Friday, October 28, 2011

ಎಂಟು ಕೃತಿಗಳ ಬಿಡುಗಡೆ



ಸಾಹಿತ್ಯದಿಂದ ಉತ್ತಮ ವಾತಾವರಣ- ಕೋಟ ಶ್ರೀನಿವಾಸ ಪೂಜಾರಿ

ಕಿನ್ನಿಗೋಳಿ : ಸಾಹಿತ್ಯದಿಂದ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಓದುವಿಕೆ ಎಲ್ಲರ ಹವ್ಯಾಸವಾಗಬೇಕು. ಸಾಹಿತ್ಯ ರಚಿಸಿದ ಎಷ್ಟೋ ಬರಹಗಾರರು ಆರ್ಥೀಕವಾಗಿ ಶ್ರೀಮಂತರಾಗಿರುವುದಿಲ್ಲ. ಅಥವಾ ಅವರನ್ನು ಪ್ರೋತ್ಸಾಹಿಸುವವರಿರುವುದಿಲ್ಲ. ಈ ಹಿನ್ನಲೆಯಲ್ಲಿ ಸಾಹಿತಿಗಳನ್ನು ಬೆಂಬಲಿಸುವ ಕಾರ‍್ಯ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಗುರುವಾರ ಸಂಜೆ ಕಿನಿಗೋಳಿಯ ನೇಕಾರ ಸೌಧದಲ್ಲಿ ನಡೆದ ಅನಂತ ಪ್ರಕಾಶ ಸಂಸ್ಥೆಯ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ ಎಂಟು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಡಾ.ವಿಶ್ವನಾಥ ಕಾರ್ನಾಡರ ಸಾಹಿತ್ಯ ಲೇಖನಗಳ ಸ್ಪಂದನ, ಕೆ.ಜಿ.ಭದ್ರಣ್ಣವರ ಹನಿಗವನ ಭಂಡಾರ, ಸೂರ‍್ಯನಾರಾಯಣ ರಾವ್‌ರ ಕೋಟಿ ಚೆನ್ನಯ ನಾಟಕ, ಮಸುಮರ ನಾಟಕ ಹಬಾಶಿಕಾ, ಕವನ ಸಂಕಲನ ಮಕರಂದ, ವಿಶ್ವಂಭರ ಉಪಾಧ್ಯಾಯರ ನಾಗನೂಪುರ, ಅರ್ಪಿತಾರ ಮಳೆಬಿಲ್ಲು, ಕೆ.ಜಿ.ಸುಪ್ರದಾ ರಾವ್‌ರ ಕವನ ಸಂಕಲನ ನಾಡು ಹಾಡು ಬಿಡುಗೊಳಿಸಲಾಯಿತು.

ಉಮೇಶ್ ರಾವ್ ಎಕ್ಕಾರು, ಉಪೇಂದ್ರ ಸೋಮಯಾಜಿ ಮತ್ತಿತರರಿದ್ದರು. ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಸ್ವಾಗತಿಸಿದರು. ಗಾಯತ್ರೀ ಉಡುಪ ಕಾರ‍್ಯಕ್ರಮ ನಿರೂಪಿಸಿದರು. ಬಳಿಕ ನಿಡ್ಲೆ ಮಹಾಗಣಪತಿ ಮಂಡಳಿಯವರಿಂದ ಹರಿದರ್ಶನ ಯಕ್ಷಗಾನ ಜರಗಿತು.

ಬಂಗಾರದ ಸರ ಕಾಣಿಕೆ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಮಂಗಳೂರಿನ ಉದ್ಯಮಿ ಮನಮೋಹನ ಮಲ್ಲಿ ದಂಪತಿಗಳು ೧೯೮ಗ್ರಾಂ. ತೂಕದ ನವದುರ್ಗೆಯರ ಪದಕವುಳ್ಳ ಬಂಗಾರದ ಸರವನ್ನು ಕಾಣಿಕೆಯಾಗಿ ನೀಡಿದರು.
ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದರು.

Monday, October 24, 2011

ಯಕ್ಷಗಾನ, ಜಾನಪದ ವಿದ್ವಾಂಸ ಪು.ಶ್ರೀನಿವಾಸ ಭಟ್ಟ ಇನ್ನಿಲ್ಲ


ಕಟೀಲು : ನಿವೃತ್ತ ಶಿಕ್ಷಕ, ಯಕ್ಷಗಾನ, ಜಾನಪದ ವಿದ್ವಾಂಸ ಪು.ಶ್ರೀನಿವಾಸ ಭಟ್(೭೨ವ.) ಸೋಮವಾರ ಕಟೀಲಿನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಸೋಮವಾರ ಬೆಳಿಗ್ಗೆ ಬಜಪೆಯ ಬಂಟ್ಸ್ ಪಾಪ್ಯುಲರ್ ಶಾಲೆಯಲ್ಲಿ ದೀಪಾವಳಿ ಆಚರಣೆ ಕಾರ‍್ಯಕ್ರಮದಲ್ಲಿ ಉಪನ್ಯಾಸ ಮುಗಿಸಿ, ರಿಕ್ಷಾದಲ್ಲಿ ಮನೆಗೆ ಬಂದು ಕೂತ ಶ್ರೀನಿವಾಸ ಭಟ್ಟರು ಹೃದಯಾಘಾತವಾಗಿ ಕುಸಿದು ಮೃತಪಟ್ಟರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಕಟೀಲು ಪ್ರಾಥಮಿಕ ಶಾಲೆಯಲ್ಲಿ ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶ್ರೀನಿವಾಸ ಭಟ್ಟರು, ಯಕ್ಷಗಾನ ಕಲಾವಿದರು, ಶ್ರೀ ದೇವೀ ಶತಕ, ದಾವಿದ ವಿಜಯ ಯಕ್ಷಗಾನ ಪ್ರಸಂಗ, ಕೋಲ ಬಲಿ, ಜನಪದ ಶತಪಥ, ಶ್ರೀ ಗಣಪತಿ ಶತ ಕಥಾವಳಿ, ತುಳು ದೇವೀ ಮಾಹಾತ್ಮ್ಯೆ, ಶ್ರೀ ಕೃಷ್ಣ ದೇವರಾಯ ಸೇರಿದಂತೆ ಹನ್ನೊಂದು ಕೃತಿಗಳನ್ನು ರಚಿಸಿದ್ದರು. ನಾಡಿನ ವಿವಿಧ ಪತ್ರಿಕೆಗಳಿಗೆ ೫೫೦ಕ್ಕೂ ಹೆಚ್ಚು ಮೌಲಿಕ ಲೇಖನಗಳನ್ನು ಬರೆದಿದ್ದರು. ಕುಬೆವೂರು ಪುಟ್ಟಣ್ಣ ಶೆಟ್ಟಿ, ಕೊ.ಅ.ಉಡುಪ ಪ್ರಶಸ್ತಿ, ಸುರಗರಿ ಗುರುರಾಜ ಪ್ರಶಸ್ತಿ, ತಾಲೂಕು ಸಮ್ಮೇಳನ, ಮುಂಬೈ ಯಕ್ಷಗಾನ ಸಮ್ಮೇಳನ, ತುಳು ಅಕಾಡಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ೪೦ಕಡೆಗಳಲ್ಲಿ ಸಂಮಾನ ಗೌರವ ಪಡೆದಿದ್ದರು. ವಿವಿಧೆಡೆ ಯಕ್ಷಗಾನ ತಾಳಮದ್ದಲೆಗಳ ತೀರ್ಪುಗಾರರಾಗಿ, ಅಷ್ಟಾವಧಾನ ಪೃಚ್ಚಕರಾಗಿ, ನೂರಾರು ಕಡೆ ಉಪನ್ಯಾಸಗಳನ್ನು ನೀಡಿದ್ದರು.
ಕಟೀಲಿನಲ್ಲಿ ಯಕ್ಷಗಾನೀಯ ವಾತಾವರಣವನ್ನುಂಟು ಮಾಡಿದವರಲ್ಲಿ ಭಟ್ಟರೂ ಒಬ್ಬರು. ಸಾವಿರಾರು ಅಮೂಲ್ಯ ಕೃತಿಗಳ ಸಂಗ್ರಾಹರಾಗಿ, ಪರಿಸರದ ಶಿಲಾಶಾಸನಗಳ ಸಂಶೋಧಕರಾಗಿ ಅಧ್ಯಯನಕಾರರಿಗೆ ಆಕರ ವ್ಯಕ್ತಿಯಾಗಿದ್ದರು.

Tuesday, October 11, 2011

ಕಟೀಲಿನಲ್ಲಿ ಪ್ರಾಥಮಿಕ ಶಿಕ್ಷಾವರ್ಗ: ಸಮಾರೋಪ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಥಮಿಕ ಶಿಕ್ಷಾವರ್ಗ ಕಟೀಲು ದೇಗುಲದ ಪದವೀಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿತು.
ಉದ್ಘಾಟನೆ ನೆರವೇರಿಸಿದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಧರ್ಮ ಮತ್ತು ರಾಷ್ಟ್ರ ಜಾಗೃತಿಯಲ್ಲಿ ಸಂಘದ ಪಾತ್ರ ಮಹತ್ತರವಾದುದು. ತಾನೂ ಕೂಡ ಸ್ವಯಂಸೇವಕನಾಗಿದ್ದೆ ಎನ್ನಲು ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಮಧುಕರ್ ಪ್ರಸ್ತಾವನೆಗೈದರು.
ವರ್ಗ ಶಿಬಿರಾಧಿಕಾರಿ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ತಾ.೧೬ರಂದು ಸಮಾರೋಪ ನಡೆಯಲಿದ್ದು, ಸುರೇಶ್ ಪರ್ಕಳ, ಗಿರೀಶ್ ಶೆಟ್ಟಿ
ಭಾಗವಹಿಸಲಿದ್ದಾರೆ.

ಸಮಾರೋಪ
ಕಟೀಲು : ಹಿಂದೂ ಎಂದರೆ ಜಾತಿಯಲ್ಲ, ಕೋಮುವಲ್ಲ. ಹಿಂದೂ ಎಂದರೆ ಜೀವನ
ಮೌಲ್ಯ, ಜೀವನ ದರ್ಶನ. ಹಿಂದುತ್ವದಲ್ಲಿ ರಾಷ್ಟ್ರೀಯತೆಯ ಸಿದ್ದಾಂತವಿದೆ ಎಂದು ಆರ್‌ಎಸ್‌ಎಸ್‌ನ ಪುತ್ತೂರು ಜಿಲ್ಲೆ ಸಹ

ಬೌದ್ಧಿಕ್ ಪ್ರಮುಖ್ ಸುರೇಶ ಪರ್ಕಳ ಹೇಳಿದರು.
ಅವರು ಭಾನುವಾರ ಕಟೀಲು ದೇಗುಲದ ಪದವೀಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಾಧ್ಯಮಗಳು ದೋಷಪೂರಿತವಾಗಿವೆ. ಪತ್ರಿಕೆಗಳು ವಿಶ್ವಾಸ ಕಳಕೊಂಡಿವೆ. ರೇಡಿಯೋ ಮಿರ್ಚಿ ಬದಲಾಗುತ್ತ ಹಾಟ್ ಮಗಾ ಎಂದು ಹಾದಿ ತಪ್ಪಿಸುವ ಸ್ಥಿತಿ ಬಂದಿದೆ. ದೇಶದ ಅಸಲೀ ವಿಚಾರ ಬಿಟ್ಟು ಸುದ್ದಿಗಳು ಬರುತ್ತಿವೆ. ಈ ಬಗ್ಗೆ ಎಚ್ಚರಿಕೆ, ಜಾಗೃತಿ ನಮ್ಮಲ್ಲಾಗಬೇಕು. ಇಂತಹ ಶಿಬಿರಗಳಿಂದ ಸಂಸ್ಕಾರ, ರಾಷ್ಟ್ರ ಜಾಗೃತಿಯ ನಿರ್ಮಾಣ ಕಾರ‍್ಯ ಸಾಧ್ಯವಾಗುತ್ತಿದೆ ಎಂದು ಸುರೇಶ್ ಪರ್ಕಳ ಹೇಳಿದರು.
ಕಟೀಲಿನ ಉದ್ಯಮಿ ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು. ವರ್ಗ ಶಿಬಿರಾಧಿಕಾರಿ ಸುರೇಶ್ ಶೆಟ್ಟಿ ವರದಿ ವಾಚಿಸಿದರು. ಗಣೇಶ ಕಿನ್ನಿಗೋಳಿ ಸ್ವಾಗತಿಸಿದರು. ಶ್ರೀನಿವಾಸ ಬಪ್ಪನಾಡು ವಂದಿಸಿದರು.
೧೫೫ ಶಿಬಿರಾರ್ಥಿಗಳಿಂದ ಕಟೀಲು ರಥಬೀದಿಯಲ್ಲಿ ಆಕರ್ಷಕ ಪಥ ಸಂಚಲನ ಬಳಿಕ ಶಾರೀರಿಕ ಪ್ರದರ್ಶನ ನಡೆಯಿತು.

Thursday, October 6, 2011

ಭರತನಾಟ್ಯ

ಕಟೀಲು ದೇಗುಲದಲ್ಲಿ ನವರಾತ್ರೋತ್ಸವ, ವಿಜಯ ದಶಮಿ ಸಲುವಾಗಿ ಖ್ಯಾತ ಗಾಯಕ ದಿ.ಅಶ್ವಥ್‌ರ ಮಗಳು ಮೈಸೂರಿನ ವಿಜಯಮೂರ್ತಿಯವರ ತಂಡದಿಂದ ಭರತನಾಟ್ಯ ನಡೆಯಿತು.

ಕಟೀಲು ದೇಗುಲದ ನೂತನ ಧ್ವಜಸ್ತಂಭಕ್ಕೆ ಮರದ ಕೊಡುಗೆ


ಕಟೀಲು : ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದ ನೂತನ ಧ್ವಜಸ್ತಂಭಕ್ಕೆ ಕಟೀಲಿನ ಹರಿಶ್ಚಂದ್ರ ರಾಯರ ಮಕ್ಕಳು ಕೊಡುಗೆಯಾಗಿ ನೀಡಿದ ತೇಗದ ಮರವನ್ನು ಗುರುವಾರ ಶಾಸ್ತ್ರೀಯವಾಗಿ ದೇವರಿಗೆ ಬಿಟ್ಟುಕೊಡಲಾಯಿತು.
ಸುಮಾರು ಐವತ್ತು ಅಡಿ ಎತ್ತರದ ಮರಕ್ಕೆ ಶ್ರೀ ದೇವರ ಪ್ರಸಾದ ಹಾಕುವ ಮೂಲಕ ಮರದ ಸ್ವೀಕಾರ ಕಾರ‍್ಯ ನಡೆಯಿತು. ಈ ಸಂದರ್ಭ ದಾನಿಗಳಾದ ಪ್ರಭಾಕರ ರಾವ್ ದಂಪತಿಗಳು, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಸಂಜೀವನಿ ಟ್ರಸ್ಟ್‌ನ ಡಾ.ಸುರೇಶ್ ರಾವ್, ರಾಮಣ್ಣ ಶೆಟ್ಟಿ, ಎಕ್ಕಾರು ಹರೀಶ್ ಶೆಟ್ಟಿ ಮತ್ತಿತರರಿದ್ದರು.
ನೂತನ ಧ್ವಜ ಸ್ತಂಭಕ್ಕೆ ಸುಮಾರು ನಾಲ್ಕು ಕೆಜಿ ಬಂಗಾರದ ಲ್ಯಾಮಿನೇಟೆಡ್ ಮುಚ್ಚಿಗೆ ಹಾಕುವ ಯೋಜನೆಯಿದ್ದು, ಎರಡು ವರ್ಷಗಳ ಒಳಗೆ ನೂತನ ಧ್ವಜಸ್ತಂಭ ಆಗುವ ಅಂದಾಜಿದೆ ಎಂದು ಅರ್ಚಕ ಅನಂತ ಆಸ್ರಣ್ಣ ತಿಳಿಸಿದ್ದಾರೆ.

Saturday, October 1, 2011

ಮಕ್ಕಳಿಗೆ ಮೊಬೈಲು ಕೊಡಬೇಡಿ- ಪ್ರೊ.ಶಂಕರ್.


ಕಟೀಲು: ಮಕ್ಕಳಿಗೆ ಮೊಬೈಲು ಕೊಡಬೇಡಿ. ಮಕ್ಕಳು ಸರಿಯಾಗಿ ಕಾಲೇಜಿಗೇ ಹೋಗುತ್ತಾರಾ? ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರಾ ಇತ್ಯಾದಿ ವಿಚಾರಗಳನ್ನು ಗಮನಿಸಬೇಕು. ಕೇವಲ ಕಾಲೇಜಿಗೆ ಕಳುಹಿಸಿದಾಕ್ಷಣ ಹೆತ್ತವರ ಜವಾಬ್ದಾರಿ ಮುಗಿಯುದಿಲ್ಲ. ಮಕ್ಕಳನ್ನು ಗಮನಿಸದಿದ್ದರೆ ಅವರು ಹಾದಿ ತಪ್ಪುವ ಸಾಧ್ಯತೆಯೇ ಹೆಚ್ಚು ಎಂದು ವಿಜಯ ಕಾಲೇಜಿನ ಪ್ರಾಚಾರ‍್ಯ ಶಂಕರ್ ಹೇಳಿದರು.
ಅವರು ಕಟೀಲು ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಶನಿವಾರ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯಲ್ಲಿ ಮಾತನಾಡಿದರು.
ಪ್ರಾಚಾರ‍್ಯ ಜಯರಾಮ ಪೂಂಜ, ಶಿಕ್ಷಕ ರಕ್ಷಕ ಸಂಘದ ಎಕ್ಕಾರು ಮೋನಪ್ಪ ಶೆಟ್ಟಿ, ವನಿತಾ ಜೋಷಿ, ರಾಘವೇಂದ್ರ ಭಟ್, ಶಶಾಂಕ ಆರ್.ಕೋಟ್ಯಾನ್, ಮಧುಸೂಧನ್ ಮತ್ತಿತರರಿದ್ದರು.

ಕಟೀಲಿನಲ್ಲಿ ಲಲಿತಾ ಪಂಚಮಿ: ೧8ಸಾವಿರ ಮಂದಿಗೆ ಸೀರೆ ವಿತರಣೆ


ಕಟೀಲು ದೇಗುಲದಲ್ಲಿ ನವರಾತ್ರಿಯ ಪ್ರಯುಕ್ತ ವಿಶೇಷ ಚಂಡಿಕಾಹೋಮ ನಡೆಯಿತು.

ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿಯ ಲಲಿತಾ ಪಂಚಮಿಯ ದಿನವಾದ ಶನಿವಾರ ಸುಮಾರು 18ಸಾವಿರಕ್ಕೂ ಹೆಚ್ಚು ಹುಡುಗಿಯರು, ಮಹಿಳೆಯರಿಗೆ ಶ್ರೀ ದೇವೀಯ ಶೇಷವಸ್ತ್ರಗಳನ್ನು(ಸೀರೆಗಳನ್ನು) ಪ್ರಸಾದ ರೂಪವಾಗಿ ವಿತರಿಸಲಾಯಿತು.
ಕಟೀಲು ದೇಗುಲಕ್ಕೆ ಹರಕೆ ರೂಪದಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತು ಸಾವಿರದಷ್ಟು ಸೀರೆಗಳು ಸಮರ್ಪಣೆಯಾಗುತ್ತಿದ್ದು, ಲಲಿತಾ ಪಂಚಮಿಯ ದಿನದಂದು ಅನ್ನಪ್ರಸಾದ ಸ್ವೀಕರಿಸುವ ಸಂದರ್ಭ ಮಹಿಳೆಯರಿಗೆ ಶೇಷವಸ್ತ್ರಗಳನ್ನು ನೀಡಲಾಗುತ್ತದೆ.
ದೇಗುಲಕ್ಕೆ ಅನ್ನಪ್ರಸಾದ ಸೇರಿದಂತೆ ವಿಶೇಷ ಸೇವೆಗಳನ್ನು ನೀಡುವ ಭಕ್ತರಿಗೆ ದೇಗುಲದ ವತಿಯಿಂದ ಶ್ರೀದೇವಿಯ ಶೇಷವಸ್ತ್ರಗಳನ್ನು ನೀಡಲಾಗುತ್ತದೆ. ದೇಗುಲಕ್ಕೆ ಭೇಟಿ ನೀಡುವ ಗಣ್ಯರಿಗೂ ಸೀರೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಉಳಿದಂತೆ ಕಟೀಲಿನ ಐದು ಯಕ್ಷಗಾನ ಮೇಳಗಳಿಗೆ ವೇಷಗಳಿಗೆ ಸುಮಾರು ೨ಸಾವಿರದಷ್ಟು ಸೀರೆಗಳನ್ನು ನೀಡಲಾಗುತ್ತದೆ. ಎರಡು ವರ್ಷಗಳ ಹಿಂದೆ ಬಳ್ಳಾರಿಯ ಸಿರಗುಪ್ಪದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಕಟೀಲಿನಿಂದ ಹತ್ತು ಸಾವಿರ ಸೀರೆಗಳನ್ನು ನೀಡಲಾಗಿತ್ತು. ಹೀಗೆ ಕಟೀಲಿನಲ್ಲಿ ಭಕ್ತರಿಂದ ನೀಡಲ್ಪಟ್ಟ ಸೀರೆಗಳನ್ನು ಏಲಂ ಮಾಡದೆ ಭಕ್ತರಿಗೇ ನೀಡುವ ಸಂಪ್ರದಾಯ ಬೆಳೆದು ಬಂದಿದೆ. ರವಿಕೆ ಕಣಗಳನ್ನೂ ದೇಗುಲಕ್ಕೆ ಭಕ್ತರು ನೀಡುತ್ತಿದ್ದು ಇವುಗಳನ್ನೂ ಭಕ್ತರಿಗೇ ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. ಸುಮಾರು ಇನ್ನೂರು ರೂಪಾಯಿಗಳಿಂದ ಹತ್ತು ಸಾವಿರ ರೂ.ಮೌಲ್ಯಗಳವರೆಗೂ ಸೀರೆ ದೇವರಿಗೆ ಸಂದಾಯವಾದದ್ದುಂಟು. ವೈಶಾಖ ಅಂದರೆ ಮೇ ತಿಂಗಳಲ್ಲಿ ಮೂರು ಸಾವಿರದಷ್ಟು ಬಂದದ್ದುಂಟು. ದಿನವೊಂದಕ್ಕೆ ಇನ್ನೂರರಷ್ಟು ಸೀರೆಗಳು ಬಂದದ್ದೂ ಉಂಟು. ತಿಂಗಳಿಗೆ ಒಂದು ಸಾವಿರಕ್ಕಿಂತ ಹೆಚ್ಚು ಸೀರೆಗಳು ಬರುತ್ತಿದ್ದು, ಜುಲೈ ತಿಂಗಳಲ್ಲಿ ಮಾತ್ರ ಕಡಿಮೆ ಸಂಖ್ಯೆಯಲ್ಲಿ ಬರುತ್ತವೆ.
ವಿವಾಹ, ಮಕ್ಕಳ ಬೇಡಿಕೆ, ಗೃಹ ನಿರ್ಮಾಣ ಇತ್ಯಾದಿ ಇಷ್ಟಾರ್ಥ ಸಿದ್ದಿ ಮುಂತಾದ ಕಾರಣಗಳಿಗಾಗಿ ಭಕ್ತರು ದೇವರಿಗೆ ಸೀರೆ ಕಾಣಿಕೆ ಸಲ್ಲಿಸುತ್ತಾರೆ. ಸೀರೆ ಸಮರ್ಪಿಸುವವರಿಗೆ ದೇಗುಲದಲ್ಲೇ ಮಾರಾಟ ಕೌಂಟರ್ ಇದ್ದು, ಬೇರೆ ಕಡೆಗಳಿಂದಲೂ ತರಬಹುದಾಗಿದೆ.
ಶನಿವಾರ ಕಟೀಲಿನಲ್ಲಿ ಸಂಜೆ ಏಳು ಗಂಟೆಯ ಹೊತ್ತಿಗೇನೇ ಅನ್ನಪ್ರಸಾದ ಊಟದ ವ್ಯವಸ್ಥೆ ಆರಂಭವಾಗಿದ್ದು, ಹನ್ನೆರಡು ಗಂಟೆಯವರೆಗೂ ಜನ ಬರುತ್ತಲೇ ಇದ್ದರು. ಭಕ್ತರ ಸಾಲು ಅರ್ಧಕಿಲೋಮೀಟರ್ ದೂರದವರೆಗೂ ಹಬ್ಬಿತ್ತು. ೧೨ಸಾವಿರದಷ್ಟು ಸೀರೆಗಳನ್ನು ೧೫ಸಾವಿರದಷ್ಟು ಮಂದಿಗೆ ವಿತರಿಸಲಾಯಿತು. ರಾಥ್ರಿಯ ಹೊತ್ತು ೨೫ಸಾವಿರಕ್ಕೂ ಹೆಚ್ಚು ಮಂದಿ ಕಟೀಲಿಗೆ ಆಗಮಿಸಿದ್ದರು. ಬಜಪೆ ಪೋಲೀಸರು ಸಂಚಾರ ವ್ಯವಸ್ಥೆಯನ್ನು ನೋಡಿಕೊಂಡಿದ್ದು, ವಿಪರೀತ ವಾಹನಗಳ ಕಾರಣದಿಂದ ಕಟೀಲಿನ ರಸ್ತೆಗಳು ಬ್ಲಾಕ್ ಆಗುವುದು ಮಾಮೂಲಾಗಿತ್ತು.
ಕೊಡೆತ್ತೂರು ಗ್ರಾಮದಿಂದ ನವರಾತ್ರಿಯ ವೈಭವದ ಹುಲಿವೇಷ ಮೆರವಣಿಗೆಯೂ ಶನಿವಾರ ಕಟೀಲು ದೇಗುಲಕ್ಕೆ ಬಂತು. ನೂರಾರು ವೇಷಗಳು, ಸ್ತಬ್ದಚಿತ್ರಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದ್ದವು.
ಚಿತ್ರ : ಕಟೀಲ್ ಸ್ಟುಡಿಯೋ

ಕಟೀಲು ನವರಾತ್ರಿ ತ್ರತೀಯ ದಿನದ ಮೆರವಣಿಗೆ






ಕಟೀಲು ನವರಾತ್ರಿ ತ್ರತೀಯ ದಿನದ ಮೆರವಣಿಗೆ ಸಮಿತಿಯ 26ನೇ ವರುಷದ ಹುಲಿವೇಷ ಮೆರವಣಿಗೆಯು ಶುಕ್ರವಾರ ಕಟೀಲು ದೇವೀ ಸನ್ನಿಧಿಗೆ ವೈಭವದಿಂದ ಆಗಮಿಸಿತು.
ಚಿತ್ರ ಕಟೀಲ್ ಸ್ಟುಡಿಯೋ