Sunday, August 25, 2013

ಕಟೀಲು: ಚಿನ್ನದ ರಥಕ್ಕೆ ಸ್ವರ್ಣ ಮುಹೂರ್ತ, ಕುದ್ರು ಅಭಿವೃದ್ಧಿಗೆ ಚಾಲನೆ


ಕಟೀಲು : ಪುರಾಣ ಪ್ರಸಿದ್ಧ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಚಿನ್ನದ ರಥಕ್ಕೆ ಸ್ವರ್ಣಮುಹೂರ್ತವನ್ನು ಸಚಿವ ರಮಾನಾಥ ರೈ ನೆರವೇರಿಸಿದರು.
ರಾಜ್ಯದಲ್ಲೇ ಎತ್ತರವಾದ ಚಿನ್ನದ ರಥಕ್ಕೆ ೧೨ಕೆ.ಜಿ.ಚಿನ್ನ ೨೦೦ಕೆ.ಜಿ.ಬೆಳ್ಳಿ ಬಳಕೆಯಾಗಲಿದ್ದು, ರಥ ನಿರ್ಮಾಣ ಮಾಡಲಿರುವ ಉಡುಪಿಯ ಸ್ವರ್ಣ ಜ್ಯುವೆಲ್ಲರ‍್ಸ್‌ನ ಗುಜ್ಜಾಡಿ ರಾಮದಾಸ ನಾಯಕ್‌ರಿಗೆ ಸಾಂಕೇತಿಕವಾಗಿ ಚಿನ್ನವನ್ನು ಹಸ್ತಾಂತರಿಸಲಾಯಿತು. ಸರಕಾರದ ಹೊಸ ನಿಯಮದಂತೆ ಚಿನ್ನದ ಗುಣಮಟ್ಟವನ್ನು ಎನ್‌ಐಟಿಕೆ ತಜ್ಞರು ಪರೀಕ್ಷಿಸಲಿದ್ದು, ಈ ಪರೀಕ್ಷೆಗೊಳಪಡುವ ಮೊದಲ ಸಂಸ್ಥೆ ಸ್ವರ್ಣ ಜ್ಯುವೆಲ್ಲರ‍್ಸ್ ಆಗಲಿದೆ. ಮುಂದಿನ ಎಪ್ರಿಲ್ ಜಾತ್ರೆಯ ಸಂದರ್ಭ ಚಿನ್ನದ ರಥ ಸಮರ್ಪಣೆ ನಡೆಯುವ ಸಾಧ್ಯತೆಯಿದೆ.
ಕಟೀಲು ಭ್ರಾಮರಿಯ ಮೂಲಸ್ಥಾನ ಕುದ್ರುವಿನಲ್ಲಿ ಅಭಿವೃದ್ಧಿ ಕಾರ‍್ಯಗಳು ಐದು ಕೋಟಿ ರೂ.ನಲ್ಲಿ ನಡೆಯಲಿದ್ದು, ತೀರ್ಥಬಾವಿ, ಕೆರೆ ಮುಂತಾದ ಕಾಮಗಾರಿಗಳನ್ನು ಸಚಿವ ವಿನಯ ಕುಮಾರ ಸೊರಕೆ ಉದ್ಘಾಟಿಸಿದರು.
ದೇಗುಲದ ಕಚೇರಿ ಕಾಗದ ರಹಿತವಾಗಿದ್ದು ನವೀಕೃತ ಕಚೇರಿ ಹಾಗೂ ಕಂಪ್ಯೂಟರ್ ವ್ಯವಸ್ಥೆಯನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಡಾ.ಸುರೇಶ್ ರಾವ್ ಕಟೀಲು ದೇವಸ್ಥಾನದಿಂದ ಆಸ್ಪತ್ರೆಯೊಂದನ್ನು ನಿರ್ಮಿಸಲು ಮುಂದಾಗಿದ್ದು, ಅದಕ್ಕೆ ಪೂರಕವಾದ ಸಹಕಾರವನ್ನು ಆರೋಗ್ಯ ಇಲಾಖೆಯಿಂದ ಮಾಡಿಕೊಡುವ ಭರವಸೆಯನ್ನು ಖಾದರ್ ನೀಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಡಿ.ವಿ.ಸದಾನಂದ ಗೌಡ, ಸಚಿವ ಅಭಯಚಂದ್ರ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ವೆಂಕಟರಮಣ ಆಸ್ರಣ್ಣ, ಶಾಸಕ ಮೊಯ್ದಿನ್ ಬಾವಾ, ಮೋನಪ್ಪ ಭಂಡಾರಿ, ಬೆಂಗಳೂರಿನ ದಯಾನಂದ ರೆಡ್ಡಿ, ಉದ್ಯಮಿ ಐಕಳ ಹರೀಶ್ ಶೆಟ್ಟಿ, ಸಂಜೀವನಿ ಟ್ರಸ್ಟ್‌ನ ಸಂಜೀವ ರಾವ್, ದಾನಿ ಸತೀಶ್ ಶೆಟ್ಟಿ, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಮುಂತಾದವರಿದ್ದರು. ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ ಸ್ವಾಗತಿಸಿದರು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ ವಂದಿಸಿದರು. ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

* ರಾಜ್ಯದಲ್ಲೇ ಅತಿ ಎತ್ತರದ ಚಿನ್ನದ ರಥ
* ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಕಾಗದ ರಹಿತ ಕಚೇರಿ ಹೊಂದಿದ ಮೊದಲ ದೇಗುಲ ಕಟೀಲು
* ಕಟೀಲು ದೇಗುಲದಿಂದ ಆಸ್ಪತ್ರೆಯ ಕನಸು
* ಕಟೀಲಿನಲ್ಲಿ ಆಕರ್ಷಣೆಯ ಕೇಂದ್ರವಾಗಲಿರುವ ಕುದ್ರು


Friday, August 16, 2013

ಶಿಬರೂರು ಹಯಗ್ರೀವ ತಂತ್ರಿ ನಿಧನ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೆಶ್ವರೀ ದೇಗುಲದ ತಂತ್ರಿಗಳಾದ ಶಿಬರೂರು ಹಯಗ್ರೀವ ತಂತ್ರಿ(೮೫ವ.) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.
ಕಟೀಲು ದೇಗುಲದಲ್ಲಿ ತಂತ್ರಿಗಳಾಗಿ ನಾಲ್ಕು ಬ್ರಹ್ಮಕಲಶಗಳನ್ನು ನೆರವೇರಿಸಿರುವ ಹಯಗ್ರೀವ ತಂತ್ರಿಯವರು ಶಿಮಂತೂರು, ಏಳಿಂಜೆ, ಕಲ್ಲಮುಂಡ್ಕೂರು, ಮಂಗಳೂರು ವೀರಭದ್ರ, ಹೊಯ್ಗೆಗುಡ್ಡೆ, ದೇಂದಡ್ಕ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ದೇಗುಲಗಳ, ಹತ್ತಾರು ದೈವಸ್ಥಾನಗಳ ತಂತ್ರಿಗಳಾಗಿ ಕಾರ‍್ಯನಿರ್ವಹಿಸುತ್ತಿದ್ದರು. ಪೇಜಾವರ ವಿಶ್ವೇಶತೀರ್ಥರಲ್ಲಿ ಸುಧಾ ಮಂಗಳ ಪಾಠ ಹೇಳಿಸಿಕೊಂಡ ಪ್ರಥಮ ಶಿಷ್ಯರಾಗಿದ್ದು,  ತಂತ್ರಿ ವರ್ಗದಲ್ಲಿ ಇವರಷ್ಟು ಚಂಡಿಕಾಹೋಮವನ್ನು ಮಾಡಿದವರು ಬೇರೆ ಯಾರೂ ಇದ್ದಂತಿಲ್ಲ. ಪುರೋಹಿತವರ್ಗದಲ್ಲಿ ಬಹುದೊಡ್ಡ ಹೆಸರನ್ನು ಮಾಡಿದ್ದ ಇವರು ಮನೆಯನ್ನೇ ಗುರುಕುಲವನ್ನಾಗಿಸಿ, ಹತ್ತಾರು ಶಿಷ್ಯರಿಗೆ ಪಾಠ ಹೇಳಿದವರು. ಹಯಗ್ರೀವ ತಂತ್ರಿಯವರು ಪಲಿಮಾರು ಮಠದ ಈಗಿನ ಯತಿಗಳ ಪೂರ್ವಾಶ್ರಮದ ತಂದೆಯಾಗಿದ್ದಾರೆ. ಪತ್ನಿ, ಪುತ್ರ ವೇದವ್ಯಾಸ ತಂತ್ರಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

Sunday, August 11, 2013

ಕಟೀಲು ದೇವಸ್ಥಾನದಲ್ಲಿ ನಾಗರ ಪಂಚಮಿ ಸಂಭ್ರಮ


ಕಟೀಲು ದೇವಸ್ಥಾನದ ಒಳಾಂಗಣದಲ್ಲಿ ಹಾಗೂ ಹೊರಗಿನ ನಾಗದೇವರ ಸನ್ನಿಧಿ ಚಿತ್ರಕೂಟದಲ್ಲಿ ನಾಗರಾಧನೆ ನಡೆಯಿತು.

ಆ.೨೫: ಕಟೀಲು ದೇಗುಲದಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಸ್ವರ್ಣ ಮುಹೂರ್ತ


ಕುದ್ರು ಅಭಿವೃದ್ಧಿ ಕಾಮಗಾರಿ ಆರಂಭ, ಕಾಗದ ರಹಿತ ಕಚೇರಿ ಉದ್ಘಾಟನೆ
ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಭಿವೃದ್ಧಿ ಪರ್ವ ಆರಂಭವಾದಂತಿದೆ. ತಾ.೨೫ರಂದು ರಾಜ್ಯದಲ್ಲೇ ಅತ್ಯಂತ ಎತ್ತರವಾದ ಸುಮಾರು ನಾಲ್ಕು ಕೋಟಿ ರೂ.ಗೂ ಮಿಕ್ಕಿದ ಚಿನ್ನದ ರಥ ನಿರ್ಮಾಣಕ್ಕೆ ಸ್ವರ್ಣ ಮುಹೂರ್ತ ನಡೆಯಲಿದೆ. ಈಗಾಗಲೇ ಚಿನ್ನದ ರಥದ ಬೆಳ್ಳಿಯ ಕಾರ‍್ಯಗಳು ಪೂರ್ಣಗೊಂಡಿದ್ದು, ಚಿನ್ನದ ಕೆಲಸ ನಡೆಯಬೇಕಿದೆ. ಈ ಕಾರ‍್ಯಕ್ಕೆ ತಾ.೨೫ರ ಕಾರ‍್ಯಕ್ರಮದಲ್ಲಿ ಸಚಿವ ರಮಾನಾಥ ರೈ ಚಾಲನೆ ನೀಡಲಿದ್ದಾರೆ.
ಕಟೀಲು ಭ್ರಾಮರೀಯ ಮೂಲಸ್ಥಾನ ಕುದ್ರುವಿನಲ್ಲಿ ಸುಮಾರು ಎರಡು ಕೋಟಿ ರೂ.ಗಳಲ್ಲಿ ಕೆರೆಗಳ ನಿರ್ಮಾಣ, ಯಾಜ್ಞಿಕ ವೃಕ್ಷಗಳ ನೆಡುವಿಕೆ, ಮಾಡು ರಹಿತ ಗರ್ಭಗುಡಿಯ ನಿರ್ಮಾಣ ಹೀಗೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಆಗಿರುವ ಕಾಮಗಾರಿಗಳನ್ನು ಸಚಿವ ವಿನಯಕುಮಾರ ಸೊರಕೆ ಉದ್ಘಾಟಿಸಲಿದ್ದಾರೆ.
ದೇಗುಲದ ಸೇವಾ, ಆಡಳಿತ ಕಚೇರಿಯಲ್ಲಿ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಕಾಗರ ರಹಿತ ಕಚೇರಿಯನ್ನಾಗಿಸುವ ಪ್ರಯತ್ನ ಮಾಡಲಾಗಿದೆ. ಈ ಯೋಜನೆಯನ್ನು ಉದ್ಘಾಟಿಸುವವರು ಸಚಿವ ಯು.ಟಿ.ಖಾದರ್. ಈ ಸಂದರ್ಭ ಉಪಸ್ಥಿತರಿರುವವರು ಸಚಿವ ಅಭಯಚಂದ್ರ ಜೈನ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಾಂಸದ ನಳಿನ್ ಕುಮಾರ್, ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್‌ಬಾವಾ, ಗಣೇಶ ಕಾರ್ಣಿಕ್, ಮೋನಪ್ಪ ಭಂಡಾರಿ, ದಯಾನಂದ ರೆಡ್ಡಿ, ಧಾಂಇಕ ಆಯುಕ್ತ ನಂದಕುಮಾರ್, ಜಿಲ್ಲಾಧಿಕಾರಿ ಎನ್.ಪ್ರಕಾಶ್ ಸೇರಿದಂತೆ ವಿವಿಧ ದಾನಿಗಳು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಬನ್ನಂಜೆಗೆ ಪ್ರಜ್ಞಾದೀಪ್ತಿ ಪ್ರಶಸ್ತಿ, ವೇಙ್ಕಟೇಶ್ವರ ಉಪಾಧ್ಯಾಯ ಪ್ರತಿಷ್ಠಾನ



ಕಟೀಲು : ಅನೇಕ ಪುರೋಹಿತರು ಸಂಸ್ಕೃತ ಜ್ಞಾನವಿಲ್ಲದೆ, ಮಂತ್ರಗಳನ್ನು ಕಂಠಪಾಠ ಮಾಡಿ ಉಚ್ಛರಿಸುತ್ತಾರೆ. ಇದು ಸರಿಯಲ್ಲ. ಹಾಗಾಗಿ ಪುರೋಹಿತರನ್ನು ತಿದ್ದಬೇಕಾಗಿದೆ ಎಂದು ಹೇಳಿದವರು ಬನ್ನಂಜೆ ಗೋವಿಂದಾಚಾರ್ಯರು.
 ಆ.10;
ಕಟೀಲು ದೇಗುಲದ ಸರಸ್ವತೀ ಸದನದಲ್ಲಿ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯ ಪ್ರತಿಷ್ಠಾನ ಕೊಡಮಾಡಿದ ಪ್ರಥಮ ಪ್ರಜ್ಞಾದೀಪ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಇಂಗ್ಲಿಷ್ ಮಾಧ್ಯಮದ ಕಲಿಕೆಯಿಂದ ಮಕ್ಕಳು ಸರಿಯಾಗಿ ಕನ್ನಡವನ್ನೂ ಮಾತನಾಡುತ್ತಿಲ್ಲ, ಇಂಗ್ಲಿಷ್‌ನಲ್ಲೂ ಮಾತನಾಡುತ್ತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಪತ್ರಿಕೋದ್ಯಮ ಅಪಶಬ್ದಗಳನ್ನು ಸೃಷ್ಟಿಸುವ ಕಾರ್ಖಾನೆಯಾಗುತ್ತಿದೆ. ಭಾಷಾ ಶುದ್ಧತೆ, ವಿಚಾರಶುದ್ಧತೆಗಾಗಿ ನಿಷ್ಟುರವಾದಿಯಾಗಿದ್ದ ಜ್ಞಾನಿ ಉಪಾಧ್ಯಾಯರ ಹೆಸರಿನಲ್ಲಿ ನೀಡುತ್ತಿರುವ ಪ್ರಜ್ಞಾದೀಪ್ತಿ ಪ್ರಶಸ್ತಿಯನ್ನು ಪ್ರೀತಿಗಾಗಿ ಸ್ವೀಕರಿಸುತ್ತಿದ್ದೇನೆ ಎಂದ ಅವರು ತನ್ನ ಬಾಲ್ಯದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ಗೆಳೆಯರು ಒತ್ತಾಯಿಸಿ ಎಳೆದೊಯ್ದು ಆಶುಭಾಷಣ ಸ್ಪರ್ಧೆಯೊಂದರ ವೇದಿಕೆ ಹತ್ತಿಸಿದರು. ಶಿವರಾಮ ಕಾರಂತರ ಕಾದಂಬರಿಗಳು ವಿಷಯ. ಮೂರು ನಿಮಿಷದ ಅವಧಿ. ಕಾರಂತರ ಅಷ್ಟೂ ಕಾದಂಬರಿಗಳನ್ನು ಓದಿಕೊಂಡಿದ್ದ ನನಗೆ ಮಾತು ಬಾರದು. ಸನ್ಮಾನ್ಯ ತೀರ್ಪುಗಾರರೆ, ಸಭಾಸದರೆ ನಮಸ್ಕಾರಗಳು. ಕಾರಂತರು ಪ್ರಸಿದ್ಧ ಕಾದಂಬರಿಕಾರರು ಎಂದಷ್ಟೇ ಹೇಳಿ ಭಾಷಣ ಮುಗಿಸಿದೆ. ಅನಂತರ ಅರಿವಾಯಿತು, ವಿಷಯ ತಿಳಿದಿದ್ದರೆ ಸಾಲದು. ಹೇಳಲು ಧೈರ‍್ಯ ಬೇಕು ಎಂಬುದು.
ಉಪಾಧ್ಯಾಯ ಪ್ರತಿಷ್ಠಾನವನ್ನು ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು.
ಈಶ್ವರಯ್ಯ ಬನ್ನಂಜೆಯವರನ್ನು ಅಭಿನಂದಿಸಿದರು. ಕೊರ್ಗಿ ಉಪಾಧ್ಯಾಯರ ಸಂಸ್ಮರಣೆಯನ್ನು ಮಾಡಿದ ಮೇಲುಕೋಟೆ ಉಮಾಕಾಂತ ಭಟ್, ಯಕ್ಷಗಾನ, ಪೌರೋಹಿತ್ಯ, ಸಾಹಿತ್ಯ ಕ್ಷೇತ್ರಕ್ಕೆ ಉಪಾಧ್ಯಾಯರ ಕೊಡುಗೆ ದೊಡ್ಡದು. ಅವರ ವಿದ್ವತನ್ನು ಗುರುತಿಸುವ ಕಾರ‍್ಯ ಆಗಿಲ್ಲ ಎಂದರು.
ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಡಾ.ಭಾಸ್ಕರಾನಂದ ಕುಮಾರ್, ದೇಗುಲದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ ಹೆಗ್ಡೆ, ಡಾ.ಶಶಿಕುಮಾರ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಅನಂತಪದ್ಮನಾಭ ಆಸ್ರಣ್ಣ ಮತ್ತಿತರರಿದ್ದರು. ಹಿರಣ್ಯ ವೇಂಕಟೇಶ್ವರ ಭಟ್ ಕಾರ‍್ಯಕ್ರಮ ನಿರೂಪಿಸಿದರು. ಪಂಜ ಭಾಸ್ಕರ ಭಟ್ ಸ್ವಾಗತಿಸಿದರು. ಹರಿನಾರಾಯಣದಾಸ ಆಸ್ರಣ್ಣ ವಂದಿಸಿದರು. ತಾಳಮದ್ದಲೆ, ಭಾವನಾ ತಂಡದಿಂದ ಯೇಗ್ದಾಗೆಲ್ಲಾ ಐತೆ ನಾಟಕ ಪ್ರದರ್ಶನಗೊಂಡಿತು.
ಚಿತ್ರ ಈಮೆಲ್