖಮಂಟಪ ಇದೆ. ಮುಖ ಮಂಟಪದ ಮೇಲೆ ದಶಾವತಾರ ಹಾಗೂ ಶ್ರೀ ಕ್ಷೇತ್ರದ ಇತಿಹಾಸದ ಮರದ ಕೆತ್ತನೆಯ ಮೂರ್ತಿಗಳು ಸೇರಿ ಮಾಡಿನ ಮರಗಳಲ್ಲಿ ಹಲವಾರು ಸೂಕ್ಷ್ಮ ಕೆತ್ತನೆಯ ಕೆಲಸಗಳನ್ನು ಮಾಡಲಾಗಿದೆ. ತಾಮ್ರದ ಮಾಡಿನ ಶ್ರೀ ಮುಖದಲ್ಲಿ ಕಿಂಪುರುಷನ ಮರದ ಕೆತ್ತನೆ ರಮಣೀಯವಾಗಿದೆ. ಕೇರಳ ಅಥವಾ ಕರಾವಳಿಯ ಶೈಲಿಯಲ್ಲಿ ನಿರ್ಮಿತ ಈ ಗುಡಿಯನ್ನು ಇಪ್ಪತ್ತು ಮಂದಿ ಶಿಲ್ಪಿಗಳು ಸುಮಾರು ಒಂಭತ್ತು ತಿಂಗಳ ಕಾಲದಲ್ಲಿ ನಿರ್ಮಿಸಿದ್ದಾರೆ ಎಂದವರು ತಿಳಿಸಿದರು.
೧೯೭೭ರ ತನಕ ವರ್ಷಕ್ಕೊಮ್ಮೆ ಮಾತ್ರ ಜಾತ್ರೆಯ ಸಂದರ್ಭ ಇಲ್ಲಿ ದೇವರಿಗೆ ಪೂಜೆ ನಡೆಯುತ್ತಿದ್ದು, ಅಷ್ಟಮಂಗಲದಲ್ಲೂ ಒಂದು ಬಾರಿ ಪೂಜೆಯ ಬಗ್ಗೆ ತಿಳಿಸಲಾಗಿದೆ. ಬ್ರಹ್ಮಕಲಶದ ಬಳಿಕ ತಂತ್ರಿಗಳ ನಿರ್ದೇಶನದಂತೆ ಭ್ರಾಮರೀ ವನದಲ್ಲಿ ಪೂಜೆಯ ಕುರಿತು ನಿರ್ಣಯಿಸಲಾಗುವುದು.
ಈಗಾಗಲೇ ಅರ್ಚಕರ ಸ್ನಾನಕ್ಕಾಗಿ ಹಾಗೂ ದೇವಿಯ ತೀರ್ಥಕ್ಕಾಗಿ ೨ ಕೆರೆಗಳೂ ಇಲ್ಲಿ ನಿರ್ಮಾಣವಾಗಿದ್ದು, ನಾಗನಿಗೆ ಚಿತ್ರಕೂಟ ಮತ್ತು ವ್ಯಾಘ್ರಚಾಮುಂಡಿಯ ಅಧಿಷ್ಠಾನವನ್ನು ನಿರ್ಮಿಸಲಾಗಿದೆ. ಇಲ್ಲಿ ಮುಂದೆ ಪರಿಧಿ, ಯಾಜ್ಞಿಕ ವೃಕ್ಷ ಪ್ರತಿಷ್ಠೆ, ಯಾಗಶಾಲೆ, ತುಳಸಿ ಪುಷ್ಪೋದ್ಯಾನ, ನಾಗನಿಗಾಗಿಯೇ ನೀರು ಕುಡಿಯಲು ನಾಗಕೂಪ, ಧ್ಯಾನಕೇಂದ್ರ ಮತ್ತು ಕ್ಷೇತ್ರದ ಮಹಾತ್ಮೆಯನ್ನು ಸಾರುವ ಶಿಲಾಮಯ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಯೋಜನೆಗಳನ್ನು ಭಕ್ತರ ನೆರವಿನಿಂದ ಅನುಷ್ಠಾನಗೊಳಿಸಲಾಗುವುದು. ಈ ಸುಂದರ ಗರ್ಭಗುಡಿಯನ್ನು ಪ್ರಸಿದ್ಧ ವಾಸ್ತುತಜ್ಞರಾದ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಇವರ ನಿರ್ದೇಶನದಂತೆ ಉಡುಪಿಯ ಎಲ್ಲೂರಿನ ವಿಷ್ಣುಮೂರ್ತಿ ಭಟ್ ಇವರ ಉಸ್ತುವಾರಿಯಲ್ಲಿ ಶಿಲ್ಪಿಗಳು ನಿರ್ಮಿಸಿದ್ದಾರೆ. ಕುದ್ರುವಿನ ಎರಡೂ ಬದಿಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿರುವುದರಿಂದ ಉತ್ತಮವಾಗಿ ನೀರು ಸಂಗ್ರಹವಾಗಿದ್ದು, ಕುದ್ರುವಿನ ಸೌಂದರ್ಯ ಇನ್ನಷ್ಟು ಹೆಚ್ಚಿದೆ. ಪ್ರವಾಸಿಗಳಿಗೆ ಉತ್ತಮ ವೀಕ್ಷಣೆಯ ಆಧ್ಯಾತ್ಮ ಕೇಂದ್ರವಾಗಿಯೂ ಈ ಕುದ್ರು ಮೂಡಿಬರಲಿದೆ. ರಕ್ಷಣೆ ಹಾಗೂ ಸ್ವಚ್ಛತೆಗೆ ಗಮನ ನೀಡಲಾಗುವುದು ಎಂದು ಅವರು ತಿಳಿಸಿದರು.
ತತ್ಪ್ರಯುಕ್ತ ತಾ.೯ರ ಸೋಮವಾರ ಮಧ್ಯಾಹ್ನದಿಂದ ಕಟೀಲು ಮೇಳದ ಕಲಾವಿದರಿಂದ ಯಕ್ಷಗಾನ ಗಾನಾಮೃತ, ಕದ್ರಿ ಗೋಪಾಲನಾಥ್‌ರಿಂದ ಸ್ಯಾಕ್ಸೋಫೋನ್ ವಾದನವಿದೆ. ಸಭಾ ಕಾರ‍್ಯಕ್ರಮದಲ್ಲಿ ಪೇಜಾವರದ ಈರ್ವರು ಯತಿಗಳು, ಎಡನೀರು ಶ್ರೀಗಳು, ಒಡಿಯೂರು, ಮಾಣಿಲ, ಕೊಂಡೆವೂರು ಸ್ವಾಮೀಜಿಗಳು, ಕೇಂದ್ರ ಸಚಿವ ಶ್ರೀಪಾದ ನಾಯಕ್, ಸಚಿವರಾದ ಅಭಯಚಂದ್ರ, ವಿನಯಕುಮಾರ ಸೊರಕೆ, ಯು.ಟಿ.ಖಾದರ್, ಸಾಂಸದ ನಳಿನ್ ಕುಮಾರ್, ಗಣೇಶ್ ಕಾರ್ಣಿಕ್ ಮುಂತಾದವರು ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ದಾನಿ ಸತೀಶ್ ಶೆಟ್ಟಿ ಎರ್ಮಾಳು, ಜೆ.ಸಿ.ಕುಮಾರ್, ಬಿ.ಟಿ.ಬಂಗೇರ, ರಾಘವೇಂದ್ರ ಆಚಾರ‍್ಯ, ಸುಷ್ಮಾ ಎಂ. ಮಲ್ಲಿ, ಚಂದ್ರಹಾಸ ರೈ, ವಾಮಯ್ಯ ಶೆಟ್ಟಿ, ಪದ್ಮನಾಭ ಪಯ್ಯಡೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದರು.



ಅತ್ಯಂತ ಕಲಾತ್ಮಕ ಸುವರ್ಣ ನಡೆದೇಗುಲ
ಸರಕಾರದ ಉಸ್ತುವಾರಿಯಲ್ಲಿ ನಿರ್ಮಿತ ಮೊದಲ ಚಿನ್ನದ ರಥ
ಕೇರಳ, ಮಹಾರಾಷ್ಟ್ರಗಳಲ್ಲಿ ಕರ್ನಾಟಕದ ನೂರಾರು ಕಡೆಗಳಲ್ಲಿ ಚಿನ್ನದ ನಾನಾ ಪ್ರಾಕಾರಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಇಲ್ಲಿಗಿಂತ ಹೆಚ್ಚಿನ ಚಿನ್ನವನ್ನು ಬಳಸಿ ವಿಗ್ರಹ, ಪಲ್ಲಕಿ ನಿರ್ಮಿಸಿದ್ದೇವೆ. ಆದರೆ ಕಟೀಲಿನ ಚಿನ್ನದ ರಥ ನಾವು ನಿರ್ಮಿಸಿದ ಎಲ್ಲವುಗಳಿಗಿಂತ ಹೆಚ್ಚು ಕಲಾತ್ಮಕವಾಗಿ ಮೂಡಿ ಬಂದಿದೆ ಎಂದು ಆತ್ಮತೃಪ್ತಿಯಿಂದ ಹೇಳಿದವರು ರಥ ನಿರ್ಮಾತೃ ಗುತ್ತಿಗೆ ವಹಿಸಿಕೊಂಡ ಸ್ವರ್ಣ ಜ್ಯುವೆಲ್ಲರ‍್ಸ್ ಸಂಸ್ಥೆಯ ನಿರ್ದೇಶಕರಾದ ಗುಜ್ಜಾಡಿ ರಾಮದಾಸ ನಾಯಕ್.
ಕಟೀಲು ಶ್ರೀ ದುರ್ಗಾಮೇಶ್ವರೀ ದೇವಸ್ಥಾನದ ಭಕ್ತಾದಿಗಳ ದೇಣಿಗೆಯಿಂದ ನಿರ್ಮಾಣವಾದ ರಾಜ್ಯದ ಅತಿ ಎತ್ತರದವಾದ ಚಿನ್ನದ ರಥವನ್ನು ದಿನಾಂಕ ೮ರ ರಾತ್ರಿ ಗಂಟೆ ೮.೩೦ಕ್ಕೆ ಶ್ರೀ ದೇವಿಗೆ ಸಮರ್ಪಿಸಲಾಗುವುದು. ಒಟ್ಟು ೧೪ ಅಡಿ ೧ ಇಂಚು ಎತ್ತರವುಳ್ಳ ಈ ರಥಕ್ಕೆ ೧೯೦ಕಿಲೋ ಬೆಳ್ಳಿ ಹಾಗೂ ೧೧ ಕಿಲೋ ಚಿನ್ನವನ್ನು ಅಳವಡಿಸಲಾಗಿದೆ. ಎಂಟು ಮುಕ್ಕಾಲು ಕೆಜಿ ಚಿನ್ನವನ್ನು ಹಾಗೂ ಒಂದು ಕೋಟಿ ೬೪ಲಕ್ಷದ ೫೨ಸಾವಿರ ರೂ.ಗಳಷ್ಟು ಮೊತ್ತವನ್ನು ಭಕ್ತರೇ ನೀಡಿದ್ದಾರೆ. ಮರದ ರಥವನ್ನು ಶಿಲ್ಪಿಗಳಾದ ಉಡುಪಿಯ ದಿ.ಕೃಷ್ಣಮೂರ್ತಿ ಆಚಾರ್ಯ ಅವರ ಮಗ ಸುದರ್ಶನ ಆಚಾರ್ಯರು, ಸ್ವರ್ಣ ರಥದ ರಚನೆಯನ್ನು ಸ್ವರ್ಣ ಜುವೆಲ್ಲರ‍್ಸ್ ಉಡುಪಿ ಸಂಸ್ಥೆ ತನ್ನ ತಯಾರಿಕ ಘಟಕವಾದ ಸ್ವರ್ಣೋದ್ಯಮದಲ್ಲಿ ತಯಾರಿಸಿದ್ದು ಸಂಸ್ಥೆಯ ನಿರ್ದೇಶಕರಾದ ಗುಜ್ಜಾಡಿ ರಾಮದಾಸ ನಾಯಕ್‌ರವರು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ದೇಗುಲದ ಆಡಳಿತಾಧಿಕಾರಿ ನಿಂಗಯ್ಯ ವಿವರಿಸಿದರು.
ಸರಕಾರದ ಉಸ್ತುವಾರಿಯಲ್ಲಿ ಸಿದ್ಧವಾದ ಮೊದಲ ಚಿನ್ನದ ರಥ ಇದಾಗಿದೆ. ಸರಕಾರದ ನಿರ್ದೇಶನದಂತೆಯೇ ಎನ್‌ಐಟಿಕೆಯವರಲ್ಲಿ ಅಭಿಪ್ರಾಯ ಕೇಳಲಾಗಿ ಎಲೆಕ್ಟ್ರೋಪ್ಲೇಟ್ , ಎಲೆಕ್ಟ್ರೋ ಪ್ರೇಮಿಂಗ್ಸ್ ಮತ್ತು ಲ್ಯಾಮಿನೇಶನ್ ವಿಧಾನದಲ್ಲಿ ಲ್ಯಾಮಿನೇಶನ್ ಮೂಲಕವೇ ತಯಾರಿಸುವುದೆಂದು ಅಭಿಪ್ರಾಯ ಬಂದಂತೆ ಟೆಂಡರ್ ಕರೆಯಲಾಗಿದ್ದು ಉಡುಪಿಯ ಸ್ವಣೋದ್ಯಮದವರು ಯಶಸ್ವಿ ಬಿಡ್ಡುದಾರರಾಗೊ ಟೆಂಡರ್‌ನ್ನು ಪಡೆದಿರುತ್ತಾರೆ. ಮಂಗಳೂರಿನ ಎನ್‌ಐಟಿಕೆಯ ಅನೇಕ ವಿಭಾಗದ ತಜ್ಞರನ್ನೊಳಗೊಂಡ ತಂಡದ ಮೂಲಕ ಈ ರಥದ ಕಾಮಗಾರಿಯು ನಡೆದಿದ್ದು ಪ್ರತಿಹಂತದಲ್ಲೂ ಗುಣಮಟ್ಟ ಹಾಗೂ ತೂಕದ ದೃಢೀಕರಣದೊಂದಿಗೆ ರಥವು ನಿರ್ಮಾಣವಾಗಿರುತ್ತದೆ, ಒಟ್ಟು ಎರಡು ಹಂತಗಳಲ್ಲಿ ಮತ್ತೇ ಪುನಃ ಆಯ್ಕೆ ಮಾಡಲ್ಪಟ್ಟ ಚಿನ್ನದ ಲ್ಯಾಮಿನೇಶನ್ ಮಾಡಲ್ಪಟ್ಟ ೨ ಭಾಗಗಳನ್ನು ಪುನಃ ಕರಗಿಸಿ ಗುಣಮಟ್ಟ ಹಾಗೂ ತೂಕದ ದೃಢೀಕರಣವನ್ನು ಮಾಡಿಸಿ ನಂತರ ಮರದ ರಥಕ್ಕೆ ಈ ತಗಡುಗಳನ್ನು ಜೋಡಿಸಿ ರಥ ನಿರ್ಮಾಣ ಮುಗಿಸಲಾಗಿದೆ ಎಂದು ಅವರು ತಿಳಿಸಿದರು.
ಒಟ್ಟು ೬೫೦ ಬೆಳ್ಳಿ ಭಾಗಗಳಲ್ಲಿ ಚಿನ್ನದ ಉಬ್ಬು ಶಿಲ್ಪಗಳನ್ನು ಮಾಡಿ ಅದಕ್ಕೆ ಚಿನ್ನದ ಲ್ಯಾಮಿನೇಶನ್ ಮಾಡಲಾಗಿದೆ. ಅಷ್ಟ ದಿಕ್ಪಾಲಕರು, ಎರಡು ಬಗೆಯ ಆರಾಧನಾ ವಿಧಾನವುಳ್ಳ ನವದುರ್ಗೆಯರ ಒಟ್ಟು ೧೮ ಮೂರ್ತಿಗಳು, ಅಷ್ಟ ಲಕ್ಷ್ಮಿಗಳ ಮೂರ್ತಿಯನ್ನು ಈ ರಥಕ್ಕೆ ಅಳವಡಿಸಲಾಗಿದ್ದು ಹಲವಾರು ಅಪೂರ್ವ ಶಿಲ್ಪಗಳನ್ನು ಈ ರಥಕ್ಕೆ ಅಳವಡಿಸಿ ನಿರ್ಮಿಸಿರುವುದು ರಥದ ಸೌಂದರ್ಯವನ್ನು ಹೆಚ್ಚಿಸಿದೆ. ದೇಗುಲದ ಒಳಗೆ ಇರುವ ಭದ್ರತಾ ಕೊಠಡಿಯಲ್ಲಿ ರಥವನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು ಎಂದು ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ವಿವರಿಸಿದರು.
ತಾ.೮ರಂದು ಚಿನ್ನದ ರಥದ ಸಮರ್ಪಣೆಯನ್ನು ಧಾರ್ಮಿಕ ದತ್ತಿ ಸಚಿವರಾದ ಸನ್ಮಾನ್ಯ ಟಿ.ಬಿ.ಜಯಚಂದ್ರ ದೇಗುಲಕ್ಕೆ ಮಾಡಲಿದ್ದು, ಕೃಷ್ಣಾಪುರ, ಪಲಿಮಾರು ಮಠಾಧೀಶರು, ಸಚಿವರಾದ ಸದಾನಂದ ಗೌಡ, ರಮಾನಾಥ ರೈ, ಅಭಯಚಂದ್ರ, ಆರ್. ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಸಾಂಸದ ನಳಿನ್ ಕುಮಾರ್, ಮೊಯ್ದಿನ್ ಬಾವಾ, ಜೆ.ಆರ್.ಲೋಬೋ, ಎಂ.ಕೃಷ್ಣಪ್ಪ, ಐವನ್ ಡಿಸೋ, ದಯಾನಂದ ರೆಡ್ಡಿ, ಡಿ.ಯು.ಮಲ್ಲಿಕಾರ್ಜುನ, ಕರ್ನಾಟಕ ಬ್ಯಾಂಕಿನ ಪಿ.ಜಯರಾಮ ಭಟ್, ಕಟೀಲು ಸುರೇಶ್ ರಾವ್, ಮಾಲಾಡಿ ಅಜಿತ್ ಕುಮಾರ ರೈ, ಸುಧೀರಪ್ರಸಾದ ಶೆಟ್ಟಿ ಮುಂತಾದವರು   ಭಾಗವಹಿಸಲಿದ್ದಾರೆ. ಅಂದು ಲಿಂಗಪ್ಪ ಸೇರಿಗಾರಿಂದ ನಾಗಸ್ವರ ವಾದನ, ವಿದ್ಯಾಭೂಷಣರಿಂದ ಭಕ್ತಿ ಸಂಗೀತ, ಸುಬ್ರಹ್ಮಣ್ಯ ಭಟ್ ಗುಂಡಿಬೈಲುರಿಂದ ಅಷ್ಟಾವಧಾನ, ವಿದ್ಯಾಶ್ರೀಧರ ಕೃಷ್ಣಬಳಗದಿಂದ ನೃತ್ಯಾರ್ಚನೆ ನಡೆಯಲಿದೆ.