Tuesday, January 31, 2012

kondela friends


ಶಂಕುಸ್ಥಾಪನೆ
ಕಟೀಲು : ಇಲ್ಲಿನ ಕೊಂಡೇಲ ತರುಣ ವೃಂದವು ನಿರ್ಮಿಸಲುದ್ದೇಶಿಸಿರುವ ನೂತನ ಕಟ್ಟಡಕ್ಕೆ ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಶಿಲಾನ್ಯಾಸಗೈದರು. ಸಂಘದ ತಾರಾನಾಥ ಶೆಟ್ಟಿ, ಮೋಹನ ಬಂಗೇರ, ಭಾಸ್ಕರ್, ರಾಜು ಕೊಂಡೇಲ, ರವಿ, ಶಂಕರ ಮತ್ತಿತರರಿದ್ದರು.

ಬೀಳ್ಕೊಡುಗೆ


ಕಟೀಲು :ವಿಜಯಾ ಬ್ಯಾಂಕಿನಲ್ಲಿ ೩೬ವರ್ಷಗಳಿಂದ ಕಾರ‍್ಯನಿರ್ವಹಿಸುತ್ತಿದ್ದ ಅಶೋಕ ಕರ್ಕೇರ ನಿವೃತ್ತರಾದ ಹಿನ್ನಲೆಯಲ್ಲಿ ಕಟೀಲು ವಿಜಯಾ ಬ್ಯಾಂಕ್ ಶಾಖೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶಾಖಾ ಪ್ರಬಂಧಕ ಭುವನೇಶ್ ಹೆಗ್ಡೆ, ಸಿಬಂದಿಗಳು ಅಭಿನಂದಿಸಿದರು.

Wednesday, January 18, 2012

ಕಟೀಲು : ಯಾತ್ರಿ ನಿವಾಸದ ಅನುದಾನ ವಾಪಾಸ್?

ಕಟೀಲು : ಪುರಾಣ ಪ್ರಸಿದ್ಧ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾಗುವ ಯಾತ್ರಿ ನಿವಾಸದ ಯೋಜನೆಯ ಅನುದಾನ ಕಾರ‍್ಯಗತವಾಗದ ಕಾರಣಕ್ಕಾಗಿ ವಾಪಾಸಾಗುವ ಸೂಚನೆ ಇಲಾಖೆಯಿಂದ ದೇಗುಲಕ್ಕೆ ಬಂದಿದೆ.
ಸಚಿವ ಜನಾರ್ದನ ರೆಡ್ಡಿಯವರ ಮುತುವರ್ಜಿಯಿಂದ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂ.ನಲ್ಲಿ ಯಾತ್ರಿ ನಿವಾಸ ನಿರ್ಮಿಸಲು ಅನುದಾನ ಮಂಜೂರಾಗಿತ್ತು. ಮೂರು ವರುಷಗಳ ಹಿಂದೆ ಇಪ್ಪತ್ತು ಆ ಬಳಿಕ ಮತ್ತೆ ಇಪ್ಪತ್ತು ಹೀಗೆ ಒಟ್ಟು ೪೦ಲಕ್ಷ ರೂ. ಜಿಲ್ಲಾಧಿಕಾರಿಗೆ ಬಿಡುಗಡೆಯಾಗಿತ್ತು. ಯೋಜನೆಗೆ ಇನ್ನೂ ಅಂದಾಜುಪಟ್ಟಿ ಆಗದೇ ಇರುವುದರಿಂದ ಕಾಮಗಾರಿ ಅವಧಿ ಒಳಗೆ ಆಗದೇ ಇರುವುದರಿಂದ ಅನುದಾನ ವಾಪಾಸು ಹೋಗುವ ಕುರಿತಾಗಿ ದೇಗುಲಕ್ಕೆ ಇಲಾಖೆಯಿಂದ ಪತ್ರ ಬಂದಿದೆ.
ಕಟೀಲಿನಲ್ಲಿ ನೂರು ಕೊಠಡಿಗಳ ಯಾತ್ರಿ ನಿವಾಸವೊಂದರ ಪ್ರಸ್ತಾವನೆ ಆಗಿ, ನಾಲ್ಕೈದು ವರ್ಷಗಳ ಬಳಿಕ ಒಂದು ಕೋಟಿಯ ಯೋಜನೆ ನಾಲ್ಕು ಕೋಟಿ ರೂ.ಗಳಿಗೆ ಏರಿ ಟೆಂಡರು ಕರೆದೂ ಆಗಿತ್ತು. ಅಷ್ಟಾಗುವಾಗ ಹಿಂದಿನ ಜಿಲ್ಲಾಧಿಕಾರಿ, ಯೋಜನೆಯ ವಿನ್ಯಾಸ ಸರಿಯಿಲ್ಲ, ಬದಲಾಯಿಸಿ ಎಂದು ಆದೇಶ ಕೊಟ್ಟ ಕಾರಣಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸುವಂತಾಯಿತು. ಆದರೆ ಯೋಜನೆಯ ಮೊತ್ತ ನಾಲ್ಕರಿಂದ ಹನ್ನೊಂದು ಕೋಟಿಗೆ ಏರಿದ್ದು, ದೇಗುಲದಿಂದಲೇ ಇದಕ್ಕೆ ಹಣ ತೆಗೆಯುವುದು ಅಂತ ಚರ್ಚೆ ನಡೆಯುತ್ತಿದೆ.
ಪರಿಸ್ಥಿತಿ ಹೀಗಿರುವಾಗ ಪ್ರವಾಸೋದ್ಯಮ ಇಲಾಖೆಯಿಂದಲೇ ಪ್ರತ್ಯೇಕವಾಗಿ ಯಾತ್ರಿ ನಿವಾಸಕ್ಕೆ ಒಂದು ಕೋಟಿಯ ಯೋಜನೆ ಬಂದರೂ ಜಿಲ್ಲಾಧಿಕಾರಿ ಹಾಗೂ ಇತರ ಇಲಾಖೆಗಳ ನಿಧಾನಗತಿಯಿಂದಾಗಿ ಯೋಜನೆಯ ಮೊತ್ತ ಹಿಂದಕ್ಕೆ ಹೋಗುವ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಇನ್ನಾದರೂ ಯೋಜನೆಗೆ ಚಾಲನೆ ಕೊಟ್ಟು ಅನುದಾನದ ಸದುಪಯೋಗ ಆದರೆ ಕಟೀಲು ದೇಗುಲದಲ್ಲಿರುವ ವಸತಿ ಸಮಸ್ಯೆಗೆ ಒಂದಿಷ್ಟಾದರೂ ಪರಿಹಾರ ಸಿಕ್ಕೀತು.

Tuesday, January 17, 2012

ಸಂಸ್ಕೃತ ಎಂಎ: ವಿಜಯಲಕ್ಷ್ಮೀಗೆ ರಾಂಕ್


ಕಟೀಲು : ಮಂಗಳೂರು ವಿವಿಯ ನಡೆಸಿದ ಸಂಸ್ಕೃತ ಎಂಎ ಪರೀಕ್ಷೆಯಲ್ಲಿ ಕಟೀಲು ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಕೇಂದ್ರದ ಕಾರ್ಕಳ ಜೋಡುಕಟ್ಟೆಯ ಶ್ರೀಮತಿ ವಿಜಯಲಕ್ಷ್ಮೀ ಕಾಮತ್ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಇವರು ಪ್ರಸ್ತುತ ಕಾರ್ಕಳ ಎಸ್‌ವಿಟಿ ಪ್ರೌಢಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ.

Saturday, January 14, 2012

ರೂ.೪ಕೋಟಿ ವೆಚ್ಚ ಕಟೀಲು ದೇಗುಲ ಮೂಲಸ್ಥಾನ ಕುದ್ರು ಜೀರ್ಣೋದ್ಧಾರಕ್ಕೆ ಚಾಲನೆ


ಕಟೀಲು : ಪುರಾಣ ಪ್ರಸಿದ್ಧ ಕಟೀಲು ಭ್ರಾಮರೀ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮೂಲಸ್ಥಾನ ಕುದ್ರುವಿನ ಜೀರ್ಣೋದ್ಧಾರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ದೇಗುಲದಲ್ಲಿಡಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಕುದ್ರುವನ್ನು ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದ್ದು ಸುಮಾರು ರೂ.೪ಕೋಟಿಯ ಖರ್ಚನ್ನು ಅಂದಾಜಿಸಲಾಗಿದೆ.
ಯೋಜನೆಯ ಪ್ರಕಾರ ಶ್ರೀಬಂಧ ವಾಸ್ತು ಶೈಲಿಯಲ್ಲಿ ಕಾರ‍್ಯಗಳಾಗಲಿದ್ದು, ಮೂಲ ಲಿಂಗದ ಸ್ಥಳದಲ್ಲಿ ಮೇಲ್ಛಾವಣಿ ರಹಿತ ಗರ್ಭಗುಡಿ, ನಾಗ ದೇವರಿಗೆ ಚಿತ್ರಕೂಟ, ಬ್ರಹ್ಮಗುಡಿ, ಪಿಲಿಚಾಮುಂಡಿ ಗುಡಿ, ಪರಿಧಿ, ಎರಡು ಶಾಸ್ತ್ರೀಯವಾದ ಕೆರೆಗಳು, ಯಜ್ಞಶಾಲೆ, ಯಾಜ್ಞಿಕ ವೃಕ್ಷಗಳ ನೆಡುವಿಕೆಯ ಯೋಜನೆಗಳನ್ನು ಮೂರು ವರ್ಷಗಳ ಅವಧಿಯೊಳಗೆ ನಡೆಸಲಾಗುತ್ತದೆ. ಈಗಿರುವ ದೇಗುಲದಿಂದ ನದಿಯ ಇನ್ನೊಂದು ಪಕ್ಕದಲ್ಲಿರುವ ಕುದ್ರುವಿಗೆ ಹೋಗಲು ಸೇತುವೆಯನ್ನು ರೂ. ೧.೪೦ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತದೆ.
ಕಾಮಗಾರಿ ಚಾಲನೆಯ ಸಂದರ್ಭ ದೇಗುಲದ ಶಿಬರೂರು ಹಯಗ್ರೀಯ ತಂತ್ರಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಬಂಧುಗಳಾದ ಲಕ್ಷ್ಮೀನಾರಾಯಣ, ಅನಂತಪದ್ಮನಾಭ, ಹರಿನಾರಾಯಣದಾಸ, ಸಾಂಸದ ನಳಿನ್ ಕುಮಾರ್, ದಾನಿ ಸತೀಶ್ ಶೆಟ್ಟಿ ಪಡುಬಿದ್ರೆ, ವಾಸ್ತುಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್, ಶಿಲ್ಪಿ ಎಲ್ಲೂರು ವಿಷ್ಣುಮೂರ್ತಿ ಭಟ್ ಮತ್ತಿತರರಿದ್ದರು.

Sunday, January 8, 2012

ರೇಬೀಸ್ ಲಸಿಕೆ ನೀಡಿಕೆ


ಕಟೀಲು : ಮೆನ್ನಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಅಜಾರು, ಮಲ್ಲಿಗೆಅಂಗಡಿ, ಕೆಮ್ಮಡೆ, ಉಲ್ಲಂಜೆ ಪ್ರದೇಶಗಳಲ್ಲಿ ನೂರಕ್ಕೂ ಹೆಚ್ಚು ನಾಯಿ, ದನಗಳಿಗೆ ರೇಬೀಸ್ ಲಸಿಕೆಯನ್ನು ಕಿನ್ನಿಗೋಳಿ ರೋಟರ‍್ಯಾಕ್ಟ್, ಮೆನ್ನಬೆಟ್ಟು ಪಂಚಾಯತ್, ಪಶು ಇಲಾಖೆಯ ವತಿಯಿಂದ ನೀಡಲಾಯಿತು. ಡಾ.ಸತ್ಯಶಂಕರ್, ರೋಟರ‍್ಯಾಕ್ಟ್‌ನ ಗಣೇಶ್ ಕಾಮತ್, ಪಂಚಾಯತ್‌ನ ಶೈಲಾ ಶೆಟ್ಟಿ, ಅರುಣ್ ಕುಮಾರ್ ಮತ್ತಿತರರಿದ್ದರು. ಇತ್ತೀಚಿಗೆ ಕಟೀಲು ಪ್ರದೇಶದಲ್ಲಿ ಹುಚ್ಚು ನಾಯಿ ಕಡಿತ ಪ್ರಕರಣಗಳಾದ್ದರಿಂದ ಈ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Saturday, January 7, 2012

ಎಕ್ಕಾರು ವರ್ಷಾವಧಿ ನೇಮ



ಕಟೀಲು ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡೆಯಿತು.

ನಿಡ್ಡೋಡಿ ಸತ್ಯನಾರಾಯಣ ಶಾಲೆ ಶತಮಾನೋತ್ಸವ


ಶಿಕ್ಷಣ ಕ್ರಾಂತಿಪುರುಷ ಸ್ಮರಣೀಯ-ಡಾ.ಹೆಗ್ಗಡೆ
ಕಟೀಲು : ಯಾವ ಸೌಲಭ್ಯಗಳೂ ಇಲ್ಲದ ತೀರಾ ಹಳ್ಳಿಯಲ್ಲಿ ನೂರು ವರುಷಗಳ ಹಿಂದೆ ಶಾಲೆಯನ್ನು ಕಟ್ಟಿ ಶಿಕ್ಷಣ ಕ್ರಾಂತಿಗೆ ಕೊಡುಗೆ ಕೊಟ್ಟ ಮಹಾನೀಯರು ಸದಾ ಸ್ಮರಣೀಯರು ಎಂದು ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ರಾತ್ರಿ ದಿವಂಗತ ನಾರಾಯಣ ಶೆಟ್ಟರಿಂದ ಸ್ಥಾಪಿಸಲ್ಪಟ್ಟ ನಿಡ್ಡೋಡಿ ಶ್ರೀ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಶಾಸಕ ಅಭಯಚಂದ್ರ, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಜಗನ್ನಾಥ ಶೆಟ್ಟಿ ಮಂಡ್ಯ, ಕಲ್ಲಮುಂಡ್ಕೂರು ಗ್ರಾ.ಪಂ.ಅಧ್ಯಕ್ಷೆ ಗೀತಾ ಅಮೀನ್, ಮಂಗಳೂರು ತಾ.ಪಂ.ಅಧ್ಯಕ್ಷೆ ಭವ್ಯಾ ಗಂಗಾಧರ್, ವಿದ್ಯಾರ್ಥಿ ನಾಯಕ ಗೋಪಾಲಕೃಷ್ಣ ಪ್ರಭು, ಮುಖ್ಯ ಶಿಕ್ಷಕ ಕೆ.ಶ್ರೀನಿವಾಸ ಭಟ್ಟ, ಸತ್ಯನಾರಾಯಣ ಎಜುಕೇಶನ್ ಟ್ರಸ್ಟ್‌ನ ಯದುನಾರಾಯಣ ಶೆಟ್ಟಿ, ಸಂಚಾಲಕ ಎನ್.ದಿನಕರ ಶೆಟ್ಟಿ ಮತ್ತಿತರರಿದ್ದರು.

Friday, January 6, 2012

ಕಟೀಲಿನಲ್ಲಿ ಗೀತಾ ಜಯಂತಿ


ಕಟೀಲು : ಇಲ್ಲಿನ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಶುಕ್ರವಾರ ಗೀತಾ ಜಯಂತಿ ನಡೆಯಿತು. ಪ್ರಾಥಮಿಕ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಗೀತಾ ಕಂಠಪಾಠ, ಪದವೀಪೂರ್ವ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಘೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಗೀತೆಯ ಬಗ್ಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು. ೨೫ಶಿಕ್ಷಣ ಸಂಸ್ಥೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ‍್ಯಕ್ರಮವನ್ನು ಸಂಜೀವನೀ ಟ್ರಸ್ಟ್‌ನ ಕೆ.ಸಂಜೀವ ರಾವ್ ಉದ್ಘಾಟಿಸಿದರು. ಗೋಪಾಲಕೃಷ್ಣ ಆಸ್ರಣ್ಣ, ಸಂಸ್ಥೆಯ ಪ್ರಾಚಾರ‍್ಯ ನಾಗರಾಜ ಪದ್ಮನಾಭ ಮರಾಠೆ ಮತ್ತಿತರರಿದ್ದರು. ಜಯಶ್ರೀ ನಿರೂಪಿಸಿದರು.


ಭಗವದ್ಗೀತೆ ಕಂಠ ಪಾಠ ಸ್ಪರ್ಧೆ ವಿಜೇತರು
ಕಟೀಲು : ಇಲ್ಲಿನ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಗೀತಾಜಯಂತಿ ನಿಮಿತ್ತ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಹೀಗಿದೆ.
೧)ಅಂಗನವಾಡಿ ವಿಭಾಗ
೧) ಧನ್ಯಶ್ರೀ ಕೆನರಾ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು
೨) ಸ್ಮಿತಾ ಕೆನರಾ ಪ್ರಾಥಮಿಕ ಶಾಲೆ ಡೊಂಗರಕೇರಿ-ಸಮಾಧಾನಕರ ಬಹುಮಾನ
೩) ಅನ್ವಿತಾ ಕೆ. ವಿದ್ಯಾದಾಯಿನಿ ಅಂಗನವಾಡಿ ಶಾಲೆ ಸುರತ್ಕಲ್ -ಸಮಾಧಾನಕರ ಬಹುಮಾನ

೨) ೧ರಿಂದ ೪ನೇ ತರಗತಿವರೆಗೆ
೧) ಶ್ರೀಕುಮಾರ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್
೨) ದೇವಯಾನೀ ಶರ್ಮಾ ಕೆನರಾ ಕಿರಿಯ ಪ್ರಾಥಮಿಕ ಶಾಲೆ ಡೊಂಗರಕೇರಿ
೩) ಪವನ್ ಎಸ್ ರಾವ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್.
೪) ಸಂಹಿತಾ ಕೆನರಾ ಕಿರಿಯ ಪ್ರಾಥಮಿಕ ಶಾಲೆ ಡೊಂಗರಕೇರಿ

೩) ೫ರಿಂದ ೭ರವರೆಗೆ
೧) ಬಿಂದಿಯಾ ಶೇಟ್ ಬೆಸೆಂಟ್ ಆಂಗ್ಲಮಾಧ್ಯಮ ಶಾಲೆ ಮಂಗಳೂರು
೨) ವೈಷ್ಣವೀ ವಿ ಭಟ್ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡಬಿದ್ರೆ
೩) ವಿಷ್ಣುಪ್ರಸಾದ್ ಕೆನರಾ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು

೪) ಫ್ರೌಢಶಾಲೆ ವಿಭಾಗ ೧೪ನೇ ಅಧ್ಯಾಯದ ೧೨ ಆರಂಭಧ ಶ್ಲೋಕಗಳು
೧) ದಿವ್ಯ ಹೆಗ್ಡೆ ಆಳ್ವಾಸ್ ಫ್ರೌಢಶಾಲೆ ಮೂಡಬಿದ್ರೆ
೨) ಅಪೇಕ್ಷ ಬೆಸೆಂಟ್ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಮಂಗಳೂರು
೩) ಪವಿತ್ರಾ ಎಸ್ ಹೆಗ್ಡೆ, ಆಳ್ವಾಸ್ ಫ್ರೌಢಶಾಲೆ ಮೂಡಬಿದ್ರೆ

೫) ಪದವಿ ಪೂರ್ವ ವಿಭಾಗ ಪ್ರಬಂಧ ಸ್ಪರ್ಧೆ ವಿಷಯ : ವಿದ್ಯಾರ್ಥಿ ಜೀವನಕ್ಕೆ ಗೀತೆಯ ಪ್ರೇರಣೆ
೧) ಗಿರಿರಾಜ ಉಪಾಧ್ಯಾಯ, ಸಂಸ್ಕೃತ ಕಾಲೇಜು ಉಡುಪಿ
೨) ಅಶ್ವಿನೀ ಕೆ.ಎಸ್. ಶ್ರೀ ದೇವಳ ಪದವೀಪೂರ್ವ ಕಾಲೇಜು ಕಟೀಲು.
೩) ಅನುರಾಜ್ ಜ್ಞಾನಸುಧಾ ಪದವೀಪೂರ್ವ ಕಾಲೇಜು ಕಾರ್ಕಳ

೬) ಪದವಿ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ
೧) ಗಾಯತ್ರಿ ಎಸ್ ಸಂಸ್ಕೃತ ಕಾಲೇಜು ಉಡುಪಿ
೨) ಭರತ್ ಐತಾಳ್ ಸಂಸ್ಕೃತ ಕಾಲೇಜು ಉಡುಪಿ
೩) ಪ್ರಸನ್ನಾ ಕುಮಾರಿ ವಿವೇಕಾನಂದ ಕಾಲೇಜು ಪುತ್ತೂರು.
ಪದವಿವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ದೆ
೧) ದಿವ್ಯಾ ನಾಯಕ್ ಭಂಡರ್‌ಕಾರ‍್ಸ್ ಕಾಲೇಜು ಕುಂದಾಪುರ
೨) ಅಕ್ಷಯಾ ಗೋಖಲೆ, ಭುವನೇಂದ್ರ ಕಾಲೇಜು, ಕಾರ್ಕಳ
೩) ರಕ್ಷಿತಾ ನಾಯಕ್ , ಎಂ.ಜಿ.ಎಂ. ಕಾಲೇಜು, ಉಡುಪಿ.

Tuesday, January 3, 2012

ಕಟೀಲು ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ



ಕಟೀಲು : ಇಲ್ಲಿನ ಶ್ರೀದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ನಡೆಯಿತು.
ಸಾಂಸದ ನಳಿನ್ ಕುಮಾರ್, ಹಳೆ ವಿದ್ಯಾರ್ಥಿನಿ, ಪತ್ರಕರ್ತೆ ವಿಜಯಲಕ್ಷೀ ಶಿಬರೂರು, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಪಿಯು ಕಾಲೇಜಿನ ಪ್ರಾಚಾರ‍್ಯ ಜಯರಾಮ ಪೂಂಜ, ಪ್ರೌಢಶಾಲೆಯ ಸುರೇಶ್ ಭಟ್, ಕಟೀಲು ಚರ್ಚ್‌ನ ರಾಬರ್ಟ್ ಕ್ರಾಸ್ತ, ಜಿ.ಪಂ.ಸದಸ್ಯ ಈಶ್ವರ್, ಶಿಕ್ಷಣ ಇಲಾಖೆಯ ದಿನೇಶ್, ಮುಖ್ಯ ಶಿಕ್ಷಕಿ ಮಾಲತಿ ಮತ್ತಿತರರಿದ್ದರು. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಾದ ಜಯಲಕ್ಷ್ಮೀ, ಗೀತಾ, ಸುಪ್ರೀತಾರನ್ನು ಸಂಮಾನಿಸಲಾಯಿತು. ಶಿಕ್ಷಕ ಗೋಪಾಲ್ ನಿರೂಪಿಸಿದರು.

Sunday, January 1, 2012

ಕಟೀಲು ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಭೆ




ಕಟೀಲು : ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಭೆ ಭಾನುವಾರ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಕಟೀಲಿನ ಕನ್ನಡ ಶಾಲೆಯನ್ನು ಇನ್ನಷ್ಟು ಬೆಳೆಸುವ, ಸುದೃಢವಾಗಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಬೇಕು. ೨೦೧೩-೧೪ರಲ್ಲಿ ನಡೆಯಲಿರುವ ಶಾಲೆಯ ಸುವರ್ಣ ಮಹೋತ್ಸವ ವರ್ಷ ಮತ್ತು ಮುಂದಿನ ದಿನಗಳಲ್ಲೂ ಶಾಲೆಯ ಯಶಸ್ಸಿಗೆ ಸಹಕರಿಸಬೇಕೆಂದು. ಈ ಶಾಲೆಯಲ್ಲಿ ೧೨ಸಾವಿರದಷ್ಟು ಮಂದಿ ಹತ್ತನೆಯ ತರಗತಿ ಪೂರೈಸಿದ್ದಾರೆ ಎಂದು ಉಪಪ್ರಾಚಾರ‍್ಯ ಸುರೇಶ್ ಭಟ್ ವಿನಂತಿಸಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ, ದೇಗುಲದ ಸಹಕಾರದೊಂದಿಗೆ ವಿದ್ಯಾಭಿಮಾನಿಗಳು ಈ ಕನ್ನಡ ಶಾಲೆಯನ್ನು ಇನ್ನಷ್ಟು ಎತ್ತರಕ್ಕೇರಿಸಬೇಕು. ಐದು ಸಾವಿರದಷ್ಟಾದರೂ ಹಳೆ ವಿದ್ಯಾರ್ಥಿಗಳನ್ನು ಸೇರಿಸುವ ಕೆಲಸವಾಗಬೇಕೆಂದರು.
ಜಿ.ಪಂ.ಸದಸ್ಯ ಈಶ್ವರ್ ಕೆ, ತಿಮ್ಮಪ್ಪ ಕೋಟ್ಯಾನ್, ಸುಂದರ ಪೂಜಾರಿ, ಸಾಯಿನಾಥ ಶೆಟ್ಟಿ, ಕೆ.ವಿ.ಶೆಟ್ಟಿ, ವಿಜಯಲಕ್ಷ್ಮೀ ಶಿಬರೂರು, ಸುಬ್ರಹ್ಮಣ್ಯ ಆಚಾರ‍್ಯ, ಅರುಣಾ ಮುಂತಾದವರು ಅಭಿಪ್ರಾಯ ಮಂಡಿಸಿದರು.