Thursday, July 28, 2011

ಕಟೀಲು ದೇಗುಲ ಅಭಿವೃದ್ಧಿ ಪ್ರಗತಿಪರಿಶೀಲನಾ ಸಭೆ


ಇಲ್ಲಿನ ಪುರಾಣ ಪ್ರಸಿದ್ಧ ಭ್ರಾಮರೀ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅಭಿವೃದ್ಧಿಯ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಆಡಳಿತಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಪ್ರಬಂಧಕ ವಿಶ್ವೇಶ್ವರ ರಾವ್, ಧಾರ್ಮಿಕ ದತ್ತಿ ಇಲಾಖೆಯ ಎ.ಆರ್. ಪ್ರಭಾಕರ್, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ನಿರ್ಮಿತಿ ಕೇಂದ್ರದ ರಾಜೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ, ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಿತು.ಕಳೆದ ಫೆಬ್ರವರಿಯಲ್ಲಿ ದೇಗುಲಕ್ಕೆ ಭೇಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ನಂದಕುಮಾರ್ ಸೂಚಿಸಿರುವ ಕಾರ‍್ಯಗಳ ಬಗ್ಗೆ ಪ್ರಮುಖ ಚರ್ಚೆ ನಡೆಯಿತು.ದೇಗುಲದ ಒಳಗೆ ಶುಚಿತ್ವ, ಏರ್‌ಕೂಲರ್ ಅಳವಡಿಕೆ, ಉಗ್ರಾಣದಲ್ಲಿರುವ ಹಳೆಯ ಸ್ಟೀಮ್ ಬಾಯ್ಲರ್‌ಗಳ ರಿಪೇರಿ, ಭೋಜನ ಶಾಲೆಯಲ್ಲಿ ಹೆಚ್ಚು ಮಂದಿಗೆ ಅವಕಾಶ ಇರುವಂತೆ ಬದಲಾವಣೆ ಕಾರ‍್ಯ, ನದಿಯ ನೀರಿನಿಂದ ದೇಗುಲಕ್ಕೆ ವಿದ್ಯುತ್ ತಯಾರಿ, ಬಾಡಿಗೆ ಅಂಗಡಿದಾರರನ್ನು ಬಸ್‌ನಿಲ್ದಾಣದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದು, ಪ್ರವಾಸೋದ್ಯಮ ಇಲಾಖೆಯಿಂದ ಅರ್ಧಕ್ಕೇ ನಿಂತಿರುವ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸುವುದು, ಗೋಶಾಲೆಯ ದುರಸ್ತಿ ಹೀಗೆ ಮೂವತ್ತೈದಕ್ಕೂ ಹೆಚ್ಚು ವಿಚಾರಗಳು ಚರ್ಚಿತವಾದವು. ಮಾಸ್ಟರ್ ಪ್ಲಾನ್‌ನಲ್ಲಿ ಅಳವಡಿಕೆಯಾಗುವ ಡ್ರೈನೇಜ್, ಉದ್ಯಾನವನ ಇತ್ಯಾದಿಗಳ ವಿವರವನ್ನು ಅಧಿಕಾರಿಗಳು ನೀಡಿದರು.

ಕಟೀಲು ಪ್ರಾಥಮಿಕ ಶಾಲೆ ಕಟ್ಟಡ ಉದ್ಘಾಟನೆ








ಕಟೀಲು : ೯೫ ವರ್ಷಗಳ ಇತಿಹಾಸದ ೩೨೪ವಿದ್ಯಾರ್ಥಿಗಳು ಕಲಿಯುತ್ತಿರುವ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಒಂದನೇ ಮಹಡಿಯನ್ನು ಸಾಂಸದ ನಳಿನ್ ಕುಮಾರ್ ಗುರುವಾರ ಉದ್ಘಾಟಿಸಿದರು. ತನ್ನ ಸಾಂಸದರ ಅನುದಾನದಿಂದ ರೂ.೪ಲಕ್ಷವನ್ನು ಶಾಲೆಯ ಎದುರಿನ ಇಂಟರ್‌ಲಾಕ್ ಕಾಮಗಾರಿಗೆ ನೀಡುವುದಾಗಿ ತಿಳಿಸಿದ ನಳಿನ್ ಕುಮಾರ್ ಕನ್ನಡ ಶಾಲೆಗಳಲ್ಲಿ ವ್ಯವಸ್ಥೆಗಳು ಚೆನ್ನಾದಾಗ ವಿದ್ಯಾರ್ಥಿಗಳನ್ನು ಸೆಳೆಯಲು ಸಾಧ್ಯವೆಂದರು.ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಮಾತನಾಡಿ, ಕಟೀಲು ದೇಗುಲದಿಂದಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪ್ರವಾಸದ ವ್ಯವಸ್ಥೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.ಕರಾವಳಿಯಲ್ಲಿ ಉಚಿತ ಊಟ, ಶಿಕ್ಷಣ ನೀಡುವ ವ್ಯವಸ್ಥೆ ಇರುವುದು ಕಟೀಲಿನಲ್ಲಿ ಮಾತ್ರ ಎಂದು ಶಾಸಕ ಅಭಯಚಂದ್ರ ಹೇಳಿದರು.ಕಟೀಲಿನ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ದೇಗುಲದ ಆಡಳಿತಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಜಿ.ಪಂ.ಸದಸ್ಯ ಈಶ್ವರ, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ದೈಹಿಕ ಶಿಕ್ಷಣದ ಎನ್.ಎಸ್.ಅಂಗಡಿ ಮತ್ತಿತರರಿದ್ದರು.ಪ್ರಸ್ತಾವನೆಗೈದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಸುಮಾರು ೧೮ಲಕ್ಷ ರೂ.ವೆಚ್ಚದಲ್ಲಿ ಶಾಲೆಗೆ ಸಭಾಭವನ ನಿರ್ಮಿಸಲಾಗುವುದು ಎಂದರು.ಮುಖ್ಯ ಶಿಕ್ಷಕಿ ವೈ.ಮಾಲತಿ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ‍್ಯಕ್ರಮ ನಿರೂಪಿಸಿದರು. ಗೋಪಾಲ್ ವಂದಿಸಿದರು.

Saturday, July 23, 2011

ವ್ಯಕ್ತಿತ್ವ ವಿಕಸನ

ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರೌಢಶಾಲೆಯಲ್ಲಿ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯ ಮಾಹಿತಿ ಕಾರ‍್ಯಕ್ರಮವನ್ನು ಆಯೋಜಿಸಲಾಯಿತು. ಕೆನರಾ ವಲಯ ಕಾರ‍್ಯದರ್ಶಿ ದಿನೇಶ್ ಕೊಡಿಯಾಲ್‌ಬೈಲ್ ಮಾಹಿತಿ ನೀಡಿದರು. ರೋಟರ‍್ಯಾಕ್ಟ್‌ನ ಗಣೇಶ್ ಕಾಮತ್, ಉಪ ಪ್ರಾಚಾರ‍್ಯ ಸುರೇಶ್ ಭಟ್, ಶಿಕ್ಷಕ ಸಾಯಿನಾಥ ಶೆಟ್ಟಿ ಮತ್ತಿತರರಿದ್ದರು.

Friday, July 22, 2011

ನಿಡ್ಡೋಡಿ ಐಟಿಐನಲ್ಲಿ ಬೀಳ್ಕೊಡುಗೆ



ಕನಸು, ಗುರಿಗಳನ್ನು ಸಾಧಿಸುವ ಪ್ರಯತ್ನ ಇದ್ದಾಗ ಯಶಸ್ಸು ಕೂಡ ಸುಲಭ ಎಂದು ಕಟೀಲು ಸಮೀಪದ ನಿಡ್ಡೋಡಿ ಶ್ರೀ ದುರ್ಗಾದೇವಿ ಕೈಗಾರಿಕಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಭಾಸ್ಕರ ದೇವಸ್ಯ ಹೇಳಿದರು. ಅವರು ೨೦೦೯-೧೧ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆಯ ಗೌರವಾಧ್ಯಕ್ಷ ಎಂ.ಆರ್. ಜೈನ್, ಸಂಸ್ಥೆಯ ಪ್ರಥಮ ಬ್ಯಾಚ್‌ಗೆ ನೂರು ಶೇಕಡಾ ಉದ್ಯೋಗಾವಕಾಶ ನೀಡಲಾಗಿದೆ ಎಂದರು. ಭಾರತ್ ಎಗ್ರೋವೇಟ್ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಡಾ.ಅರುಣ್ ಕುಮಾರ್ ರೈ, ದುರ್ಗಾದೇವಿ ಇಂಗ್ಲಿಷ್ ಮಾಧ್ಯಮ ಶಾಲೆಯ ಸಂಚಾಲಕ ರಾಮಣ್ಣ ಗೌಡ, ಸಂಗೀತಾ ಭಾಸ್ಕರ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ‍್ಯೆ ಅನುರಾಧಾ ಎಸ್. ಸಾಲಿಯಾನ್ ಸ್ವಾಗತಿಸಿದರು. ಸ್ವಾತಿ ಕಾರ‍್ಯಕ್ರಮ ನಿರೂಪಿಸಿದರು. ಸುನೀತಾ ಶೆಟ್ಟಿ ವಂದಿಸಿದರು.

Tuesday, July 19, 2011

ಕ್ರೀಡಾ ಪರಿಕರ ಹಸ್ತಾಂತರ



ಕಟೀಲು ಪ್ರೌಢಶಾಲೆಯಲ್ಲಿ ಮೂವತ್ತೈದು ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ನಿವೃತ್ತರಾದ ಸುಂದರ ಪೂಜಾರಿಯವರನ್ನು ಅವರ ಶಿಷ್ಯವರ್ಗದವರು ಕಟೀಲಿನಲ್ಲಿ ಅದ್ದೂರಿಯಾಗಿ ಸಂಮಾನಿಸಿದ್ದರು. ಆ ಸಂದರ್ಭ ಸಂಮಾನ ಸಮಿತಿಗೆ ಸಂಗ್ರಹವಾಗಿ ಖರ್ಚಾದ ಹಣದಲ್ಲಿ ರೂ.೪೦ಸಾವಿರ ಉಳಿಕೆಯಾಗಿತ್ತು. ಆ ಮೊತ್ತವನ್ನು ಸುಂದರ ಪೂಜಾರಿಯವರಿಗೆ ನೀಡಿದಾಗ ಅವರು ಸ್ವೀಕರಿಸದೆ, ಈ ಮೊತ್ತವನ್ನು ಕಟೀಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕ್ರೀಡಾಪರಿಕರಣಗಳಿಗೆ ಉಪಯೋಗಿಸಿ ಎಂದಿದ್ದರು.ಆ ಪ್ರಕಾರ ರೂ.೨೫ಸಾವಿರ ರೂ.ಗಳ ಕ್ರೀಡಾಪರಿಕರಣಗಳನ್ನು ಕಟೀಲಿನ ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ ರೂ. ೧೫ಸಾವಿರವನ್ನು ಪ್ರೌಢಶಾಲೆಗೆ ಸೋಮವಾರ ನೀಡಲಾಯಿತು. ಈ ಸಂದರ್ಭ ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಸುಂದರ ಪೂಜಾರಿ, ನಿವೃತ್ತ ಉಪಪ್ರಾಚಾರ‍್ಯ ಉಮೇಶ್ ರಾವ್ ಎಕ್ಕಾರು, ಉಪಪ್ರಾಚಾರ‍್ಯ ಸುರೇಶ್ ಭಟ್, ಮುಖ್ಯ ಶಿಕ್ಷಕಿ ವೈ. ಮಾಲತಿ, ತಿಮ್ಮಪ್ಪ ಕೋಟ್ಯಾನ್, ಸುದೀಪ್ ಅಮೀನ್, ಉದಯ ಅಜಿಲ, ವಾಸುದೇವ ಶೆಣೈ ಮತ್ತಿತರರಿದ್ದರು.

ಕಟೀಲಿನಲ್ಲಿ ಉಚಿತ ಕಂಪ್ಯೂಟರ್ ತರಬೇತಿ

ಕಟೀಲು :ಇಲ್ಲಿನ ಶ್ರೀ ದುರ್ಗಾ ಕಂಪ್ಯೂಟರ‍್ಸ್‌ನಲ್ಲಿ ದೆಹಲಿಯ ಮಾನವ ಸಂಪನ್ಮೂಲ ಇಲಾಖೆ ಮತ್ತು ಕೆಪಿಟಿಯ ಸಹಯೋಗದಲ್ಲಿ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಕಾರ‍್ಯಕ್ರಮವನ್ನು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಶನಿವಾರ ಉದ್ಘಾಟಿಸಿದರು.ಕೆಪಿಟಿಯ ಪ್ರಾಚಾರ‍್ಯ ವಿಜಯಕುಮಾರ್, ಬಾಬು ದೇವಾಡಿಗ, ವೆಂಕಟೇಶ್ ಉಡುಪ ಮತ್ತಿತರರಿದ್ದರು. ಈಗಾಗಲೇ ಮೂವತ್ತು ವಿದ್ಯಾರ್ಥಿಗಳು ಉಚಿತ ಕಂಪ್ಯೂಟರ್ ತರಬೇತಿ ಪಡೆಯತೊಡಗಿದ್ದಾರೆ.

Saturday, July 16, 2011

ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ೯೫ವರ್ಷಗಳ ಕಟೀಲು ಹಿರಿಯ ಪ್ರಾಥಮಿಕ ಶಾಲೆ





















ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ತೊಂಭತ್ತೈದು ವರ್ಷಗಳಿಂದ ನಡೆಯುತ್ತಿರುವ ಹಿರಿಯ ಪ್ರಾಥಮಿಕ ಶಾಲೆಗೆ ಕೊನೆಗೂ ಹೊಸ ಕಟ್ಟಡದ ಭಾಗ್ಯ ಬಂದಿದೆ. ೧೯೧೬ರಲ್ಲಿ ಸ್ಥಾಪನೆಗೊಂಡ ಹಿರಿಯಪ್ರಾಥಮಿಕ ಶಾಲೆಯ ಈಗಿನ ಕಟ್ಟಡ ಆವಾಗಲೇ ಕಟ್ಟಲಾಗಿತ್ತಂತೆ. ಕೆಲ ತಿಂಗಳು ಶಾಲೆ ದೇಗುಲದ ಈಗಿನ ಗೋಪುರವಿರುವ ಜಾಗದಲ್ಲಿ ನಡೆಯುತ್ತಿತ್ತಂತೆ. ತೊಂಭತ್ತೈದು ವರುಷಗಳಿಂದ ಕಟೀಲು ದೇಗುಲದ ಎದುರಿನ ಕಟ್ಟಡದಲ್ಲಿ ನಡೆಯುತ್ತಿದ್ದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವೇ ವರ್ಷಗಳ ಹಿಂದೆ ಒಂದು ಸಾವಿರ ವಿದ್ಯಾರ್ಥಿಗಳು, ೨೧ಶಿಕ್ಷಕರು ಇದ್ದರು. ಇವತ್ತು ಎಲ್ಲ ಕನ್ನಡ ಶಾಲೆಗಳಂತೆ ಮಕ್ಕಳ ಸಂಖ್ಯೆ ಕುಸಿದು ೩೫೦ ವಿದ್ಯಾರ್ಥಿಗಳಿದ್ದಾರೆ. ಇವತ್ತು ಕಟೀಲಿನಲ್ಲಿ ಪ್ರೌಢ, ಪದವೀಪೂರ್ವ, ಪದವೀ, ಸಂಸ್ಕೃತ ಸ್ನಾತಕೋತ್ತರದಷ್ಟು ಶಿಕ್ಷಣ ವ್ಯವಸ್ಥೆಯಿದೆ. ಆದರೂ ಈ ಪ್ರಾಥಮಿಕ ಶಾಲೆಗೆ ಅನೇಕ ಕಾರಣಗಳಿಗಾಗಿ ಮಹತ್ವವಿದೆ.ಪ್ರಾಥಮಿಕ ಶಾಲೆಯ ಸರಸ್ವತೀ ಸದನದಲ್ಲಿ ದೇಗುಲದ ಸಾವಿರಾರು ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದಿವೆ. ನಡೆಯುತ್ತಿವೆ. ರಾಷ್ಟ್ರ, ರಾಷ್ಟ್ರಾಂತರ ಖ್ಯಾತಿಯ ಕಲಾವಿದರು ಇಲ್ಲಿ ಕಾರ‍್ಯಕ್ರಮ ನೀಡಿದ್ದಾರೆ. ದೇಗುಲದ ಎಲ್ಲ ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಇದೇ ಶಾಲೆಯೇ ಸಭಾಭವನ. ಹಾಗಾಗಿ ಇಲ್ಲಿ ನಡೆದಷ್ಟು ಕಾರ‍್ಯಗಾರ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ‍್ಯಕ್ರಮ ಮತ್ಯಾವ ಶಾಲೆಯಲ್ಲೂ ನಡೆದಿರಲಿಕ್ಕಿಲ್ಲ. ಕಟೀಲಿನ ರಥಬೀದಿಯಲ್ಲಿ ವರುಷದ ಆರು ತಿಂಗಳೂ ಯಕ್ಷಗಾನ ನಡೆಯುತ್ತದೆ. ಹಾಗಾಗಿ ಹಗಲು ಶಾಲೆ, ರಾತ್ರಿ ಯಕ್ಷಗಾನದ ಚೌಕಿ. ಇಲ್ಲಿ ಬಣ್ಣ ಹಚ್ಚಿದ ಕಲಾವಿದರು ಲೆಕ್ಕವಿಲ್ಲದಷ್ಟು ಮಂದಿ. ದೇಗುಲದಲ್ಲಿ ವಸತಿಗೃಹದ ಸಮಸ್ಯೆಯಿದ್ದುದರಿಂದ ಆಟಕ್ಕೆ ದೇಗುಲಕ್ಕೆ ಎಂದು ಬಂದವರು ರಾತ್ರಿ ಮಲಗುತ್ತಿದ್ದುದು ಇದೇ ಶಾಲೆಯ ಜಗಲಿಯಲ್ಲಿ. ಯಕ್ಷಗಾನ ಈ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸಿದ್ದಿಸುವ ಕಲೆ. ಇಲ್ಲಿನ ಗ್ರಂಥಾಲಯವೂ ಗಮನೀಯ. ಶಾಲೆಯ ಭಜನೆ, ಶಾರದಾ ಪೂಜೆ ಅತ್ಯಂತ ಪ್ರಸಿದ್ಧಿ. ರಥಬೀದಿಯಿಂದ ಎತ್ತರದ ಮೆಟ್ಟಿಲುಗಳನ್ನು ಕೈಮುಗಿಯುತ್ತ ಹತ್ತಿ ಶಾಲೆ ಪ್ರವೇಶಿಸುವ ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ದೊಡ್ಡ ಹೆಸರು ಮಾಡಿದವರು.ದೇಗುಲದ ಎದುರೇ ಇರುವ ಶಾಲಾ ಕಟ್ಟಡ ಹಳೆಯದಾದರೂ ಗಟ್ಟಿಯಾಗಿದೆ. ಆದರೂ ವಾಹನಗಳ ಅಬ್ಬರ, ದೇಗುಲದ ಎದುರು ಸಭಾಭವನ ಇತ್ಯಾದಿ ಉದ್ದೇಶಗಳಿಗಾಗಿ ಶಾಲೆಯನ್ನು ಬೇರೆಡೆಗೆ ವರ್ಗಾಯಿಸುವುದು ಅಗತ್ಯವಾಗಿತ್ತು. ಈ ಹಿನ್ನಲೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆಯೇ ಪ್ರಾಥಮಿಕ ಶಾಲೆಗೆ ಅಜಾರು ಬಳಿ ಹೊಸ ಕಟ್ಟಡ ಕಾಮಗಾರಿ ಆರಂಭವಾಗಿತ್ತಾದರೂ ಮುಜರಾಯಿ ಇಲಾಖೆಯ ನೀತಿನಿಯಮಗಳಿಂದಾಗಿ ಆಮೆಗತಿಯಲ್ಲಿ ಕಾಮಗಾರಿ ಸಾಗಿತ್ತು. ಹದಿನಾಲ್ಕು ತರಗತಿಗಳ ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ವರುಷ ಎರಡು ಕಳೆದರೂ ಹೊಸ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಂಡಿಲ್ಲ ಎಂದು ಹೊಸದಿಗಂತ ಸೇರಿದಂತೆ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಇದೀಗ ಶುಕ್ರವಾರ ವಿದ್ಯಾರ್ಥಿಗಳು ಹೊಸ ಶಾಲೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ತರಗತಿಗಳು ಎಂದಿನಂತೆ ನಡೆಯುತ್ತಿವೆ. ಜುಲೈ ೨೮ರಂದು ಅಧಿಕೃತವಾಗಿ ಹೊಸ ಕಟ್ಟಡದ ಉದ್ಘಾಟನೆ ನಡೆಯಲಿದೆ. ಶಾಲೆ ಕಟ್ಟಡ, ಕಂಪೌಂಡ್, ಟ್ಯಾಂಕ್ ಎಲ್ಲ ಸೇರಿದರೆ ೪೫ಲಕ್ಷ ರೂ. ಕಾಮಗಾರಿಯ ಮೊತ್ತವಾಗುತ್ತದೆ.ಹಳೆ ಶಾಲೆ ಕಟ್ಟಡ ಸರಸ್ವತೀ ಸದನ ಕಟ್ಟುವ ಸಂದರ್ಭ ಮರಗಳನ್ನು ದೂರದ ಮಚ್ಚಾರಿನಿಂದ ನಂದಿನಿ ಹೊಳೆಯ ನೆರೆಯಲ್ಲಿ ತರಲಾಗಿತ್ತು. ಕಟೀಲು ದೇಗುಲದಷ್ಟೇ ಈ ಶಾಲೆಗೂ ಪ್ರಾಮುಖ್ಯವಿದೆ ಎಂದು ಇಲ್ಲಿ ಶಿಕ್ಷಕರಾಗಿದ್ದ ಪು.ಶ್ರೀನಿವಾಸ ಭಟ್ಟರು ಅಭಿಪ್ರಾಯಪಡುತ್ತಾರೆ. ಕಾಶಿ ವಿವಿ ಉಪಕುಲಪತಿ ಪದ್ಮಶ್ರೀ ಡಾ.ಕೆ.ಎನ್.ಉಡುಪ, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಹೀಗೆ ಅನೇಕ ಗಣ್ಯರು ಕಲಿತ ಈ ಶಾಲೆಯಲ್ಲಿ ಹತ್ತು ಸಾವಿರದಷ್ಟು ಮಂದಿ ಶಿಕ್ಷಣ ಪಡೆದಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ರೈಲ್ವೆ ಸಚಿವರಾಗಿದ್ದಾಗ ಈ ಶಾಲೆಗೆ ಬಂದು ಭಾಷಣ ಮಾಡಿ ಹೋಗಿದ್ದರಂತೆ. ಇಲ್ಲಿನ ಶಾಲೆಯ ಮಕ್ಕಳಿಗೆ ಆವಾಗಾವಾಗ ದೇಗುಲದ ಕಾಣಿಕೆ ಡಬ್ಬಿಯ ಲಕ್ಷಗಟ್ಟಲೆ ರೂಪಾಯಿ ಕಾಣಿಕೆ(ನಾಣ್ಯ) ದುಡ್ಡು ಲೆಕ್ಕ ಮಾಡುವ ಸಂಭ್ರಮವೂ ಇದೆ. ಮಧ್ಯಾಹ್ನ ಊಟ ಎರಡು ದಶಕಗಳ ಹಿಂದೆಯೇ ಈ ಶಾಲೆಯಲ್ಲಿ ಆರಂಭವಾಗಿತ್ತು.ಅನೇಕ ಕಾರಣಗಳಿಗಾಗಿ ಮಹತ್ವ ಪಡೆದಿರುವ ಸರಸ್ವತೀ ಸದನ ಹೆಸರಿನ ಕಟೀಲಿನ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಹೋಗುವುದು ಇಲ್ಲಿನ ಮಕ್ಕಳಿಗೆ, ಶಿಕ್ಷಕರಿಗೆ ಖುಷಿಯೂ ಹೌದು, ಬೇಸರವೂ ಹೌದು!

Friday, July 15, 2011

ಅಯೋಗ್ಯರಿಲ್ಲ -ಹರಿ ಆಸ್ರಣ್ಣ

ಅಯೋಗ್ಯ ಮನುಷ್ಯರು ಅಂತಿಲ್ಲ. ಸಂಯೋಜಕರು ಪ್ರತಿಯೊಬ್ಬನನ್ನೂ ಒಂದಿಲ್ಲೊಂದು ವಿಚಾರದಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡಿದಾಗ ಸಂಘದೊಂದಿಗೆ ವ್ಯಕ್ತಿಯೂ ಬೆಳೆಯುತ್ತಾನೆ, ಬೆಳಗುತ್ತಾನೆ ಎಂದು ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.ಅವರು ಶುಕ್ರವಾರ ಕಟೀಲು ಶ್ರೀ ದು.ಪ. ದೇವಳ ಪ್ರೌಢಶಾಲೆಯಲ್ಲಿ ಪಾಠ್ಯೇತರ ಚಟುವಟಿಕೆಗಳ ಹತ್ತು ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.ಉಪಪ್ರಾಚಾರ‍್ಯ ಸುರೇಶ್ ಭಟ್, ಶಿಕ್ಷಕರಾದ ಕೆ.ವಿ.ಶೆಟ್ಟಿ, ಸಾಯಿನಾಥ ಶೆಟ್ಟಿ, ಅಲೆಕ್ಸ್ ತಾವ್ರೋ ಉಪಸ್ಥಿತರಿದ್ದರು.

ಸೈಕಲ್ ವಿತರಣೆ

ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರೌಢಶಾಲೆಯ ೮ ಮತ್ತು ೯ನೇ ತರಗತಿಯ ೩೨೦ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ಶಾಸಕ ಅಭಯಚಂದ್ರ ಶುಕ್ರವಾರ ವಿತರಿಸಿದರು.ಉಪಪ್ರಾಚಾರ‍್ಯ ಸುರೇಶ್ ಭಟ್, ಶಿಕ್ಷಕರಾದ ಕೆ.ವಿ.ಶೆಟ್ಟಿ, ಸಾಯಿನಾಥ ಶೆಟ್ಟಿ, ರಾಜಶೇಖರ್, ವಿಜಯಕುಮಾರ್ ವೇದಿಕೆಯಲ್ಲಿದ್ದರು.

Thursday, July 14, 2011

ಕ್ಲಸ್ಟರ್ ಸಹಪಠ್ಯಚಟುವಟಿಕೆ



ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಾಥಮಿಕ ಶಾಲೆಯಲ್ಲಿ ಪದ್ಮನೂರು, ಉಲ್ಲಂಜೆ ಕ್ಲಸ್ಟರ್ ಮಟ್ಟದ ಸಹಪಠ್ಯ ಚಟುವಟಿಕೆ ನಡೆಯಿತು. ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಶಿಕ್ಷಣ ಇಲಾಖೆಯ ದಿನೇಶ್, ಮುಖ್ಯ ಶಿಕ್ಷಕಿ ವೈ.ಮಾಲತಿ ಮತ್ತಿತರರಿದ್ದರು.

ಸಾಂಸದರ ಭೇಟಿ



ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಗ್ರಾಮೀಣಾಭಿವ್ರದ್ದಿ ಇಲಾಖೆಯ ಸ್ಥಾಯಿ ಸಮಿತಿಯ ಹನ್ನೊಂದು ಸದಸ್ಯರು(ಲೋಕಸಭಾ ಸದಸ್ಯರು) ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇಗುಲಕ್ಕೆ ಭೇಟಿ ನೀಡಿದರು. ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಸಾಂಸದ ನಳಿನ್ ಕುಮಾರ್ ಸ್ವಾಗತಿಸಿದರು.

ಆಲಿಸುವುದೂ ಕಲೆ- ಸುಲೋಚನಾ ಕೊಡವೂರು


ಪಾಠ, ಮಾತು ಹೀಗೆ ಮತ್ತೊಬ್ಬರು ಹೇಳುವುದನ್ನು ಕೇಳುವುದು ಮಾತ್ರವಲ್ಲ ಆಲಿಸುವುದೂ ಕೂಡ ಒಂದು ಕಲೆಯಂತೆ ಎಂದು ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಚಾಲಕಿ ಸುಲೋಚನಾ ಕೊಡವೂರು ಹೇಳಿದರು.ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಆಯೋಜಿಸಿದ ಜೀವನ ಕೌಶಲ್ಯ ಮಾಹಿತಿ ಕಾರ‍್ಯಕ್ರಮದಲ್ಲಿ ಮಾತನಾಡಿದರು.ದಿನೇಶ್ ಕೊಡಿಯಾಲ್‌ಬೈಲ್ ಏಕಾಗ್ರತೆ, ವ್ಯಕ್ತಿತ್ವ ವಿಕಸನ ಕುರಿತು ಮಾಹಿತಿ ನೀಡಿದರು.ಉಪಪ್ರಾಚಾರ‍್ಯ ಸುರೇಶ್ ಭಟ್, ರೋಟರ‍್ಯಾಕ್ಟ್‌ನ ಗಣೇಶ್ ಕಾಮತ್, ಕೆ.ಬಿ.ಸುರೇಶ್, ಜಾಕ್ಸನ್ ಪಕ್ಷಿಕೆರೆ ಉಪಸ್ಥಿತರಿದ್ದರು.

ಮಾದಕ ದ್ರವ್ಯಗಳಿಂದ ದೂರವಿರಿ- ಉಮೇಶ್ ರಾವ್ ಎಕ್ಕಾರು



ಕಟೀಲು : ಮದ್ಯ, ಮಾದಕದ್ರವ್ಯಗಳಿಂದ ಯುವಜನತೆ ದೂರವಿದ್ದಾಗ ಬದುಕಿನಲ್ಲಿ ಯಶಸ್ಸಿನೆಡೆಗೆ ಸಾಗಲು ಸಾಧ್ಯ. ವಿದ್ಯಾವಂತರೂ, ಬುದ್ಧಿವಂತರೂ ಹಾದಿ ತಪ್ಪುವ ಸಾಧ್ಯ ಜಾಸ್ತಿ. ಎಚ್ಚರ ಅಗತ್ಯ ಎಂದು ಸಾಹಿತಿ ಉಮೇಶ್ ರಾವ್ ಎಕ್ಕಾರು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಪದವಿ ಕಾಲೇಜಿನಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಜಿ.ಪಂ.ಸದಸ್ಯ ಈಶ್ವರ, ಧನಂಜಯ ಶೆಟ್ಟಿಗಾರ್, ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಕೃಷ್ಣ ಕಾಂಚನ್, ಕೇಶವ ಎಚ್, ಲತಾ ಅಮೀನ್, ಭುವನಾಭಿರಾಮ ಉಡುಪ ಮತ್ತಿತರರಿದ್ದರು.