Tuesday, January 27, 2015

katil chinnada rata samarpane and kudru brahmakalasha









ಸಂಮಾನ

ಕಟೀಲು ಮಲ್ಲಿಗೆಅಂಗಡಿ ಭ್ರಾಮರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ನಡೆದ ಯಕ್ಷಗಾನ ಸಂದರ್ಭ ಬಪ್ಪನಾಡು ಯಕ್ಷಗಾನ ಮೇಳದ ಕಲಾವಿದರಾದ ಸುಂದರ ಬಂಗಾಡಿ, ರಾಧಾಕೃಷ್ಣ ನಾವಡರನ್ನು ಸಂಮಾನಿಸಲಾಯಿತು. ಈ ಸಂದರ್ಭ ಕಟೀಲಿನ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶೀಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿಗಳಾದ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಧನಂಜಯ ಮಟ್ಟು, ಕೇಶವ ಕಟೀಲು, ತಿಮ್ಮಪ್ಪ ಕೋಟ್ಯಾನ್, ನವೀನ್‌ಕುಮಾರ್ ಕಟೀಲು, ಶಶೀಂದ್ರ ಅಮೀನ್, ಬಪ್ಪನಾಡು ಮೇಳದ ವಿನೋದ್ ಕುಮಾರ್, ಗೀತಾ ಸನಿಲ್, ಭ್ರಾಮರೀ ಫ್ರೆಂಡ್ಸ್‌ನ ಗಣೇಶ್ ಆಚಾರ್ಯ, ದುರ್ಗಾಪ್ರಸಾದ್ ಶೆಟ್ಟಿ ಮತ್ತಿತರರಿದ್ದರು.

Friday, January 9, 2015

ಕಟೀಲಿನಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಆರಂಭ



ಯಕ್ಷಗಾನ ಸಕಾಲಿಕ ಸಾರ್ವಕಾಲಿಕವಾಗಿರಲಿ - ಡಾ. ಚಿನ್ನಪ್ಪ ಗೌಡ
ಕಟೀಲು : ಕಾಲದ ಒತ್ತಡವನ್ನು ನಿಭಾಯಿಸಿಕೊಂಡು ಯಕ್ಷಗಾನವನ್ನು ಸಕಾಲಿಕವಾಗಿ ಸಾರ್ವಕಾಲಿಕವಾಗಿಸಬೇಕು. ಯಕ್ಷಗಾನಕ್ಕೆ ಒಪ್ಪುವ ಹಾಗೆ ಬದಲಾವಣೆ ಅಗತ್ಯವಿದೆ ಎಂದು ಮಂಗಳೂರು ವಿವಿಯ ಡಾ. ಚಿನ್ನಪ್ಪ ಗೌಡ ಹೇಳಿದರು. 
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಕಾಡಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿ ಎರಡು ಮೂರು ಜಿಲ್ಲೆಗಳಲ್ಲಿ ಹುಟ್ಟಿಕೊಂಡ ಯಕ್ಷಗಾನ ಇವತ್ತು ವಿಶ್ವವ್ಯಾಪಿಯಾಗಿದೆ. ಇಲ್ಲಿನ ವೀರಪ್ಪ ಮೊಯ್ಲಿಯಂತಹವರೂ ತಾನು ಯಕ್ಷಗಾನಕ್ಕೆ ಗೆಜ್ಜೆ ಕಟ್ಟಿದ್ದೇನೆ ಎಂದು ಹೆಮ್ಮೆ ಪಡುತ್ತಾರೆ. ಆದರೆ ಉತ್ತರಕರ್ನಾಟಕದಲ್ಲಿ ರಾಜಕೀಯ ಹಾಗೂ ಜನರ ಅಸಡ್ಡೆಯ ಕಾರಣದಿಂದ ಮೂಡಲಪಾಯ, ದೊಡ್ಡಾಟ, ಸಣ್ಣಾಟದಂತಹ ಪ್ರಕಾರಗಳು ಬೆಳವಣಿಗೆ ಕಂಡಿಲ್ಲ ಎಂದು ವಿಷಾದಿಸಿದರು. 
ಆಶಯ ಭಾಷಣ ಮಾಡಿದ ಅಕಾಡಮಿ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಯಕ್ಷಗಾನ ರಂಗಪ್ರಾಕಾರವನ್ನು ಇನ್ನಷ್ಟು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿರಾಜ್ಯಾದ್ಯಂತ ೧೬ಕಡೆಗಳಲ್ಲಿ ರಂಗಸಂಭ್ರಮವನ್ನು ನಡೆಸುತ್ತಿದ್ದೇವೆ ಎಂದರು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಸಾಪದ ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಶ್ರೀಮತಿ ಗೋಪಿಕಾ ಮಯ್ಯ, ರಮೇಶ್ ಭಟ್, ವಾಸುದೇವ ಶೆಣೈ ಮತ್ತಿತರರಿದ್ದರು. 
ಅಕಾಡಮಿ ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ ಸ್ವಾಗತಿಸಿದರು. ಸದಸ್ಯ ತಾರಾನಾಥ ವರ್ಕಾಡಿ ವಂದಿಸಿದರು. ಸುಮಂಗಲಾ ರತ್ನಾಕರ್ ರಾವ್ ಕಾರ‍್ಯಕ್ರಮ ನಿರೂಪಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ಈ ರಂಗ ಸಂಭ್ರಮ ನಡೆಯುತ್ತಿದೆ.
ಶುಕ್ರವಾರ ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ಪಂಚವಟಿ, ಬೆಳಗಾವಿ ಅಥಣಿಯ ವೀರಭದ್ರೇಶ್ವರ ತಂಡದಿಂದ ಶ್ರೀ ಕೃಷ್ಣ ಪಾರಿಜಾತ, ಶಿವಮೊಗ್ಗ ಶ್ರೀ ಸಾಯಿ ಕಲಾ ಪ್ರತಿಷ್ಟಾನದಿಂದ ಬಡಗುತಿಟ್ಟು ಯಕ್ಷಗಾನ ದಕ್ಷಯಜ್ಞ ಪ್ರದರ್ಶನಗೊಂಡಿತು.

ಮಕ್ಕಳ ಯಕ್ಷಗಾನ ವಿಚಾರಗೋಷ್ಟಿ
ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿ ಮೂಡಿಸಿದರೆ ಅವರಲ್ಲಿ ಪುರಾಣ ಕಥೆಗಳ ವಿಚಾರ ತಿಳಿದು ಸಂಸ್ಕಾರ ತಿಳಿಯುತ್ತದೆ. ಆದರೆ ಯಕ್ಷಗಾನ ಕಲಿಕೆಯ ಉದ್ದೇಶವಿಟ್ಟುಕೊಂಡು ಮಕ್ಕಳಲ್ಲಿ ಹಣದ ಆಸೆ, ಪ್ರಶಸ್ತಿಯ ಆಮಿಷ ಒಡ್ಡಬಾರದು ಎಂದು ಕಟೀಲು ದುರ್ಗಾಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ರಂಗಸಂಭ್ರಮದಲ್ಲಿ ಕಲಾ ಸಂರಕ್ಷಣೆಯಲ್ಲಿ ಮಕ್ಕಳ ಮೇಳದ ಪಾತ್ರದ ಕುರಿತು ಉಪನ್ಯಾಸ ನೀಡಿದರು.  
ಖ್ಯಾತ ಕಲಾವಿದ ಕೆ.ಗೋವಿಂದ ಭಟ್ ಮಕ್ಕಳಲ್ಲಿ ಯಕ್ಷಗಾನ ಆಸಕ್ತಿ ಬೆಳೆಸಲು ಹೆತ್ತವರ, ಶಾಲೆಗಳ ಪಾತ್ರ ಪ್ರಮುಖವಾದುದು ಎಂದರು.

ಮಕ್ಕಳ ಮೇಳದ ಹೆಜ್ಜೆ ಗುರುತುಗಳು ಕುರಿತು ಡಾ.ದಿನಕರ ಪಚ್ಚನಾಡಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಂ.ಆರ್. ವಾಸುದೇವ ಸಾಮಗ ಮಾತನಾಡಿ ಶಿಕ್ಷಣದಂತೆ ಯಕ್ಷಗಾನವೂ ವ್ಯಾಪಾರೀಕರಣವಾಗಿದೆ. ಮಕ್ಕಳಲ್ಲಿ ಯಕ್ಷಗಾನ ವೇಷ ಹಾಕಿಸುವುದಷ್ಟೇ ಅಲ್ಲ, ಅಧ್ಯಯನ ಮಾಡಿಸಬೇಕು ಎಂದರು.
ಪಾತಾಳ ವೆಂಕಟರಮಣ ಭಟ್, ಡಾ.ಶ್ರೀಧರ ಭಂಡಾರಿ, ಕರ್ಗಲ್ಲು ವಿಶ್ವೇಶ್ವರ ಭಟ್, ದೇವಾನಂದ ಭಟ್ ಬೆಳುವಾಯಿ, ಗಿರೀಶ ನಾವಡ, ಮಹಾಬಲೇಶ್ವರ ಆಚಾರ‍್ಯ ಚರ್ಚೆಯಲ್ಲಿ ಭಾಗವಹಿಸಿದ್ದರು. ಗಾಯತ್ರೀ ಎಸ್ ಉಡುಪ ಕಾರ‍್ಯಕ್ರಮ ನಿರೂಪಿಸಿದರು. 

ಇಂದು(೧೦) ಹವ್ಯಾಸಿ ಯಕ್ಷಗಾನ, ಮೂಡಲಪಾಯ, ಸಣ್ಣಾಟ, ಸೂತ್ರದ ಬೊಂಬೆಯಾಟ, ಎಲ್‌ಸಿಡಿ ಪ್ರದರ್ಶನ ಹಾಗೂ ವಿಚಾರಗೋಷ್ಟಿಗಳಿವೆ.

Tuesday, January 6, 2015

ಜ.೯-೧೧ : ಕಟೀಲಿನಲ್ಲಿ ಯಕ್ಷಗಾನ ಬಯಲಾಟ ಸಂಭ್ರಮ

ಮಕ್ಕಳ, ಹವ್ಯಾಸಿ, ಮಹಿಳಾ ಯಕ್ಷಗಾನ ಬಗ್ಗೆ ವಿಚಾರಗೋಷ್ಟಿ.
ಮೂರು ದಿನಗಳ ಸಂಭ್ರಮ
ತೆಂಕು ಬಡಗು ಮೂಡಲಪಾಯ ಯಕ್ಷಗಾನ, ಸಣ್ಣಾಟ, ಬೊಂಬೆಯಾಟ, ಸಂಗ್ಯಾಬಾಳ್ಯ ಪ್ರದರ್ಶನ
ಐವತ್ತಕ್ಕೂ ಹೆಚ್ಚು ವಿದ್ವಾಂಸರ ಉಪಸ್ಥಿತಿಯಲ್ಲಿ ೬ವಿಚಾರ ಗೋಷ್ಟಿಗಳು

ಕಟೀಲು : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಆಶ್ರಯದಲ್ಲಿ ಜನವರಿ ೯ರಿಂದ ೧೧ರತನಕ ಕಟೀಲಿನಲ್ಲಿ ಯಕ್ಷಗಾನ ಬಯಲಾಟ ಸಂಭ್ರಮ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ನಡೆಯುವ ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ, ಹವ್ಯಾಸಿ ಯಕ್ಷಗಾನದ ಪರಿಕಲ್ಪನೆಯ ಈ ಯಕ್ಷಗಾನ ಬಯಲಾಟ ಸಂಭ್ರಮವನ್ನು ಅಕಾಡಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ, ವಾಸುದೇವ ಆಸ್ರಣ್ಣ, ಕಬ್ಬಿನಾಲೆ ವಸಂತ ಭಾರದ್ವಾಜ, ನಿಂಗಯ್ಯ, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ ಮುಂತಾದವರ ಉಪಸ್ಥಿತಿಯಲ್ಲಿ ಡಾ. ಚಿನ್ನಪ್ಪ ಗೌಡ ಉದ್ಘಾಟಿಸಲಿದ್ದಾರೆ.
ಅಂದು ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ಪಂಚವಟಿ, ಬೆಳಗಾವಿ ಅಥಣಿಯ ವೀರಭದ್ರೇಶ್ವರ ತಂಡದಿಂದ ಶ್ರೀ ಕೃಷ್ಣ ಪಾರಿಜಾತ, ಶಿವಮೊಗ್ಗ ಶ್ರೀ ಸಾಯಿ ಕಲಾ ಪ್ರತಿಷ್ಟಾನದಿಂದ ಬಡಗುತಿಟ್ಟು ಯಕ್ಷಗಾನ ದಕ್ಷಯಜ್ಞ ನಡೆಯಲಿದೆ. ಅಂದು ಮಕ್ಕಳ ಮೇಳದ ಹೆಜ್ಜೆ ಗುರುತುಗಳು ಮತ್ತು ಕಲಾ ಸಂರಕ್ಷರಣೆಯಲ್ಲಿ ಮಕ್ಕಳ ಮೇಳದ ಪಾತ್ರ ಕುರಿತು ವಿಚಾರಗೋಷ್ಟಿ ನಡೆಯಲಿದ್ದು ಡಾ.ದಿನಕರ ಪಚ್ಚನಾಡಿ, ಶ್ರೀಹರಿನಾರಾಯಣದಾಸ ಆಸ್ರಣ್ಣ ಉಪನ್ಯಾಸ ನೀಡಲಿದ್ದಾರೆ. ವಾಸುದೇವ ಸಾಮಗ, ಗೋವಿಂದ ಭಟ್ ಮುಂತಾದ ತಜ್ಞರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಕಾಡಮಿಯ ಸದಸ್ಯ ತಾರಾನಾಥ ವರ್ಕಾಡಿ ತಿಳಿಸಿದ್ದಾರೆ.
ತಾ. ೧೦ರಂದು ಬೆಳ್ಮಣ್ಣು ಯಕ್ಷಮಿತ್ರರಿಂದ ಹವ್ಯಾಸಿ ಯಕ್ಷಗಾನ ಸುದರ್ಶನ ವಿಜಯ, ಬೆಳಗಾಂ ಶ್ರೀ ಸದಾಶಿವ ಮಹಿಳೆಯರ ಸಣ್ಣಾಟ ಸಂಘ ಸಾಲಹಳ್ಳಿಯವರಿಂದ ಸಣ್ಣಾಟ ಸಂಗ್ಯಾ ಬಾಳ್ಯಾ, ತುಮಕೂರು ಬಸವೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಮೂಡಲಪಾಯ ಯಕ್ಷಗಾನ ಭಕ್ತ ಪ್ರಹ್ಲಾದ, ಮಂಡ್ಯ ನಾಗಮಂಗಲದ ಕಾಳಿಕಾಂಬಾ ಪ್ರಸನ್ನ ಯುವಜನ ಸೂತ್ರದ ಬೊಂಬೆಮೇಳದವರಿಂದ ಸೂತ್ರದ ಬೊಂಬೆಯಾಟ ಕನಕಾಂಗಿ ಕಲ್ಯಾಣ, ಕುಳಾಯಿ ಯಕ್ಷಮಂಜೂಷದವರಿಂದ ವಿಶ್ವವ್ಯಾಪಿ ಯಕ್ಷಗಾನದ ಅಪೂರ್ವ ಎಲ್‌ಸಿಡಿ ಪ್ರದರ್ಶನ ನಡೆಯಲಿದೆ. 
ಅಂದು ಹರಕೆ ಆಟಗಳು ಕಲಾತ್ಮಕತೆ ಮತ್ತು ಕಲಾ ಸಂರಕ್ಷಣೆ ಹಾಗೂ ಹವ್ಯಾಸಿ ಯಕ್ಷಗಾನ ಸಾಧ್ಯತೆ ಮತ್ತು ಸಮಸ್ಯೆ ಬಗ್ಗೆ ವಿಚಾರಗೋಷ್ಟಿಯಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಭಾಸ್ಕರ ರೈ ಕುಕ್ಕುವಳ್ಳಿ ಉಪನ್ಯಾಸ ನೀಡಲಿದ್ದು, ಕಮಲಾದೇವಿಪ್ರಸಾದ ಆಸ್ರಣ್ಣ, ಚಂದ್ರಶೇಖರ ದಾಮ್ಲೆ ಮುಂತಾದ ತಜ್ಞರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ತಾ.೧೧ರಂದು ಮಹಿಳಾ ಯಕ್ಷಗಾನ ಉಗಮ ಮತ್ತು ವಿಕಾಸ ಹಾಗೂ ಮಹಿಳಾ ಮೇಳ ಕಲಾತ್ಮಕತೆ ಮತ್ತು ಕಲಾ ಪ್ರಸರಣದ ಬಗ್ಗೆ ಡಾ. ನಾಗವೇಣಿ ಮಂಚಿ, ವಿದ್ಯಾ ಕೋಳ್ಯೂರು ಉಪನ್ಯಾಸ ನೀಡಿಲಿದ್ದಾರೆ. ಲೀಲಾವತೀ ಬೈಪಾಡಿತ್ತಾಯ, ವಿದ್ಯಾ ರಮೇಶ್ ಭಟ್ ಮುಂತಾದ ಸಾಧಕ ಮಹಿಳೆಯರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಅಂದು ಪ್ರಸಿದ್ಧ ಕಲಾವಿದರಿಂದ ತಾಳಮದ್ದಲೆ ಕರ್ಣಾರ್ಜುನ, ಉಜಿರೆ ಬಿಂದು ಹವ್ಯಾಸಿ ಮಹಿಳಾ ತಂಡದಿಂದ ತೆಂಕುತಿಟ್ಟು ಯಕ್ಷಗಾನ ನರಕಾಸುರ ಮೋಕ್ಷ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಪ್ರಭಾಖರ ಜೋಷಿ ಶಿಖರೋಪನ್ಯಾಸ ನೀಡಲಿದ್ದು, ಸಚಿವ ಅಭಯಚಂದ್ರ, ನಳಿನ್ ಕುಮಾರ್, ಪಂಜ ಭಾಸ್ಕರ ಭಟ್, ಡಾ.ನಾರಾಯಣ ಶೆಟ್ಟಿ, ಎಂ.ಎಲ್.ಸಾಮಗ, ಕಿಶನ್ ಹೆಗ್ಡೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.

Friday, January 2, 2015

ಕಟೀಲು: ಹಳೆ ವಿದ್ಯಾರ್ಥಿಗಳ ಸಂಗಮೋತ್ಸವ

ಕಲಿತ ವಿದ್ಯಾಲಯದ ಋಣ ದೊಡ್ಡದು - ಮೋಹನ ಆಳ್ವ
ಕಟೀಲು : ಕಲಿತ ಶಾಲೆ, ಸಮಾಜದ ಋಣವನ್ನು ಯಾವುದಾದರೊಂದು ವಿಧದಲ್ಲಿ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಡಾ.ಮೋಹನ ಆಳ್ವ ಹೇಳಿದರು.
ಶುಕ್ರವಾರ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಂಗಮೋತ್ಸವ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸಂಮಾನಿಸಿ ಮಾತನಾಡಿದರು.
ಪ್ರೌಢಶಾಲೆಯಲ್ಲಿ ಸೇವೆಗೈದು ನಿವೃತ್ತರಾದ ಉಮೇಶ್ ರಾವ್ ಎಕ್ಕಾರು, ಕೇಶವ ಹೊಳ್ಳ, ಸುಂದರ ಪೂಜಾರಿ, ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಸುರೇಶ್ ಭಟ್, ಸತೀಶ್ ಭಟ್, ಕೃಷ್ಣ ರಾವ್, ಸದಾನಂದ ಆಸ್ರಣ್ಣ, ಕೆ.ಆರ್.ಪ್ರಭು, ಸುಂದರ ಸೇರಿಗಾರ, ಜನಾರ್ದನ, ವಾಸು ಪೂಜಾರಿ ಮುಂತಾದವರನ್ನು ಕ್ರೀಡಾ ಸಾಧಕರನ್ನು ಸಂಮಾನಿಸಲಾಯಿತು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೆ ಮೌಲ್ಯಾಧಾರಿತ ಶಿಕ್ಷಣವನ್ನು ಕಟೀಲಿನ ಶಾಲಾ ಕಾಲೇಜುಗಳು ನೀಡುತ್ತಿವೆ ಎಂದು ದಕ್ಷಿಣ ಕನ್ನಡ ಸಂಸದ  ನಳಿನ್ ಕುಮಾರ್ ಕಟೀಲು ಹೇಳಿದರು.
ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಕಟೀಲಿನ ವಿದ್ಯಾ ಸಂಸ್ಥೆಗಳ ಕೊಡುಗೆ ಮಹತ್ತರವಾದುದು ಎಂದರು.
ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕರ್ನಾಟಕ ಸರಕಾರದ ರಾಜ್ಯ ಸಂಪರ್ಕಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು, ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಉದ್ಯಮಿಗಳಾದ ಉದಯ ಕುಮಾರ್ ದುಬೈ, ಗಿರೀಶ್ ಶೆಟ್ಟಿ, ಸಂದೇಶ್ ಕುಮಾರ್ ಶೆಟ್ಟಿ, ಆದರ್ಶ ಶೆಟ್ಟಿ ಎಕ್ಕಾರು, ದಿವಾಕರ, ಕೇಶವ ಕಟೀಲು, ಆನಂದ ಶೆಟ್ಟಿ ಎಕ್ಕಾರು, ಪ್ರದ್ಯುಮ್ನ ರಾವ್, ಜಿಲ್ಲಾ ಪಂ. ಸದಸ್ಯ ಈಶ್ವರ್ ಕಟೀಲ್,  ಕಟೀಲು ಪ್ರೌಢ ಶಾಲಾ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಧುಕರ ಅಮೀನ್, ಸುಬ್ರಹ್ಮಣ್ಯ ಪ್ರಸಾದ್, ಪ.ಪೂ. ಕಾಲೇಜು ಪ್ರಾಚಾರ‍್ಯರಾದ ಎಂ. ಬಾಲಕೃಷ್ಣ ಶೆಟ್ಟಿ, ಜಯರಾಮ ಪೂಂಜಾ, ಉಪಪ್ರಾಚಾರ‍್ಯ ಕೆ.ವಿ.ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವನಮಾಲ, ಮತ್ತಿತರರು  ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಹರಿನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಮತ್ತು ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

Thursday, January 1, 2015

ಕಟೀಲು ಪದವಿ ಕಾಲೇಜು ರಜತ ಮಹೋತ್ಸವ

ಕೇವಲ ಅಂಕಗಳು ಮಾತ್ರ ಮಾನದಂಡವಾಗಿರಬಾರದು - ವಿನಯ ಹೆಗ್ಡೆ
ಕಿನ್ನಿಗೋಳಿ : ದೇಶದ ಹೆಮ್ಮೆಯ ಸಂಸ್ಕೃತ ಭಾಷೆಯನ್ನು ಕಲಿಸುವ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಬೇಕು. ಕಲಿಕೆಯಲ್ಲಿ ಅಂಕಗಳಷ್ಟೇ ಮಾನದಂಡವಾಗಿರದೆ ಎಲ್ಲ ವಿಚಾರಗಳಲ್ಲೂ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯ ಅಧ್ಯಕ್ಷ ವಿನಯ ಎಸ್. ಹೆಗ್ಡೆ ಹೇಳಿದರು.
ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿಹಬ್ಬ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಭಾಷಾ ಮಾಧ್ಯಮ ಹಾಗೂ ಅಂಕಗಳ ಬಗ್ಗೆ ಪೋಷಕರಲ್ಲಿ ಕೀಳರಿಮೆ ಸರಿಯಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಹೇಳಿದರು.
ಕಲಿತ ವಿದ್ಯಾಲಯವನ್ನು ಮರೆಯದೆ ಬಂದು ಹೋಗುವ ಕರ್ತವ್ಯ ವಿದ್ಯಾರ್ಥಿಗಳದ್ದು ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮೊಕ್ತೇಸರ ವಾಸುದೇವ ಆಸ್ರಣ್ಣ, ಸಾಂಸದ ನಳಿನ್‌ಕುಮಾರ್ ಕಟೀಲು, ಕಟೀಲು ದೇವಳ ಆಡಳಿತಾಧಿಕಾರಿ ನಿಂಗಯ್ಯ, ಮುಂಬೈ ಉದ್ಯಮಿ ಎಕ್ಕಾರು ಕೃಷ್ಣ ಡಿ.ಶೆಟ್ಟಿ, ಕುಸುಮೋದರ ಶೆಟ್ಟಿ, ದ.ಕ. ಜಿಲ್ಲಾ ಪಂ. ಸದಸ್ಯ ಈಶ್ವರ ಕಟೀಲ್, ಮುಂಬೈ ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಪದ್ಮಲತಾ ಉಪಸ್ಥಿತರಿದ್ದರು.
ಪ್ರಾಚಾರ‍್ಯ ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕ್ಷೇಮಪಾಲನಾಧಿಕಾರಿ ಡಾ. ಕೃಷ್ಣ ಕಾಂಚನ್ ಹಾಗೂ ಸ್ನಾತಕೋತ್ತರ ಸಂಸ್ಕೃತ ಕಾಲೇಜು ಪ್ರಾಚಾರ‍್ಯ ಪದ್ಮನಾಭ ಮರಾಠೆ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕ ಎಂ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.