Friday, July 25, 2014

ಕಟೀಲು ಪದವಿ ಕಾಲೇಜು ಸಂಘಗಳ ಉದ್ಘಾಟನೆ

ವಿದ್ಯಾರ್ಥಿ ಸಂಘಟನೆಯಲ್ಲಿ ವಿದ್ಯಾರ್ಥಿಯೊಬ್ಬನ ಬೌದ್ಧಿಕ, ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನ ಬೆಳಗುತ್ತದೆ. ಬದಲಾವಣೆಗೆ ಒಗಿಕೊಳ್ಳಬೇಕಾದ ಈ ಕಾಲದಲ್ಲಿ ಬದುಕಿಗೆ ಪೂರಕವಾದ ಶಿಕ್ಷಣ ನೀಡಬೇಕಾಗಿದೆ. ವಿವಿಧ ಕೋನಗಳಲ್ಲಿ ಚಿಂತಿಸುವ ಅದಮ್ಯ ಶಕ್ತಿ ವಿದ್ಯಾರ್ಥಿಗಳಲ್ಲಿದೆ ಅದನ್ನು ಒರೆಗೆ ಹಚ್ಚುವ ಕೆಲಸ ಶಿಕ್ಷಕರಿಂದಾಗಬೇಕು ಎಂದು ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ರಾಜಶೇಖರ್ ಹೆಬ್ಬಾರ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ
ದೇವಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಚಟುವಟಿಕೆಗಳ ಸಂಘಗಳನ್ನು ಶನಿವಾರ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳ ಆಡಳಿತಾಧಿಕಾರಿ ನಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮಗೆ ಸಿಕ್ಕ ಸದವಕಾಶಗಳನ್ನು ಸೂಕ್ತವಾಗಿ ಬಳಸಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜದ ಒಳಿತು ಬಯಸಬೇಕು ಎಂದು ಹೇಳಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಚನಗೈದರು.
ವಿದ್ಯಾರ್ಥಿ ಕ್ಷೇಮಪರಿಪಾಲನಾಧಿಕಾರಿ  ಡಾ| ಕೃಷ್ಣ ಕಾಂಚನ್, ಕಾಲೇಜು ವಿದ್ಯಾರ್ಥಿ ಸಂಘ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಸುದರ್ಶನ್, ಜೊತೆ ಕಾರ್ಯದರ್ಶಿ ಚೈತ್ರಾ ಉಪಸ್ಥಿತರಿದ್ದರು.
ಕಟೀಲು ದೇವಳ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಸರಿತಾ ವಂದಿಸಿದರು.  ವಿದ್ಯಾರ್ಥಿನಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. 

ದೇವಳ ಪದವಿ ಪೂರ್ವ ಕಾಲೇಜಿನ ವಿವಿಧ ಪಠ್ಯಪೂರಕ ಸಂಘ ಚಟುವಟಿಕೆಗಳ ಉದ್ಘಾಟನೆ

ಕಟೀಲು : ಪಾಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ವಿವಿಧ ಪಠ್ಯಪೂರಕ ಸಂಘ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ
 ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಈಶ್ವರ್ ಕಟೀಲ್, ಪ್ರಿನ್ಸಿಪಾಲ್ ಜಯರಾಮ ಪೂಂಜ, ಉಪನ್ಯಾಸಕಿ ಶುಭಾ ರಾವ್ ಮತ್ತಿತರರಿದ್ದರು.
ಈ ಸಂದರ್ಭ ಕಾಲೇಜಿನ ಹಳೇ ವಿದ್ಯಾರ್ಥಿ ಸುಮಿತ್ ಆಚಾರ್ಯ ಕಾಲೇಜಿಗೆ ೨ ಉಚಿತ ಲ್ಯಾಪ್ ಟಾಪ್ ಗಳನ್ನು ಕೊಡುಗೆಯಾಗಿ ನೀಡಿದರು. ತಿಲಕ್ ರಾಜ್ ಹಾಗೂ ಅನುಷಾ ಕಾರ್ಯಕ್ರಮ ನಿರೂಪಿಸಿದರು.


Sunday, July 20, 2014

ಕಟೀಲು ತಾಳಮದ್ದಲೆ ದಶಾಹ ಮಹಾಮಂತ್ರಾರ್ಣವ ಸಮಾರೋಪ

ಆಟ ಕೂಟಗಳಲ್ಲೂ ಕಲಾಸೇವೆ
ಕಟೀಲು : ಕಟೀಲು ಕ್ಷೇತ್ರ ಕೇವಲ ಆಟದಲ್ಲಷ್ಟೇ ಅಲ್ಲದೆ ತಾಳಮದ್ದಲೆಕೂಟಗಳಲ್ಲೂ ಉತ್ತೇಜನ, ಪ್ರೋತ್ಸಾಹದೊಂದಿಗೆ ಯಕ್ಷಗಾನ ಕಲಾಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಖ್ಯಾತ ವೈದ್ಯ ಡಾ.ಪದ್ಮನಾಭ ಕಾಮತ್ ಹೇಳಿದರು.
ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ನಡೆಯುತ್ತಿದ್ದ ತಾಳಮದ್ದಲೆ ಸಪ್ತಾಹದ ದಶಮಾನೋತ್ಸವ ಪ್ರಯುಕ್ತ ದಶಾಹ ಮಂತ್ರ ಮಹಾರ್ಣವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯಕ್ಷಗಾನ ಪ್ರಸಂಗಕರ್ತ, ಸಂಯೋಜಕ, ಕಲಾವಿದ ವಾಸುದೇವ ರಂಗಾಭಟ್, ನಿರೂಪಕ ಶಿಕ್ಷಕ ವಾಸುದೇವ ಶೆಣೈಯವರನ್ನು ಸಂಮಾನಿಸಲಾಯಿತು. ಮೂಡುಬಿದ್ರೆಯ ನಾರಾಯಣ ಪಿ.ಎಂ, ರಾಜೇಶ ಚೌಟ, ಜಗದೀಶ ಶೆಟ್ಟಿ ಮಳವೂರು, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಡಾ.ಭಾಸ್ಕರಾನಂದ ಕುಮಾರ್ ಮತ್ತಿತರರಿದ್ದರು.
ಇತ್ತೀಚಿಗೆ ನಿಧನರಾದ ಕಲಾವಿದರಾದ ಕಡಂದೇಲು ಪುರುಷೋತ್ತಮ ಭಟ್ ಹಾಗೂ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಸ್ಮರಣೆಯನ್ನು ಮಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಶ್ರದ್ಧಾಂಜಲಿ ಅರ್ಪಿಸಿದರು.
ಆಡಳಿತಾಧಿಕಾರಿ ನಿಂಗಯ್ಯ ಸ್ವಾಗತಿಸಿದರು. ಕಮಲಾದೇವಿಪ್ರಸಾದ ಆಸ್ರಣ್ಣ ತಾಳಮದ್ದಲೆ ದಶಾಹದ ಬಗ್ಗೆ ಮಾತನಾಡಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ವಂದಿಸಿದರು. ಭಾನುವಾರ ದಿನವಿಡೀ ರಾಮಾಂಜನೇಯ ಕಾಳಗ ಹಾಗೂ ಭೀಷ್ಮಾರ್ಜುನ ತಾಳಮದ್ದಲೆ ನಡೆಯಿತು.

Wednesday, July 16, 2014

ತ್ರ್ಯಂಬಕರುದ್ರ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಡೆಯುತ್ತಿರುವ ತಾಳಮದ್ದಲೆ ದಶಾಹ ಮಂತ್ರಮಹಾರ್ಣವದ ಪ್ರಯುಕ್ತ ಮಂಗಳವಾರ ತ್ರ್ಯಂಬಕರುದ್ರ ತಾಳಮದ್ದಲೆ ಪ್ರದರ್ಶನಗೊಂಡಿತು.

Friday, July 11, 2014

katil takamaddale dashaha


ಕಟೀಲು ತಾಳಮದ್ದಲೆ ದಶಾಹ ಮಂತ್ರ ಮಹಾರ್ಣವ ಉದ್ಘಾಟನೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ನಡೆಯುವ ತಾಳಮದ್ದಲೆ ಸಪ್ತಾಹದ ದಶಮಾನೋತ್ಸವ ಪ್ರಯುಕ್ತ ಹತ್ತು ದಿನಗಳ ತಾಳಮದ್ದಲೆ ದಶಾಹ ಮಂತ್ರ ಮಹಾರ್ಣವ ಸರಣಿಯನ್ನು ಕಟೀಲು ಸರಸ್ವತೀ ಸದನದಲ್ಲಿ ಖ್ಯಾತ ಕಲಾವಿದ ಬಲಿಪ ನಾರಾಯಣ ಭಾಗವತರು ಉದ್ಘಾಟಿಸಿದರು.
ಶರವು ದೇಗುಲದ ರಾಘವೇಂದ್ರ ಶಾಸ್ತ್ರಿ, ಆಸರೆ ಚಾರಿಟೇಬಲ್ ಟ್ರಸ್ಟ್‌ನ ಡಾ. ಆಶಾಜ್ಯೋತಿ ರೈ, ವಿಫೋರ್ ಮೀಡಿಯಾದ ಲೀಲಾಕ್ಷ ಕರ್ಕೇರ, ದ.ಕ.ಕಸಾಪದ ಪ್ರದೀಪ ಕುಮಾರ ಕಲ್ಕೂರ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಮತ್ತಿತರರಿದ್ದರು. ವಾಸುದೇವ ಶೆಣೈ ನಿರೂಪಿಸಿದರು.  ಬಳಿಕ ಮಂತ್ರ ನಾರಾಯಣ ವರ್ಮದ ವಿಶ್ವರೂಪ ವೃತ್ರೋಪಾಖ್ಯಾನ ಪ್ರಸಂಗದ ತಾಳಮದ್ದಲೆ ನಡೆಯಿತು.  ಇಂದು ಗಾಯತ್ರೀ ಮಾಹಾತ್ಮ್ಯೆ ನಾಳೆ ಅಷ್ಟಾಕ್ಷರೀ ಮಾಹಾತ್ಮ್ಯಂ ಜರಗಲಿದೆ.

Monday, July 7, 2014

ಕಟೀಲಿಗೆ ಮುಖ್ಯ ಕಾರ್ಯದರ್ಶಿ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ದಂಪತಿ ಸಹಿತ ಸೋಮವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಉಡುಪಿ ಜಿಲ್ಲಾಧಿಕಾರಿ ಮುದ್ದು ಮೋಹನ್, ಉಡುಪಿ ಎಸ್‌ಪಿ ಡಾ. ಬೋರಲಿಂಗಯ್ಯ, ಮಂಗಳೂರು ಉಪವಿಭಾಗಾಧಿಕಾರಿ ಪ್ರಶಾಂತ್, ಮುಜರಾಯಿ ಇಲಾಖೆಯ ನಾಗರಾಜ್, ಕಟೀಲು ದೇಗುಲದ ಆಡಳಿತಾಧಿಕಾರಿ ನಿಂಗಯ್ಯ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಪ್ರಬಂಧಕ ವಿಜಯಕುಮಾರ ಶೆಟ್ಟಿ ಮತ್ತಿತರರಿದ್ದರು.

ಕಟೀಲಿನಲ್ಲಿ ನೂತನ ಚಂಡಿಕಾ ಯಾಗಶಾಲೆ

ಕಟೀಲು : ನಂದಿನೀ ನದೀ ಮಧ್ಯದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಕ್ತ ದಾನಿಗಳಿಂದ ರೂ. ೨೦ಲಕ್ಷ ರೂ. ವೆಚ್ಚದಲ್ಲಿ ನೂತನ ಚಂಡಿಕಾ ಯಾಗಶಾಲೆಯನ್ನು ಸೋಮವಾರ ಉದ್ಘಾಟಿಸಲಾಯಿತು. 
ಈವರೆಗೆ ದೇಗುಲದ ಅಂಗಣದಲ್ಲಿ ಚಂಡಿಕಾ ಹಾಗೂ ಇತರ ಸೇವೆಯ ಹೋಮಗಳಾಗುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚುತ್ತಿದ್ದುದರಿಂದ ಭಕ್ತರಿಗೆ ಪ್ರದಕ್ಷಿಣೆ ಬರಲು ಕಷ್ಟವಾಗುತ್ತಿತ್ತು. ಹಾಗಾಗಿ ಕಳೆದ ವರ್ಷ ಅಷ್ಟಮಂಗಳ ಪ್ರಶ್ನೆಯಲ್ಲಿ ವರ್ಷಕ್ಕೆ ಮೂರು ಚಂಡಿಕಾ ಹೋಮ, ಲಲಿತಾ ಪಂಚಮಿ, ದೀಪಾವಳಿ, ರಾಶಿ ಪೂಜೆಯ, ಚೌತಿಯ ಗಣಹೋಮ ಸೇರಿದಂತೆ ದೇವಸ್ಥಾನದ ವತಿಯ ಹೋಮಗಳನ್ನು ಮಾತ್ರ ಅಂಗಣದಲ್ಲಿ ನಡೆಸುವುದು. ಉಳಿದ ಎಲ್ಲ ಹೋಮಗಳನ್ನು ದೇಗುಲದ ವಸಂತ ಮಂಟಪದ ಹಿಂಬದಿಯಲ್ಲಿ ನೂತನ ಯಾಗ ಶಾಲೆ ನಿರ್ಮಿಸಿ ನಡೆಸುವುದೆಂದು ಕಂಡು ಬಂದಿತ್ತು.  ಈ ಹಿನ್ನಲೆಯಲ್ಲಿ ಯಾಗ ಶಾಲೆ ನಿರ್ಮಾಣಗೊಂಡಿದ್ದು, ಪಕ್ಕದಲ್ಲೇ ನದಿ ಹರಿಯುವ ನಯನ ಮನೋಹರ ದೃಶ್ಯ ಕಾಣಬಹುದಾಗಿದೆ.
ದಾನಿಗಳಾದ ಪಿಲಾರುಕಾನ ಕರುಣಾಕರ ಶೆಟ್ಟಿ ಮುಂಬೈ, ಎಕ್ಕಾರು ಶ್ರೀಧರ ಪೂಜಾರಿ, ರಘುವೀರ ಶೆಟ್ಟಿ ಮುಂಬೈ, ಮದ್ಯಬೀಡು ಮೋಹನ ಶೆಟ್ಟಿ ಮುಂಬೈ, ದಿನೇಶ್ ಪೂಜಾರಿ ಸುರತ್ಕಲ್, ರಾಧಾ ಅಮೀನ್ ಬಜಪೆ, ಜಯಾನಂದ ರಾವ್ ಬಜಪೆ, ಪದ್ಮನಾಭ ಪಯ್ಯಡೆ ಮುಂತಾದವರು ಯಾಗಶಾಲೆ ನಿರ್ಮಾಣಕ್ಕೆ ಸಹಕರಿಸಿದ್ದಾರೆ. 
ದಾನಿ ಪಿಲಾರುಕಾನ ಕರುಣಾಕರ ಶೆಟ್ಟಿ ಕುಟುಂಬದ ಚಂಡಿಕಾಹೋಮದ ಮೂಲಕ ಯಾಗ ಶಾಲೆ ಸೋಮವಾರ ಉದ್ಘಾಟನೆಗೊಂಡಿದ್ದು, ಅರ್ಚಕರಾದ ಆಸ್ರಣ್ಣ ಬಂಧುಗಳಾದ ವಾಸುದೇವ, ಲಕ್ಷ್ಮೀನಾರಾಯಣ, ವೇಂಕಟರಮಣ, ಅನಂತಪದ್ಮನಾಭ, ಕಮಲಾದೇವಿಪ್ರಸಾದ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಶಿಬರೂರು, ವೇದವ್ಯಾಸ ತಂತ್ರಿ, ರಘುನಂದನ ಭಟ್, ದೇಗುಲದ ಪ್ರಬಂಧಕ ವಿಜಯ ಕುಮಾರ ಶೆಟ್ಟಿ, ಕಳತ್ತೂರು ರಾಘವೇಂದ್ರ ಭಟ್ ಮತ್ತಿತರರಿದ್ದರು. 

Sunday, July 6, 2014

ಖ್ಯಾತ ದೇವೀ ಪಾತ್ರಧಾರಿ ಕಡಂದೇಲು ಪುರುಷೋತ್ತಮ ಭಟ್ ನಿಧನ

ಪ್ರಸ್ತುತ ಇದ್ದ ಯಕ್ಷಗಾನ ಕಲಾವಿದರಲ್ಲಿ ಅತ್ಯಂತ ಹಿರಿಯರೆನಿಸಿದ್ದ ದೇವಿ ಪಾತ್ರಧಾರಿ ಎಂದೇ ಪ್ರಸಿದ್ಧರಾದ ಇತ್ತೀಚಿಗಷ್ಟೇ ಶತ ಶಂಭ್ರಮವನ್ನು ಕಂಡ ಕಡಂದೇಲು ಪುರುಸೋತ್ತಮ ಭಟ್ಟರು ಜುಲೈ 5ರ ಶನಿವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರಯಲ್ಲಿ ನಿಧನರಾದರು.
ಕಟೀಲಿನಲ್ಲೇ ವಾಸವಿದ್ದ ಪುರುಷೋತ್ತಮ ಭಟ್ಟರಿಗೆ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವ ಸಂದಿದೆ.
ಓಂ ಮಾಯಲೀಲಾ, ಭಾಮಿನೀ ಷಟ್ಪದಿ ಯಲ್ಲಿ ’ಶ್ರೀ ದೇವಿ ಸ್ತುತಿ’ ಕೃತಿ ಪ್ರಕಟಿಸಿದ್ದಾರೆ. ಕಟೀಲು ದುರ್ಗೆಗೆ ಸಂಬಂಧಿಸಿದ ಭಕ್ತಿಗೀತೆ ಗಳ ಸಿಡಿ ಬಿಡುಗಡೆಯಾಗಿದೆ. ಮೂಲ್ಕಿ ಕೊರಕ್ಕೋಡು, ಕೂಡ್ಲು, ಇರಾ ಕುಂಡಾವು ಮೇಳಗಳಲ್ಲಿ ಬಳಿಕ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ ಪುರುಷೋತ್ತಮ ಭಟ್ಟರು ಕಿನ್ನಿಗೋಳಿಯಲ್ಲಿ ೧೯೪೩ರಲ್ಲಿ ಐದು ದಿನದ ದೇವಿ ಮಹಾತ್ಮೆ ನಡೆದಾಗ ದೇವೀ ಪಾತ್ರಧಾರಿಯಾಗಿ ಪ್ರಸಿದ್ಧಿಗೆ ಬಂದವರು. ಇತ್ತೀಚಿನವರೆಗೂ ಮೂರ‍್ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗಿ ಬರುತ್ತಿದ್ದ ಭಟ್ಟರು ದೇವಿ, ಕೈಕೆ, ಶಕುಂತಲೆ, ಅಂಬೆ, ಮಂಡೋದರಿ, ಚಂದ್ರಮತಿ, ಸೀತೆ, ದ್ರೌಪದಿ, ಚಿತ್ರಾಂಗದೆ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. ೧೯೭೦ ರ ಮೇ ೨೫ ರಂದು ಮೇಳಕ್ಕೆ ವಿದಾಯ ಹೇಳಿದರು.
ಪೇಜಾವರ ಮಠದ ಹಿರಿಯ ಸ್ವಾಮೀಜಿ ಒಮ್ಮೆ ಆಟಕ್ಕೆ ಬಂದಿದ್ದರು. ರಾಮ ವನವಾಸಕ್ಕೆ ಹೋಗಬೇಕಾಗಿ ಬರುವ ಸಂದರ್ಭ, ಭಟ್ಟರು ಕೈಕೆಯಾಗಿ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಭಾಗ ಮುಗಿದು ಹೊರಡುವ ವೇಳೆ ಸ್ವಾಮೀಜಿ ಕರೆದು ಹೇಳಿದರು. ’ಕಲ್ಲು ಸಿಗಲಿಲ್ಲ’ ಇಲ್ಲದಿದ್ದರೆ ಹೊಡೆಯುತ್ತಿದ್ದೆ ಎಂದರು. ಬಹುಶಃ ಕೈಕೆ ಪಾತ್ರ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿರಬೇಕು ಎಂದು ಖುಷಿಪಟ್ಟುಕೊಳ್ಳುತ್ತಿzದ್ದ ಪುರುಷೋತ್ತಮ ಭಟ್ಟರು ರಾಮ, ವಲಲ, ಚಂಡಾಮರ್ಕ, ಬ್ರಹ್ಮಕಪಾಲದ ಬ್ರಹ್ಮ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಪುರುಷ ಪಾತ್ರಗಳನ್ನೂ ನಿರ್ವಹಿಸಿದವರು. ಇಂತಹ ಕಡಂದೇಲು ಪುರುಷೋತ್ತಮ ಭಟ್ಟರು ಮುಕ್ಕಾಲು ಶತಮಾನದ ಹಿಂದಿನ ಯಕ್ಷಗಾನ ಪ್ರಪಂಚದ ಸಾಕ್ಷಿಯಾಗಿ ಅನೇಕ ಸಂಗತಿಗಳನ್ನು ಹೇಳುವ ಮಾಹಿತಿ ಕಣಜವಾಗಿದ್ದರು. ಭಟ್ಟರಿಗೆ ೫ ಗಂಡು, ೧ಹೆಣ್ಣು ಮಕ್ಕಳು.



ಕಟೀಲಿನಲ್ಲಿ ರಕ್ತದಾನ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇವಳ, ಕಟೀಲು ದೇವಳ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘ, ಕಟೀಲು ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕ, ನಂದಿನಿ ಯುವಕ ವೃಂದ, ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ, ಶ್ರೀ ರಾಮ ಯುವಕ ವೃಂದ ಗೋಳಿಜೋರ, ದೇವರ ಗುಡ್ಡೆ ಗೇಮ್ಸ್ ಕ್ಲಬ್, ಕಟೀಲು ಫ್ರೆಂಡ್ಸ್ ಕ್ಲಬ್, ಕಾರು-ರಿಕ್ಷಾ ಚಾಲಕ ಮಾಲಕರ ಸಂಘ, ನಂದಿನಿ ಬ್ರಾಹ್ಮಣ ಸಭಾ ಕಟೀಲು, ಶ್ರೀ ದುರ್ಗಾಂಬಿಕಾ ಯುವಕ ಯುವತಿ ಮಂಡಲ ಗಿಡಿಗೆರೆ, ಸಜ್ಜನ ಬಂಧುಗಳು ಕಿನ್ನಿಗೋಳಿ, ಸೌತ್ ಕೆನರಾ ಫೋಟೊಗ್ರಾಫರ‍್ಸ್ ಅಸೋಸಿಯೇಷನ್ ಮೂಲ್ಕಿ ವಲಯ, ಕೊಂಡೇಲ ತರುಣ ವೃಂದ, ಕಟೀಲು ಸ್ಪೋರ್ಟ್ಸ್-ಗೇಮ್ಸ್ ಕ್ಲಬ್, ಯಕ್ಷಗಾನ ಬಯಲಾಟ ಸಮಿತಿ ಕುಕ್ಕಟ್ಟೆ, ಕೆ.ಎಂ.ಸಿ ಆಸ್ಪತ್ರೆ ಹಾಗೂ ವೆನ್ಲಾಕ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಶಿಬಿರ ಕಟೀಲು ಸರಸ್ವತೀ ಸದನದಲ್ಲಿ ಭಾನುವಾರ ನಡೆಯಿತು. ಕಟೀಲು ದೇವಳ ಅರ್ಚಕ ಹರಿನಾರಾಯಣ ಆಸ್ರಣ್ಣ ಹಾಗೂ ಜಿ. ಪಂ. ಸದಸ್ಯ ಈಶ್ವರ್ ಕಟೀಲು ರಕ್ತದಾನ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪನ್ಯಾಸಕ ಕೇಶವ ಎಚ್, ಪ್ರಕಾಶ್ ಆಚಾರ್, ದೇವದಾಸ್ ಮಲ್ಯ, ದಾಮೋದರ್ ಶೆಟ್ಟಿ, ಕೇಶವ ಕರ್ಕೇರ, ನವೀನ್ ಕುಮಾರ್, ೧೧೨ ಮಂದಿ ರಕ್ತದಾನ ಮಾಡಿದರು.