Sunday, December 30, 2012

ಕಟೀಲು ಪ್ರೌಢಶಾಲೆ ವಾರ್ಷಿಕೋತ್ಸವ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಶನಿವಾರ ನಡೆಯಿತು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಜಿ.ಪಂ.ಸದಸ್ಯ ಈಶ್ವರ್, ಹಳೆ ವಿದ್ಯಾರ್ಥಿ ಸಂಘದ ಹರಿನಾರಾಯಣ ಆಸ್ರಣ್ಣ, ಸೌಂದರ್ಯ ರಮೇಶ್, ಮರವೂರು ಜಗದೀಶ ಶೆಟ್ಟಿ, ವಿದ್ಯಾರ್ಥಿ ನಾಯಕ ಶ್ರೀನಿಧಿ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಬಾಬು ಶೆಟ್ಟಿ, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

Sunday, December 9, 2012

Saturday, November 24, 2012

ಕಟೀಲಿನಲ್ಲಿ ಮುದ್ರಾಧಾರಣೆ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಶನಿವಾರ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಆಸ್ತಿಕ ಎಲ್ಲ ಭಕ್ತರಿಗೂ ತಪ್ತ ಮುದ್ರಾಧಾರಣೆ ಮಾಡಿದರು. ಮಹಿಳೆಯರೂ ಸೇರಿದಂತೆ ಜಾತಿಮತ ಬೇಧವಿಲ್ಲದೆ ಎಲ್ಲ ಭಕ್ತರಿಗೂ ಮುದ್ರಾಧಾರಣೆ ನೆರವೇರಿಸಿದರು. ಅರ್ಚಕರಾದ ಆಸ್ರಣ್ಣ ಬಂಧುಗಳೂ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.


Sunday, November 4, 2012

ಮಕ್ಕಳ ಆಟ


ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ೪ನೇ ವಾರ್ಷಿಕೋತ್ಸವದ ಪ್ರಯುಕ್ತ ಕಟೀಲು ದೇಗುಲದ ಸರಸ್ವತೀ ಸದನದಲ್ಲಿ ಶನಿವಾರ ಹಾಗೂ ಭಾನುವಾರ ವಿವಿಧ ಮಕ್ಕಳ ಮೇಳಗಳು ಯಕ್ಷಗಾನ ಪ್ರದರ್ಶನಗಳನ್ನು ಪ್ರದರ್ಶಿಸಿದವು. ಮಂಜನಾಡಿ ಶ್ರೀ ದುರ್ಗಾಪರಮೇಶ್ವರೀ ಯಕ್ಷಕಲಾ ಕೇಂದ್ರದ ಮಕ್ಕಳು ಅಂಧಕಾಸುರ ಮೋಕ್ಷವನ್ನು ಪ್ರದರ್ಶಿಸಿದರು.


Saturday, November 3, 2012

ಬೀಳ್ಕೊಡುಗೆ


ಕಟೀಲು : ವಿಜಯಾ ಬ್ಯಾಂಕಿನಲ್ಲಿ ೩೮ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಕೆ.ರಮೇಶ್‌ರನ್ನು ಸಂಮಾನಿಸಿ ಬೀಳ್ಕೊಡಲಾಯಿತು. ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಸಹಾಯಕ ಪ್ರಬಂಧಕ ಪ್ರಮೋದ್ ಕಾಮತ್, ಆನಂದ್, ದೀಪಾ ಶೆಟ್ಟಿ, ಲೋಕೇಶ್ ಮತ್ತಿತರರಿದ್ದರು.

ಕಟೀಲಿನಲ್ಲಿ ಮಕ್ಕಳ ಬಯಲಾಟ ಉದ್ಘಾಟನೆ



ಕಟೀಲು : ಇಲ್ಲಿನ ಶ್ರೀ ದುರ್ಗಾ ಮಕ್ಕಳ ಮೇಳ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮಕ್ಕಳ ತೆಂಕುತಿಟ್ಟು ಯಕ್ಷಗಾನ ಬಯಲಾಟ ಪ್ರದರ್ಶನ ಶನಿವಾರ ಉದ್ಘಾಟನೆಗೊಂಡಿತು.
ಗಿರೀಶ್ ಎಂ.ಶೆಟ್ಟಿ, ಬಜಪೆ ರಾಘವೇಂದ್ರ ಆಚಾರ್ಯ, ಪ್ರಾಚಾರ್ಯ ಬಾಲಕೃಷ್ಣ ಎಂ.ಶೆಟ್ಟಿ, ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ, ವಾಸುದೇವ ಶೆಣೈ ಮತ್ತಿತರರಿದ್ದರು.
ಬಳಿಕ ಕದ್ರಿ ಬಾಲ ಯಕ್ಷಕೂಟದವರು ವಿದ್ಯುನ್ಮತಿ ಕಲ್ಯಾಣವನ್ನು, ಕುಕ್ಕಾಜೆ ಪ್ರಗತಿ ಪ್ರೌಢಶಾಲೆಯ ಮಕ್ಕಳು ಗರುಡ ಗರ್ವಭಂಗವನ್ನು ಪ್ರದರ್ಶಿಸಿದರು.
ಭಾನುವಾರ ದಿನವಿಡೀ ಮಕ್ಕಳ ಯಕ್ಷಗಾನ ನಡೆಯಲಿದ್ದು, ಬೆಳಿಗ್ಗೆ ಮುನ್ನೂರು ಚಿಣ್ಣರಲೋಕ ಸೇವಾ ಟ್ರಸ್ಟ್‌ನ ಕಲಾವಿದರು ಶಶಿಪ್ರಭಾ ಪರಿಣಯ, ಮಂಜನಾಡಿ ದುರ್ಗಾಪರಮೇಶ್ವರೀ ಕೃಪಾಶ್ರಿತ ಯಕ್ಷಕಲಾ ಕೇಂದ್ರದವರು ಅಂಧಕಾಸುರ ಮೋಕ್ಷವನ್ನು, ಕಳಸ ಹಳ್ಳುವಳ್ಳಿಯ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಟಾನದವರು ಸುದರ್ಶನ ವಿಜಯವನ್ನು, ಕುರ್ನಾಡು ದತ್ತಾತ್ರೇಯ ಯಕ್ಷಗಾನ ಮಂಡಳಿಯ ಮಕ್ಕಳು ಸುಧನ್ವಾರ್ಜುನವನ್ನು ಪ್ರದರ್ಶಿಸಲಿದ್ದಾರೆ.
ಬಳಿಕ ಕಟೀಲು ರಥಬೀದಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟಿ.ಶ್ಯಾಮ್ ಭಟ್, ಅಂಬಲಪಾಡಿಯ ನಿ.ಬೀ.ವಿಜಯ ಬಲ್ಲಾಳ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಮಾಲಾಡಿ ಅಜಿತ್ ಕುಮಾರ್ ರೈ, ಜಗದೀಪ್ ಸುವರ್ಣ, ಮುಂಬೈ ಚಂದ್ರಶೇಖರ ಬೆಳ್ಚಡ, ಕಟೀಲಿನ ಆಸ್ರಣ್ಣ ಬಂಧುಗಳ ಉಪಸ್ಥಿತಿಯಲ್ಲಿ ಯಕ್ಷಗಾನ ಕಲಾವಿದ ದಾಸನಡ್ಕ ರಾಮ ಕುಲಾಲ್, ಯುವ ಛಾಂದಸ ಗಣೇಶ ಕೊಲೆಕಾಡಿ ಹಾಗೂ ಯಕ್ಷಗಾನ ತರಗತಿಯ ಗುರುಗಳನ್ನು ಸಂಮಾನಿಸಲಾಗುವುದು. ಇದೇ ಸಂದರ್ಭ ಯಕ್ಷಗಾನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಬಳಿಕ ದುರ್ಗಾ ಮಕ್ಕಳ ಮೇಳದ ಕಲಾವಿದರಿಂದ ಶ್ರೀ ಕೃಷ್ಣ ಲೀಲೆ ನಡೆಯಲಿದೆ.




Monday, October 29, 2012

ಎಚ್.ಡಿ.ಕುಮಾರಸ್ವಾಮಿ ಭೇಟಿ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ ಜೆಡಿಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರಿಂದ ಪ್ರಸಾದ ಸ್ವೀಕರಿಸಿದರು.
ಮಧು ಬಂಗಾರಪ್ಪ, ಎಂ.ಬಿ.ಸದಾಶಿವ, ಚೆಲುವರಾಯ ಸ್ವಾಮಿ, ನಾಗರಾಜ ಶೆಟ್ಟಿ, ಸಂಜೀವ ಮಡಿವಾಳ ಮುಂತಾದವರಿದ್ದರು.


Wednesday, October 24, 2012

ಕಟೀಲಿನಲ್ಲಿ ಅಕ್ಷರಾಭ್ಯಾಸ, ದಾಖಲೆಯ ವಾಹನ ಪೂಜೆ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ವಿಜಯದಶಮೀಯಂದು ಬುಧವಾರ ೨೦೧ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು. ಮಂಗಳವಾರದಂದು ಒಟ್ಟು ೧೩೨೦ವಾಹನಗಳ ಪೂಜೆ ನಡೆಯಿತು. ಬಜಪೆ ಪೋಲೀಸರು ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರಿಂದ ವಾಹನ ಬ್ಲಾಕ್ ಆಗಲಿಲ್ಲ. ಐದು ಮಂದಿ ವಾಹನ ಪೂಜೆ ಮಾಡಲು ನಿಯುಕ್ತರಾಗಿದ್ದರು.
ನವರಾತ್ರಿಯ ದಿನಗಳಲ್ಲಿ ಕಟೀಲು ದೇಗುಲದಲ್ಲಿ ನಡೆದ ಒಟ್ಟು ಹೂವಿನ ಪೂಜೆಗಳ ಸಂಖ್ಯೆ ೨೯,೯೦೩!ಒಂದೂವರೆ ಲಕ್ಷ ಮಂದಿ ಅನ್ನಪ್ರಾಸಾದ ಸ್ವೀಕರಿಸಿದ್ದಾರೆ.

ಭ್ರಮರವಾಣಿ, ಹೊಲಿಗೆ ಯಂತ್ರಗಳ ಉದ್ಘಾಟನೆ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪ್ರೌಢಶಾಲೆಯಲ್ಲಿ ಶಾಲಾ ವಿಶೇಷಾಂಕ ಭ್ರಮರವಾಣಿಯ ಬಿಡುಗಡೆ ಬುಧವಾರ ನಡೆಯಿತು. ಇದೇ ಸಂದರ್ಭ ಸಂಜೀವನಿ ಟ್ರಸ್ಟ್‌ನ ಡಾ. ಸುರೇಶ್ ರಾವ್ ಕೊಡುಗೆಯಾಗಿ ನೀಡಿದ ಹತ್ತು ಹೊಲಿಗೆ ಯಂತ್ರಗಳು, ವಾಸುದೇವ ಆಸ್ರಣ್ಣ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಯೋಜನೆ, ಹಳೆ ವಿದ್ಯಾರ್ಥಿ ಸಂಘ ನಡೆಸುವ ಯೋಗ ತರಗತಿಗಳನ್ನು ಉದ್ಘಾಟಿಸಲಾಯಿತು. ಡಾ. ಸುರೇಶ್ ರಾವ್, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಹಳೆವಿದ್ಯಾರ್ಥಿ ಸಂಘದ ಶ್ರೀಹರಿನಾರಾಯಣದಾಸ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಬಾಬು ಶೆಟ್ಟಿ ಮರವೂರುಬೀಡು, ಮೂಲ್ಕಿ ಬಂಟರ ಸಂಘದ ಸಂತೋಷ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿಗಾರ್, ಉಪಪ್ರಾಚಾರ್ಯ ಸುರೇಶ್ ಭಟ್, ಸಾಯಿನಾಥ ಶೆಟ್ಟಿ, ಕೆ.ವಿ.ಶೆಟ್ಟಿ, ಅಲೆಕ್ಸ್ ತಾವ್ರೋ, ಮಾಲತಿ ಮತ್ತಿತರರಿದ್ದರು.



Tuesday, October 23, 2012

ಶ್ರೀಮತಿ ಸುನೀತಾ ಎಚ್.ಬಿ. ಡಾಕ್ಟರೇಟ್ ಪದವಿ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಕಿನ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುನೀತಾ ಎಚ್.ಬಿ. ಇವರು ಮಂಡಿಸಿದ ಕಾತ್ಯಾಯಿನೀ ಕೀ ಕವಿತಾವೋಂ ಮೇ ನಾರೀ ಎಂಬ ಮಹಾಪ್ರಬಂಧಕ್ಕೆ ಚೆನ್ನೈನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

katil shri durga makkala mela varshikotsva





Tuesday, October 16, 2012

ಕಟೀಲು: ನವರಾತ್ರಿ ಮಹೋತ್ಸವ, ಸಾಂಸ್ಕ್ರತಿಕ ಉತ್ಸವ ಆರಂಭ



ಕಟೀಲು : ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಯಕ್ಷಗಾನ ಕಾರ‍್ಯಕ್ರಮಗಳು ಮಂಗಳವಾರ ಆರಂಭಗೊಂಡವು. ಬೆಳಿಗ್ಗೆ ವಾಸುದೇವ ಆಸ್ರಣ್ಣ ಕಾರ‍್ಯಕ್ರಮ ಉದ್ಘಾಟಿಸಿದರು. ಚಂದ್ರಕಾಂತ ನಾಯಕ್, ವಿಶ್ವೇಶ ರಾವ್ ಮತ್ತಿತರರಿದ್ದರು.
ಸರಸ್ವತೀ ಸದನದಲ್ಲಿ ಡಾ| ಸುಶೀಲಾ ರಾವ್ ಕೊಲ್ಲಿಪಾಲ್ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಜರಗಿತು.
ದೇಗುಲಕ್ಕೆ ಮುಂಬಾಯಿ ಉದ್ಯಮಿ ಸುಧಾಕರ ಶೆಟ್ಟಿ ದೇವಳದ ಗರ್ಭ ಗುಡಿಯ ತೆಂಕು-ಬಡಗು ದಿಕ್ಕಿನ ಬಾಗಿಲಿಗೆ ೯.೫ ಕೆ.ಜಿ ತೂಕದ ಸುಮಾರು ಮೌಲ್ಯದ ಬೆಳ್ಳಿಯನ್ನು ಸೇವಾ ರೂಪದಲ್ಲಿ ಸರ್ಮಪಿಸಿದರು.


ನೆಲ್ಲಿತೀರ್ಥ ಗುಹಾಪ್ರವೇಶ ಆರಂಭ



ಕಟೀಲು : ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಕ್ಷೇತ್ರದ ಗುಹಾಲಯದಲ್ಲಿ ಗುಹಾ ಪ್ರವೇಶ ಹಾಗೂ ತೀರ್ಥ ಸ್ನಾನ ಮಂಗಳವಾರ ಆರಂಭಗೊಂಡಿತು.
ಪ್ರವೇಶೋತ್ಸವ ಪ್ರಯುಕ್ತ ಸಾಮೂಹಿಕ ಶನಿಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ದೀಪಾರಾಧನೆ, ರಂಗಪೂಜೆ ಜರಗಿತು. ಗುಹಾಪ್ರವೇಶ-ಗುಹಾತೀರ್ಥಸ್ನಾನ ಅ. ೧೬ರಿಂದ ಆರಂಭಗೊಂಡು ಎಪ್ರಿಲ್ ತಿಂಗಳ ಸಂಕ್ರಮಣದವರೆಗೂ ಪ್ರತಿದಿನ ಬೆಳಿಗ್ಗೆ ೬ರಿಂದ ಮಧ್ಯಾಹ್ನ ೧ರವರೆಗೆ ನಡೆಯುತ್ತದೆ.

Wednesday, October 10, 2012

ಕಟೀಲಿನಲ್ಲಿ ತಾಳಮದ್ದಲೆ ಸಪ್ತಾಹ ಉದ್ಘಾಟನೆ

ಕಟೀಲು ಶ್ರೀ ದುಗಾಱಪರಮೇಶ್ವರೀ ದೇಗುಲದಿಂದ ನಡೆಯುವ ಯಕ್ಷಗಾನ ತಾಳಮದ್ದಲೆ ಸಪ್ತಾಹ ಗುರುರೇವ ಜಗತ್ಸರ್ವಂ ಅಕ್ಟೋಬರ್ .9ರಂದು ಉದ್ಘಾಟನೆಗೊಂಡಿತು. ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಪ್ರಭಾಕರ ಜೋಷಿ, ಪ್ರಾಯೋಜಕರು ಮುಂತಾದವರಿದ್ದರು.

Monday, September 24, 2012

ವಿಜಯಾ ಬ್ಯಾಂಕಿನಿಂದ ಉಳಿತಾಯ ಖಾತೆ ಅಭಿಯಾನ

ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂಔ ಕಾಲೇಜಿನಲ್ಲಿ ವಿಜಯಾ ಬ್ಯಾಂಕಿನಿಂದ ಉಳಿತಾಯ ಖಾತೆ ಅಭಿಯಾನ ನಡೆಯಿತು. ಉದ್ಘಾಟನೆಯನ್ನು ಎಜಿಎಂ ನಾಗರಾಜ ಕೆದಿಲಾಯ ನೆರವೇರಿಸಿದರು. ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಪ್ರಮೋದ್ ಕಾಮತ್, ಲೋಕೇಶ್, ಪ್ರಾಚಾರ್ಯ ಜಯರಾಮ ಪೂಂಜ, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರಿದ್ದರು. 

ಕಟೀಲಿನಲ್ಲಿ ರಕ್ತದಾನ ಶಿಬಿರ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರವನ್ನು ಬಜಪೆ ಪೋಲೀಸ್ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ, ಕಟೀಲಿನ ಅರ್ಚಕ ಕಮಲಾದೇವೀಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಜಿ.ಪಂ.ಶಿಕ್ಷಣ ಆರೋಗ್ಯ ಸಮಿತಿಯ ಈಶ್ವರ ಕಟೀಲ್, ಕ್ಷೇತ್ರ ಬಿಜೆಪಿ ಕಾರ‍್ಯದರ್ಶಿ ಆದರ್ಶ ಶೆಟ್ಟಿ, ಕೇಶವ್, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಅರುಣ್, ಎಕ್ಕಾರು ಗ್ರಾ.ಪಂ. ಸದಸ್ಯ ಚಂದ್ರಹಾಸ್, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.
ಕೆ.ಎಂ.ಸಿ ಆಸ್ಪತ್ರೆ, ವೆನ್‌ಲಾಕ್ ಆಸ್ಪತ್ರೆಗಳ ಸಹಯೋಗದಲ್ಲಿ ರಾಜರತ್ನಪುರ ವೀರಮಾರುತಿ ವ್ಯಾಯಾಮ ಶಾಲೆ, ಕಟೀಲು ಪ್ರೌಢಶಾಲೆ ಹಳೆವಿದ್ಯಾರ್ಥಿ ಸಂಘ, ನಂದಿನಿ ಯುವಕ ವೃಂದ, ಎಕ್ಕಾರು ವಿಜಯ ಯುವ ಸಂಗಮ, ಕಟೀಲ್ ಫ್ರೆಂಡ್ಸ್, ದೇವರಗುಡ್ಡೆ ಕ್ಲಬ್, ಕಟೀಲ್ ಸ್ಪೋರ್ಟ್ಸ್ ಕ್ಲಬ್, ದುರ್ಗಾಂಬಿಕಾ ಯುವಕ ಮಂಡಲ ಮತ್ತಿತರ ಸಂಘಗಳ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ೬೫ ಮಂದಿ ರಕ್ತದಾನ ಮಾಡಿದರು.

Saturday, September 22, 2012

ಕಟೀಲು ಕಾಲೇಜಿನಲ್ಲಿ ಕಂಪ್ಯೂಟರ್ ಕೇಂದ್ರ ಉದ್ಘಾಟನೆ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಆರ್‌ಪಿಎಲ್ ರೂ.ಹತ್ತು ಲಕ್ಷ ರೂ.ನಲ್ಲಿ ಕೊಡುಗೆಯಾಗಿ ನೀಡಿದ ೨೦ಕಂಪ್ಯೂಟರ್‌ಗಳುಳ್ಳ ಕಂಪ್ಯೂಟರ್ ಕೇಂದ್ರವನ್ನು ಶನಿವಾರ ಉದ್ಘಾಟಿಸಲಾಯಿತು. ಎಂಆರ್‌ಪಿಎಲ್‌ನ ಮಹಾ ಪ್ರಬಂಧಕರಾದ ಸಂಜಯ್ ದೀಕ್ಷಿತ್, ಯತಿರಾಜ್ ಸಾಲ್ಯಾನ್, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಾಚಾರ‍್ಯ ಎಂ. ಬಾಲಕೃಷ್ಣ ಶೆಟ್ಟಿ, ಜಿ.ಪಂ.ಸದಸ್ಯ ಈಶ್ವರ್  ಮತ್ತಿತರರಿದ್ದರು.

ಕೃಷಿ ಋಷಿ ಪ್ರಶಸ್ತಿ


ಕಟೀಲು : ಇಲ್ಲಿನ ಕಲಾದೇಗುಲ ಹಾಗೂ ಚಂದ್ರಕಾಂತ ಸೇವಾಶ್ರಮದ ವತಿಯಿಂದ ಕೃಷಿ ಋಷಿ ಪ್ರಶಸ್ತಿಯನ್ನು ಕೃಷ್ಣಪ್ಪ ಪೂಜಾರಿ ಮತ್ತು ರುಕ್ಕು ಪೂಜಾರ‍್ತಿಯವರಿಗೆ ನೀಡಿ ಗೌರವಿಸಲಾಯಿತು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಸಿಂಡಿಕೇಟ್ ಬ್ಯಾಂಕಿನ ಮಂಜುನಾಥ ಮಲ್ಯ, ಸಾಹಿತಿ ಉಮೇಶ ರಾವ್ ಎಕ್ಕಾರು, ದೇವಿಪ್ರಸಾದ್ ಶೆಟ್ಟಿ, ಸಂಘಟಕ ಚಂದ್ರಕಾಂತ ನಾಯಕ್ ಉಪಸ್ಥಿತರಿದ್ದರು.

Tuesday, September 11, 2012

ಕಟೀಲು ಕಾಲೇಜು :ಮುಜರಾಯಿಗೆ ಬೇಡ, ಶಿಕ್ಷಣಕ್ಕೆ ತನ್ನಿ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ನಡೆಸುವ ಪ್ರಥಮ ದರ್ಜೆ ಕಾಲೇಜು ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ನಡೆಸುವ ಕಾಲೇಜುಗಳೆರಡು ಮಾತ್ರ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತಿದ್ದು, ಕಾಲೇಜಿನ ಅಭಿವೃದ್ದಿಗೆ ತೊಡಕಾಗಿದೆ. ಹಾಗಾಗಿ ಕಟೀಲು ಕಾಲೇಜನ್ನು ಉನ್ನತ ಶಿಕ್ಷಣ ಇಲಾಖೆಯಡಿ ತಂದು ಉಪನ್ಯಾಸಕರಿಗೆ ಯುಜಿಸಿ ಸೇರಿದಂತೆ ಕಾಲೇಜಿಗೆ ಎಲ್ಲ ಸವಲತ್ತು ಪಡೆಯುವ ಅವಕಾಶ ಕಲ್ಪಿಸಿ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿಗೆ ಮಂಗಳವಾರ ಕಟೀಲು ಪದವಿ ಕಾಲೇಜಿನಲ್ಲಿ ಉಪನ್ಯಾಸಕರು ಮನವಿ ಸಲ್ಲಿಸಿದರು.
ಶಿಕ್ಷಣಕ್ಕೆ ಸಂಬಂಧಿಸಿ ಧಾರ್ಮಿಕದತ್ತಿ ಇಲಾಖೆಯಲ್ಲಿ ಸರಿಯಾದ ನೀತಿ ನಿಯಮಗಳಿಲ್ಲದಿರುವುದರಿಂದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ತೊಡಕಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಸಮರ್ಪಕವಾಗಿ ನಡೆಸುವುದು ದೇಗುಲಕ್ಕೂ ಕಷ್ಟವಾಗುತ್ತಿದೆ. ಹಾಗಾಗಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನೂ ಶಿಕ್ಷಣ ಇಲಾಖೆಯಡಿ ತರಬೇಕು. ಈ ನಿಟ್ಟಿನಲ್ಲಿ ಮುಜರಾಯಿ ಸಚಿವರೂ ಕೂಡ ಕಾರ‍್ಯಪ್ರವೃತ್ತರಾಗಿದ್ದಾರೆ. ಶಿಕ್ಷಣ ಇಲಾಖೆ ಒಪ್ಪುವುದಷ್ಟೇ ಬಾಕಿಯಿದೆ ಎಂದು ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ ಸಚಿವರನ್ನು ವಿನಂತಿಸಿದರು.
ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ ಸಚಿವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶಿಕ್ಷಣ ಅಂದರೆ ಕೇವಲ ಸರ್ಟಿಫಿಕೇಟ್‌ಗಾಗಿ, ಪದವಿಗಾಗಿ, ಉದ್ಯೋಗಕ್ಕಾಗಿ ಇರುವುದಲ್ಲ. ಅರಿವಿಗಾಗಿ, ಜ್ಞಾನಕ್ಕಾಗಿ ಇರುವುದು. ಶಿಕ್ಷಣದಿಂದಷ್ಟೇ ಸಾಮಾಜಿಕ ಬದಲಾವಣೆ, ಆರ್ಥಿಕ ಸದೃಢತೆ ಸಾಧ್ಯ. ನಮ್ಮ ದೇಶದ ಮೇಲೆ ದಾಳಿ ಮಾಡಿದ ಅಲೆಕ್ಸಾಂಡರ್ ದಿ ಗ್ರೇಟ್ ಎಂದು ನಮ್ಮ ಮೇಲೆ ದಂಡೆತ್ತಿ ಬಂದವರನ್ನು ಹೊಗಳುವ ಪಾಠವನ್ನು ನಮಗೆ ಕಲಿಸಿಕೊಡಲಾಗುತ್ತಿದೆ. ಅರಣ್ಯ ಇಲಾಖೆ ಕಾಡಿನ ರಕ್ಷಣೆಯ ಕಾನೂನು ಮಾಡುವ ಮೊದಲೇ ದೇವರ ಕಾಡು ನಾಗಬನ ಅಂತ ಮರಗಳನ್ನು ರಕ್ಷಿಸುವ ಮೌಲ್ಯಯುತ ಪಾಠವನ್ನು ಕಲಿಸಿದ ನಾಡು ನಮ್ಮದು. ವಿಜ್ಞಾನ, ಶಿಲ್ಪ ಹೀಗೆ ಯಾವುದೇ ಕ್ಷೇತ್ರದಲ್ಲೂ ನಮ್ಮ ನಾಡಿನ ಸಾಧನೆ ಎಲ್ಲರಿಗಿಂತಲೂ ದೊಡ್ಡದು. ನಮ್ಮ ಇತಿಹಾಸದ ಪಾಠಗಳಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಘಟನೆಗಳನ್ನು ಕಲಿಸಬೇಕಾದ ಅಗತ್ಯವಿದೆ ಎಂದು ರವಿ ಹೇಳಿದರು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಮೋನಪ್ಪ ಭಂಡಾರಿ, ಜಿ.ಪಂ.ಸಿಇಒ ಡಾ.ವಿಜಯಪ್ರಕಾಶ್, ಜಿ.ಪಂ.ಸದಸ್ಯ ಈಶ್ವರ್ ಮತ್ತಿತರರಿದ್ದರು. ಉಪನ್ಯಾಸಕ ಸುರೇಶ್ ಕಾರ‍್ಯಕ್ರಮ ನಿರೂಪಿಸಿದರು. ಸೋಂದಾ ಭಾಸ್ಕರ ಭಟ್ ವಂದಿಸಿದರು.

Sunday, September 2, 2012

ಕಟೀಲು : ತುಳು ತಾಳಮದ್ದಲೆ ಸ್ಪರ್ಧೆ


ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇವಸ್ಥಾನ, ಕುರಲ್ ಇಷ್ಟೆರ್, ಎಕ್ಕಾರು ವಿಜಯ ಯುವ ಸಂಗಮ, ತುಳು ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ಒಂದು ವಾರಗಳ ಕಾಲ ನಡೆದ ತುಳು ತಾಳಮದ್ದಲೆ ಸಪ್ತಾಹ ಸಮಾರೋಪಗೊಂಡಿತು. ಸ್ಪರ್ಧೆಯಲ್ಲಿ ವಿಜೇತ ಕಣಂತೂರು ವೈದ್ಯನಾಥೇಶ್ವರ ಕೃಪಾಪೋಷಿತ ಸಂಘ(ಪ್ರಥಮ), ಕಟೀಲು ಯಕ್ಷಮೈತ್ರಿ(ದ್ವಿತೀಯ), ಪಡುಬಿದ್ರೆ ಗಜಾನನ ಯಕ್ಷರಂಗ(ತೃತೀಯ) ಇವರಿಗೆ ಪ್ರಶಸ್ತಿ ವಿತರಿಸಲಾಯಿತು.
ಶಾಸಕ ಅಭಯಚಂದ್ರ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ವಿಜಯನಾಥವಿಠಲ ಶೆಟ್ಟಿ, ಭಾಸ್ಕರ ದೇವಸ್ಯ, ಎಕ್ಕಾರು ಮೋನಪ್ಪ ಶೆಟ್ಟಿ, ಮಧುಸೂಧನ ಆಚಾರ‍್ಯ, ವಾಮನ ಕರ್ಕೇರ, ವಿ.ಕೆ.ಯಾದವ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ


ಕಟೀಲು : ಇಲ್ಲಿನ ದೇಗುಲದಲ್ಲಿ ಅರ್ಚಕರಾಗಿ, ಮೊಕ್ತೇಸರರಾಗಿ, ಜನಮಾನಸದಲ್ಲಿ ನೆಲೆಯಾಗಿರುವ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಕಾರ‍್ಯಕ್ರಮ ನಡೆಯಿತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಾಂಸದ ನಳಿನ್ ಕುಮಾರ್, ಜಿ.ಪಂ.ಸದಸ್ಯ ಈಶ್ವರ್, ಮುಂಬೈನ ಪ್ರಕಾಶ್ ಭಂಡಾರಿ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ವೆಂಕಟೇಶ ರಾವ್, ಲೀಲಾಕ್ಷ ಕರ್ಕೇರ, ದೇವಪ್ರಸಾದ್, ಪಿ.ಸತೀಶ್ ರಾವ್ ಭುವನಾಭಿರಾಮ ಉಡುಪ, ಸಂಘಟಕ ಲಕ್ಷ್ಮೀನಾರಾಯಣ ಆಸ್ರಣ್ಣ ಮುಂತಾದವರಿದ್ದರು.
ಕುಳಾಯಿ ವಿಷ್ಣುಮೂರ್ತಿ ದೇಗುಲದ ಕೃಷ್ಣ ಹೆಬ್ಬಾರ್, ಕಾವೂರು ಮಹಾಲಿಂಗೇಶ್ವರ ದೇಗುಲದ ಶ್ರೀನಿವಾಸ ಭಟ್‌ರನ್ನು ಸಂಮಾನಿಸಲಾಯಿತು. ಸಂಪಾಜೆ ಶೀನಪ್ಪ ರೈ, ಸೀತಾರಾಮ ಕುಮಾರ್‌ರಿಗೆ ಆಸ್ರಣ್ಣ ಪ್ರಶಸ್ತಿ ನೀಡಲಾಯಿತು.

Monday, August 27, 2012

ಕಟೀಲು:ತುಳು ತಾಳಮದ್ದಲೆ ಸ್ಪರ್ಧೆ ಉದ್ಘಾಟನೆ


ಕಟೀಲು : ಮಾತೃಭಾಷೆಯಿಂದ ಮಕ್ಕಳಿಗೆ ಸಂಸ್ಕೃತಿಯನ್ನು ಹೆಚ್ಚು ಅರ್ಥ ಪೂರ್ಣವಾಗಿ ತಿಳಿಸಲು ಸಾಧ್ಯವೆಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಎಂ.ಆರ್.ವಾಸುದೇವ ಹೇಳಿದರು.
ಅವರು ಕಟೀಲು ಶ್ರೀದುರ್ಗಾಪರಮಶ್ವರೀ ದೇವಳದ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ವಿಜಯ ಯುವ ಸಂಗಮ ಎಕ್ಕಾರು ಇವರ ಸಂಯೋಜನೆಯಲ್ಲಿ ಕುರಲ್ ಇಷ್ಟೆರ್ ಕುಡ್ಲ ಇವರ ೨೦ನೇ ವರ್ಷಾಚರಣೆಯ ಪ್ರಯುಕ್ತ ಏಳು ದಿನಗಳ ತುಳು ತಾಳಮದ್ದಲೆ ಸ್ಪರ್ದೆ ಉದ್ಘಾಟಿಸಿ ಮಾತನಾಡಿದರು.
ದೇವಳದ ಆಡಳಿತಾಧಿಕಾರಿ ಡಾ.ಹರೀಶ್ ಕುಮಾರ್ ಚೆಂಡೆ ಬಾರಿಸಿ ಸ್ಪರ್ದೆಗೆ ಚಾಲನೆ ನೀಡಿದರು. ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ,  ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಉಮಾನಾಥ ಕೋಟ್ಯಾನ್, ಬಜ್ಪೆ ವ್ಯವಸಾಯ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ವಿಜಯ ಯುವ ಸಂಗಮದ ಬಾಲಕೃಷ್ಣ ಶೆಟ್ಟಿ, ಬಾಲಕೃಷ್ಣ ಆಚಾರ್ಯ ವೇದಿಕೆಯಲ್ಲಿದ್ದರು.
ಕಟೀಲು ಮಕ್ಕಳ ಮೇಳದ ಬಾಲಕಲಾವಿದರು ತುಳು ಯಕ್ಷಗಾನ ಪದ್ಯದ ಮೂಲಕ ಪ್ರಾರ್ಥನೆ ಹಾಡಿದರು. ಕುರಲ್ ಇಷ್ಟೆರ್ ಕುಡ್ಲ ಅಧ್ಯಕ್ಷ ವಾಮನ ಕರ್ಕೇರ ಕೊಲ್ಲೂರು ಸ್ವಾಗತಿಸಿದರು. ವಿ.ಕೆ.ಯಾದವ್ ಪ್ರಸ್ತಾವಿಸಿದರು. ರಾಮದಾಸ್ ಪಾವಂಜೆ ನಿರೂಪಿಸಿದರು. ನಿತೇಶ್ ವಂದಿಸಿದರು.


Monday, August 20, 2012

ಬಿಸಿರೋಡು ಮೂಲ್ಕಿ ಹೆದ್ದಾರಿಗೆ ರೂ.೨೦೦ಕೋಟಿ


ಕಟೀಲು : ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ಆಗಿ ಮೂಲ್ಕಿ ಕಿನ್ನಿಗೋಳಿ ಕಟೀಲು ಪೊಳಲಿ ಬಿಸಿರೋಡು ಹೆದ್ದಾರಿಯನ್ನು ೨೦೦ ಕೋಟಿ ರೂ.ನಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹೇಳಿದ್ದಾರೆ.
ಅವರು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಈ ವಿವರ ನೀಡಿದರು.
ಪ್ರತಿ ಮನೆಗೆ ವಿದ್ಯುತ್ ನೀಡುವ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ದಕ್ಷಿಣ ಕನ್ನಡಕ್ಕೆ ೬೦ಕೋಟಿ ರೂ. ಉಡುಪಿಗೆ ೨೦ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದ ಮೊಯಿಲಿ ಒಂದು ಮೆಗಾವ್ಯಾಟ್ ಅಥವಾ ಅದಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಜಲ, ಸೌರ ಇತ್ಯಾದಿ ಮೂಲಗಳ ಯೋಜನೆಗಳಿಗೆ ಕೇಂದ್ರ ಸರಕಾರ ಖಾಸಗಿಯರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಮಾಹಿತಿ ನೀಡಿದರು. ಶಾಸಕ ಅಭಯಚಂದ್ರ, ಅರ್ಚಕ ವೆಂಕಟರಮಣ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ ಮತ್ತಿತರರಿದ್ದರು.
ಸಭಾಭವನ ಉದ್ಘಾಟನೆ
ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸ್ಮರಣಾರ್ಥ ನೂತನ ಸಭಾಭವನವನ್ನು ವೀರಪ್ಪ ಮೊಯಿಲಿ ಉದ್ಘಾಟಿಸಿದರು. ಶಾಸಕ ಅಭಯಚಂದ್ರ, ಮಾಜಿ ಸಚಿವ ಅಮರನಾಥ ಶೆಟ್ಟಿ, ಮಾಲತಿ ಮೊಯಿಲಿ, ಪ್ರದೀಪಕುಮಾರ ಕಲ್ಕೂರ, ವೆಂಕಟೇಶ ರಾವ್, ಹರಿಕೃಷ್ಣ ಪುನರೂರು, ಎಂ. ಬಾಲಕೃಷ್ಣ ಶೆಟ್ಟಿ, ಪಿ.ಸತೀಶ್ ರಾವ್, ಭುವನಾಭಿರಾಮ ಉಡುಪ, ಸಭಾಭವನದ ಮಾಲಕ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತಿತರರಿದ್ದರು.

Saturday, August 18, 2012

ಕಟೀಲು ಅಪಘಾತ :ವಾಸುದೇವ ಉಡುಪ ಸಾವು



ಕಟೀಲು : ಇಲ್ಲಿನ ಅಜಾರಿನಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಬಳಿ ಬಸ್ಸಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ವಾಸುದೇವ ಉಡುಪ(೫೩ವ.) ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕಟೀಲು ದುರ್ಗಾಪರಮೇಶ್ವರೀ ದೇಗುಲದಲ್ಲಿ ಶಾಂತಿವಿಲೇದಾರ ಕೆಲಸ ಮಾಡುತ್ತಿರುವ ವಾಸುದೇವ ಉಡುಪ ಕಳೆದ ಹತ್ತು ವರುಷಗಳಿಂದ ದೇಗುಲದಲ್ಲಿ ಉತ್ಸವ ಅಲ್ಲದೆ ಇತರ ಸಂದರ್ಭದಲ್ಲಿ ದೇವರು ಹೊರುವ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ದೇಗುಲದಲ್ಲಿ ಶಾಂತಿ ಕೆಲಸ ಮುಗಿಸಿ, ಗಿಡಿಗೆರೆ ಬಳಿಯ ಮನೆಗೆ ಹೋಗುತ್ತಿದ್ದಾಗ ಬಸ್ಸು ಡಿಕ್ಕಿ ಹೊಡೆದು ಮೃತಪಟ್ಟರು. ದೇಗುಲದ ಅರ್ಚಕರು, ಸಿಬಂದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Wednesday, August 15, 2012

ವಾಲಿಬಾಲ್ ಕಟೀಲು ಕಾಲೇಜು ತಂಡಕ್ಕೆ ಪ್ರಶಸ್ತಿ


ಕಟೀಲು : ಇಲ್ಲಿನ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ಆಯೋಜಿಸಿದ ಸ್ವಾತಂತ್ರ್ಯೋತ್ಸವ ಕಪ್ ವಾಲಿಬಾಲ್ ಪಂದ್ಯಾಟದಲ್ಲಿ ಕಟೀಲು ಪದವಿ ಕಾಲೇಜು ತಂಡ ಪ್ರಥಮ ಹಾಗೂ ಸೋಟ್ಸ್ ಮತ್ತು ಗೇಮ್ಸ್ ಕ್ಲಬ್ ತಂಡ ದ್ವಿತೀಯ ಪ್ರಶಸ್ತಿ ಪಡೆದವು. ಬಹುಮಾನ ವಿತರಣೆಯನ್ನು ಜಿ.ಪಂ.ಸದಸ್ಯ ಈಶ್ವರ್, ಕೇಶವ್, ವೆಂಕಟರಮಣ ಮಯ್ಯ, ಸುಂದರಪೂಜಾರಿ, ಜಯರಾಮ ರೈ, ವಿಜಯಕುಮಾರ್, ಕೃಷ್ಣ ಮುಂತಾದವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

Tuesday, August 7, 2012

ಕಟೀಲು ಕಾಲೇಜು ವಿದ್ಯಾರ್ಥಿ ಸಂಘ, ವಾರ್ಷಿಕಾಂಕ ಉದ್ಘಾಟನೆ


ಕಟೀಲು : ಮನೆಯಲ್ಲಿ ಅಮ್ಮ ಎಲ್ಲ ಕೋಣೆಗಳನ್ನು ಗುಡಿಸಲು ಬಳಸಿ ಬಳಸಿ ಕಸಬರಿಕೆ ಸಣ್ಣದಾಗುತ್ತಿದ್ದಂತೆ ಅದನ್ನು ಬಚ್ಚಲು ಮನೆ ಗುಡಿಸಲು ಉಪಯೋಗಿಸುತ್ತಾಳೆ. ಅದು ಮತ್ತೂ ಸಣ್ಣದಾಗುತ್ತಿದ್ದಂತೆ ಮನೆ ಅಂಗಳ ಗುಡಿಸಲು ಬಳಕೆಯಾಗುತ್ತದೆ. ಅಂದರೆ ನಮ್ಮಲ್ಲಿ ಒಂದು ವಸ್ತು ಎಷ್ಟು ಸಾಧ್ಯವೋ ಅಷ್ಟು ಸದ್ಬಳಕೆಯಾಗುತ್ತದೆ. ಆದರೆ ವಿದೇಶೀ ಕಂಪನಿಗಳು ಬಳಸಿ ಎಸೆಯುವ ಕೊಳ್ಳಬಾಕ ಸಂಸ್ಕೃತಿಯನ್ನು ನಮ್ಮ ಮೇಲೆ ಯಾವ ಪರಿ ಹೇರುತ್ತಿದೆಯೆಂದರೆ ಹೊಸ ಮಾಡೆಲ್ ಮೊಬೈಲ್ ಬಂದ್ರೆ ಹಳೆಯದನ್ನು ಎಸೆಯುತ್ತೇವೆ. ಟಿವಿ, ಕಾರು ಹೀಗೆ ಎಲ್ಲವನ್ನೂ ಹೊಸ ಮಾಡೆಲ್ ಬಂದಾಕ್ಷಣ ಎಸೆಯುತ್ತೇವೆ. ಇದು ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಹೊಸ ಹುಡುಗಿ ಬಂದ ಕೂಡಲೇ ಹಳೆಯ ಹೆಂಡತಿಯನ್ನು ಮರೆತು ಬಿಡುವತನಕ ಮುಂದುವರಿದಿದೆ. ಬೆಂಗಳೂರಿನಲ್ಲಿ ತಿಂಗಳಿಗೆ ಸಾವಿರ ಸಂಖ್ಯೆಯಲ್ಲಿ ಡೈವೋರ್ಸ್ ನಡೆಯುತ್ತಿದೆ ಎಂದು ಹೇಳಿದ್ದು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕರಾದ ಪ್ರಭಾಕರ ಭಟ್.
ಅವರು ಮಂಗಳವಾರ ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಡಿಮೆ ಬಟ್ಟೆ ತೊಟ್ಟವಳು ವಿಶ್ವಸುಂದರಿಯಾಗಿ ಆಯ್ಕೆಯಾಗುವುದು ಸರಿಯಲ್ಲ. ಮಹಿಳೆಗೆ ದೇವರ ಸ್ಥಾನ ಕೊಟ್ಟ ಪುಣ್ಯ ಭೂಮಿ ನಮ್ಮದು. ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ. ಮಂಗಳೂರಿನ ಹೋಂಸ್ಟೇಯಲ್ಲಿನ ಹಲ್ಲೆಯನ್ನು ಸಮರ್ಥಿಸಲಾಗದು. ಆದರೆ ಹುಡುಗಿಯರ ಉಡುಗೆಗಳಲ್ಲಿನ ಜಿಪುಣತನ, ಸ್ವೇಚ್ಛಾಚಾರ ಇಂತಹ ದಾಳಿಗಳಿಗೆ ಕಾರಣವಾಗುತ್ತದೆ ಎಂದು ಪ್ರಭಾಕರ ಭಟ್ ಹೇಳಿದರು.
ಕಾಲೇಜಿನ ವಾರ್ಷಿಂಕಾಕ ಇಂಚರವನ್ನು ದೇಗುಲದ ಆಡಳಿತಾಧಿಕಾರಿ ಹರೀಶ್ ಕುಮಾರ್ ಬಿಡುಗಡೆಗೊಳಿಸಿದರು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕ ವಿಜಯ್ ವಿ, ವಿದ್ಯಾರ್ಥಿ ಸಂಘದ ಶಮಿತ್, ರವೀಂದ್ರ ಶೆಟ್ಟಿ, ಶುಶೀಲ್ ಕುಮಾರ್, ಪ್ರಿಯಾಂಕ ಮತ್ತಿತರರಿದ್ದರು.

ಅಂಬಿಕಾ ಭೇಟಿ

ಖ್ಯಾತ ಚಿತ್ರ ನಟಿ ಅಂಬಿಕಾ ಕಟೀಲು ದೇಗುಲಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಅರ್ಚಕ ಅನಂತ ಆಸ್ರಣ್ಣ ಪ್ರಸಾದ ನೀಡಿದರು. ತುಳು ಸಾಹಿತ್ಯ ಅಕಾಡಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. 

ಸಂಗೀತ ಸೇವೆ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅಮೇರಿಕಾದಲ್ಲಿ ನೆಲೆಸಿರುವ ಗಾಯಕಿ ಲಲಿತಾ ಬದ್ರಿನಾಥ್ ಮತ್ತು ಬಳಗದವರಿಂದ ಸಂಗೀತ ಸೇವೆ ನಡೆಯಿತು.


Friday, August 3, 2012

ಕಟೀಲು ಪ್ರೌಢಶಾಲೆಯಲ್ಲಿ ೧೯೦ಸೈಕಲ್ ವಿತರಣೆ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಎಂಟನೇ ತರಗತಿಯ ಎಲ್ಲ ೧೯೦ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ನೀಡಲಾಗುವ ಸೈಕಲ್‌ಗಳನ್ನು ಶಾಸಕ ಅಭಯಚಂದ್ರ ವಿತರಿಸಿದರು. ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಬೇಬಿ, ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಪ್ರಾಚಾರ‍್ಯ ಸುರೇಶ್ ಭಟ್,ಅರ್ಚಕ ಹರಿ ಆಸ್ರಣ್ಣ ಮತ್ತಿತರರಿದ್ದರು.

ಕಟೀಲಿಂದ ಧರ್ಮಸ್ಥಳ, ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್


ಕಟೀಲು : ಅತಿ ಶೀಘ್ರದಲ್ಲಿ ಕಟೀಲು ಕ್ಷೇತ್ರದಿಂದ ಧರ್ಮಸ್ಥಳಕ್ಕೆ ವೈಭವ ಬಸ್ಸು ಹಾಗೂ ಮೂಲ್ಕಿಯಿಂದ ಹೊರಟು ಕಟೀಲಿಗಾಗಿ ಮೂಡುಬಿದ್ರೆ ಬಿಸಿರೋಡು ಮಾರ್ಗವಾಗಿ ಬೆಂಗಳೂರಿಗೆ ರಾಜಹಂಸ ಮತ್ತು ವೋಲ್ವೋ ಬಸ್ಸುಗಳು ಹೊರಡಲಿವೆ ಎಂದು ಕೆಎಸ್‌ಆರ್‌ಟಿಸಿ ಆಡಳಿತ ನಿರ್ದೇಶಕ ಮಂಜುನಾಥ ಪ್ರಸಾದ ತಿಳಿಸಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಈ ಮಾಹಿತಿ ನೀಡಿದರು. ಅರ್ಚಕ ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ ಪ್ರಸಾದ ನೀಡಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಡಿಟಿಒ ಶ್ರೀರಾಂ, ನಾಗರಾಜ ಶಿರಾಲಿ, ಮಹೇಶ್ ಜೊತೆಗಿದ್ದರು.

Thursday, August 2, 2012

ಸ್ಯಾಕ್ಸೋಫೋನ್ ವಾದನ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಪದ್ಮಶ್ರೀ ಕದ್ರಿ ಗೋಪಾಲನಾಥ್‌ರಿಂದ ಗುರುವಾರ ಸ್ಯಾಕ್ಸೋಫೋನ್ ವಾದನ ಸೇವೆ ನಡೆಯಿತು. 

ಪರ್ಜನ್ಯ ಜಪ, ಪ್ರಾರ್ಥನೆ, ಹೋಮ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗುರುವಾರ ಪರ್ಜನ್ಯ ಜಪ, ಪ್ರಾರ್ಥನೆ, ಹೋಮ ನಡೆಯಿತು. ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಆಸ್ರಣ್ಣ, ಹರಿ ಆಸ್ರಣ್ಣ, ದೇಗುಲದ ಆಡಳಿತಾಧಿಕಾರಿ ಹರೀಶ್ ಕುಮಾರ್, ಪ್ರಬಂಧಕ ವಿಶ್ವೇಶ ರಾವ್, ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಬೇಬಿ, ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಾಧ್ಯಕ್ಷ ಜನಾರ್ದನ ಮತ್ತಿತರರಿದ್ದರು.



Saturday, July 28, 2012

ಪ್ಲಾಸ್ಟಿಕ್ ಸೌಧ ಉದ್ಘಾಟನೆ


ಕಟೀಲು : ಮೆನ್ನಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಕಟೀಲು ಪ್ರಥಮ ದರ್ಜೆ ಕಾಲೇಜು ಬಳಿ ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾದ ಪ್ಲಾಸ್ಟಿಕ್ ಸೌಧವನ್ನು ದ.ಕ.ಜಿ.ಪಂ. ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿಯ ಈಶ್ವರ್ ಕಟೀಳ್ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಾಧ್ಯಕ್ಷ ಜನಾರ್ದನ, ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಕೇಶವ ಎಚ್, ಪಂ.ಸದಸ್ಯರಾದ ಹರಿಶ್ಚಂದ್ರ ರಾವ್, ಶಕ್ತಿಪ್ರಸಾದ್, ರೇವತಿ, ರೋಸಿ ಪಿಂಟೊ, ರಾಮ್‌ಗೋಪಾಲ್, ಕ್ಲಬ್‌ನ ವೆಂಕಟರಮಣ ಮಯ್ಯ, ಕೇಶವ್, ಮತ್ತಿತರಿದ್ದರು.

Friday, July 27, 2012

ಕಟೀಲಿನಲ್ಲಿ ಮಳೆಗಾಗಿ ಪರ್ಜನ್ಯಜಪ

ಕಟೀಲು : ಮುಜರಾಯಿ ಇಲಾಖೆಯ ಸೂಚನೆಯಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ೫೦೮ ಬೊಂಡಾಭಿಷೇಕ, ಪರ್ಜನ್ಯ ಜಪ ಪಠಣ, ಪೂಜೆ ನಡೆಯಿತು. ಮೊಕ್ತೇಸರ ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಪ್ರಬಂಧಕ ವಿಶ್ವೇಶ್ವರ ರಾವ್ ಮತ್ತಿತರರಿದ್ದರು.
೨೦೦೧ ಹಾಗೂ ೨೦೦೨ರಲ್ಲೂ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದ್ದ ಸಂದರ್ಭ ಸುಮಾ ವಸಂತ್ ಮುಜರಾಯಿ ಸಚಿವೆಯಾಗಿದ್ದಾಗ ರಾಜ್ಯಕ್ಕೆ ಬರಗಾಲ ಬಂದ ಸಂದರ್ಭ ಇದೇ ರೀತಿ ಎಲ್ಲ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆ, ಪರ್ಜನ್ಯ ಜಪ, ಯಾಗ ನಡೆಸುವಂತೆ ಆದೇಶ ನೀಡಲಾಗಿತ್ತು. ಆ ಸಂದರ್ಭ ಮೂರು ಸಾವಿರ ರೂ.ಗಿಂತ ಹೆಚ್ಚು ಖರ್ಚಿಲ್ಲದಂತೆ ಪೂಜೆ ನಡೆಸಲು ಸೂಚಿಸಲಾಗಿತ್ತು. ಈ ಬಾರಿ ಆದೇ ರೀತಿಯ ಆದೇಶ ಮಾಡಲಾಗಿದ್ದು, ಖರ್ಚಿನಲ್ಲಿ ಮಾತ್ರ ಐದು ಸಾವಿರ ರೂ.ಗಳಿಗೆ ಏರಿಸಲಾಗಿದೆ. ಈ ಖರ್ಚನ್ನು ದೇಗುಲಗಳೇ ಭರಿಸಲು ಸೂಚಿಸಲಾಗಿತ್ತು.

Tuesday, July 10, 2012

ಕಟೀಲು ಆಡಳಿತಾಧಿಕಾರಿಯಾಗಿ ಹರೀಶ್ ಕುಮಾರ್


ಕಟೀಲು : ರಾಜ್ಯದಲ್ಲಿ ಆದಾಯದಲ್ಲಿ ನಾಲ್ಕನೆಯ ಸ್ಥಾನದಲ್ಲಿರುವ ಮುಜರಾಯಿ ದೇಗುಲವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತಾಧಿಕಾರಿಯಾಗಿ ಮಂಗಳೂರಿನ ಕಮಿಷನರ್ ಹರೀಶ್ ಕುಮಾರ್ ಮಂಗಳವಾರ(ಜುಲೈ೧೦) ಅಧಿಕಾರ ಸ್ವೀಕರಿಸಿದರು. ಪುತ್ತೂರಿನಲ್ಲಿ ಸಹಾಯಕ ಆಯುಕ್ತರಾಗಿದ್ದಾಗ ಸುಬ್ರಹ್ಮಣ್ಯ ದೇಗುಲದಲ್ಲಿ ಆಡಳಿತಾಧಿಕಾರಿಯಾಗಿ ಹೆಸರು ಮಾಡಿದ್ದ ಹರೀಶ್ ಕುಮಾರ್ ಕಟೀಲಿನಲ್ಲೂ ಅಭಿವೃದ್ಧಿ ಕಾರ‍್ಯಗಳಿಗೆ ವೇಗ ಕೊಡಬಹುದು ಎಂಬ ನಿರೀಕ್ಷೆ ಸ್ಥಳೀಯರದ್ದು. ಈವರೆಗೆ ಮಂಗಳೂರು ಸಹಾಯಕ ಆಯುಕ್ತ ವೆಂಕಟೇಶ್ ಆಡಳಿತಾಧಿಕಾರಿಯಾಗಿದ್ದರು. 



Sunday, June 24, 2012

ಮಕ್ಕಳ ಮೇಳದ ಕಲಾವಿದರಿಗೆ ಸಂಮಾನ


ಕಟೀಲು ಶ್ರೀದುರ್ಗಾ ಮಕ್ಕಳ ಮೇಳದ ಕಲಾವಿದರ ಸದಸ್ಯರಾದ, ಕಲಿಕೆಯಲ್ಲಿ ಸಾಧನೆಗೈದ ಅನುಜ್ಞಾ ಭಟ್, ಅಶ್ವಿನಿ ಕೆ.ಎಸ್, ಸುಶ್ಮಿತಾರನ್ನು ನಗದು ಬಹುಮಾನ ನೀಡಿ ಸಂಮಾನಿಸಲಾಯಿತು. ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ, ಮಾಲತಿ ಭಟ್, ವಾಸುದೇವ ಶೆಣೈ, ಲೀಲಾವತಿ ಬೈಪಡಿತ್ತಾಯ, ಬಲಿಪ ಶಿವಶಂಕರ ಭಟ್, ರಾಜೇಶ್ ಐ ಕಟೀಲು, ಪಶುಪತಿ ಶಾಸ್ತ್ರಿ, ದಯಾನಂದ ಮಾಡ ಮತ್ತಿತರರಿದ್ದರು.

ಸಂಮಾನ

ಕಟೀಲು ವಿಜಯಾಬ್ಯಾಂಕ್ ಶಾಖೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಲೋಕೇಶ್ ಅಂಚನ್‌ರ ಪುತ್ರಿ, ನಿಶ್ಚಿತಾರನ್ನು ಸಂಮಾನಿಸಲಾಯಿತು. ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಅಧಿಕಾರಿ ರಮೇಶ್, ಮತ್ತಿತರರಿದ್ದರು. ಚಿತ್ರ ಈಮೆಲ್

Sunday, May 27, 2012

ಕಟೀಲು ಮೇಳಗಳ 2011-12ರ ತಿರುಗಾಟ ಮುಕ್ತಾಯ

ಕಟೀಲು ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟ ಶುಕ್ರವಾರ ರಾತ್ರಿ ಕೊನೆಯ ಸೇವೆಯಾಟದೊಂದಿಗೆ ಮುಕ್ತಾಯಗೊಂಡಿತು. ಕಲಾವಿದರು ಭ್ರಾಮರೀಯ ಸನ್ನಿಧಿಯಲ್ಲಿ ಇನ್ನೂರು ಕಲಾವಿದರು ಗೆಜ್ಜೆ ಬಿಚ್ಚುವ ಮೂಲಕ ಈ ವರ್ಷದ ತಿರುಗಾಟ ಮುಗಿಸಿದರು. ಇನ್ನೂ ಐದಾರು ತಿಂಗಳುಗಳ ಸುದೀರ್ಘ ರಜಾಕಾಲ. ಮಳೆಗಾಲದಲ್ಲಿ ಅನೇಕ ಕಲಾವಿದರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರೆ, ಕೆಲವರು ಮಳೆಗಾಲದಲ್ಲೂ ಆಟ, ಕೂಟಗಳಲ್ಲಿ ಬ್ಯುಸಿಯಾಗಲಿದ್ದಾರೆ. ಮುಂಬೈ, ದುಬೈಗಳಿಗೆ ಯಕ್ಷಗಾನ ಪ್ರವಾಸಕ್ಕೂ ಸಿದ್ಧರಾದವರೂ ಇದ್ದಾರೆ. ಇನ್ನು ಕೆಲವರು ಅಲ್ಲಲ್ಲಿ ಯಕ್ಷಗಾನ ತರಗತಿಗಳಿಗೆ ಶಿಕ್ಷಕರಾಗಿ ಕ್ರಿಯಾಶೀಲರಾಗುತ್ತಾರೆ. ಮತ್ತೆ ಅನೇಕರು ಕೂಲಿಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಬೆರಳೆಣಿಕೆಯ ಮಂದಿ ಈವರೆಗೆ ದುಡಿದದ್ದನ್ನು ಕುಡಿದು, ತಿರುಗಿ ದಿನಕಳೆಯುತ್ತಾರೆ. ಇದು ಕಟೀಲು ಮಾತ್ರವಲ್ಲ ಹೆಚ್ಚಿನೆಲ್ಲ ಮೇಳಗಳ ಕಲಾವಿದರ ರಜಾ ಕಾಲದ ಬದುಕು.