Saturday, February 19, 2011

ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ




ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕಗಳ ವಿದ್ಯಾರ್ಥಿಗಳಿಂದ ಮಂಗಳೂರು ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಕಿನ್ನಿಗೋಳಿ ರೋಟರಿ, ರೋಟರ್‍ಯಾಕ್ಟ್‌ಗಳ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಿತು. ಕೆಎಂಸಿ ರಕ್ತನಿಧಿಯ ಮುಖ್ಯಸ್ಥೆ ಪೂರ್ಣಿಮಾ ರಾವ್ ಶಿಬಿರ ಉದ್ಘಾಟಿಸಿದರು. ಪದವಿ ಕಾಲೇಜಿನ ಪ್ರಾಚಾರ್‍ಯ ಎಂ. ಬಾಲಕೃಷ್ಣ ಶೆಟ್ಟಿ, ಪ.ಪೂ.ಕಾಲೇಜಿನ ಜಯರಾಮ ಪೂಂಜ, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ರೋಟರಿಯ ಸತೀಶ್ಚಂದ್ರ ಹೆಗ್ಡೆ, ಜೆರಾಲ್ಡ್ ಮಿನೇಜಸ್, ರೋಟರ್‍ಯಾಕ್ಟ್‌ನ ಪ್ರಕಾಶ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಕೇಶವ ಎಚ್. ಸ್ವಾಗತಿಸಿದರು. ಡಾ.ಕೃಷ್ಣ ಕಾಂಚನ್ ವಂದಿಸಿದರು. ೫೯ ವಿದ್ಯಾರ್ಥಿಗಳು ರಕ್ತ ನೀಡಿದರು.

ಧೀಂಕಿಟ-ಕೃತಿ ಬಿಡುಗಡೆ, ಗುರುವಂದನೆ











ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಂದಿನೀ ಅವತರಣ ದಿನದ ಪ್ರಯುಕ್ತ ಆಯೋಜಿಸಲಾದ ಕೃಷ್ಣ ಆಸ್ರಣ್ಣ ಸಂಸ್ಮರಣಾರ್ಥ ಯಕ್ಷಗಾನ ಬಯಲಾಟ ಅಕಾಡಮಿ, ದುರ್ಗಾಮಕ್ಕಳ ಮೇಳ, ಕಮಲಾದೇವಿ ಆಸ್ರಣ್ಣರ ಸಹಯೋಗದಲ್ಲಿ ಆಯೋಜಿಸಲಾದ ಕಾರ್‍ಯಕ್ರಮದಲ್ಲಿ ಹರಿನಾರಾಯಣ ಬೈಪಾಡಿತ್ತಾಯ ರಚಿತ ಧೀಂಕಿಟ-ಚೆಂಡೆ ಮದ್ದಲೆ ಪಠ್ಯಕ್ರಮದ ಕೃತಿಯನ್ನು ಮಧೂರಿನ ತಂತ್ರಿವರ್‍ಯ ಉಳಿತ್ತಾಯ ವಿಷ್ಣು ಆಸ್ರ ಬಿಡುಗಡೆಗೊಳಿಸಿದರು.ಡಾ.ಕೆ.ಭಾಸ್ಕರಾನಂದ ಕುಮಾರ್‌ರನ್ನು ಸಂಮಾನಿಸಲಾಯಿತು. ಕಟೀಲಿನಲ್ಲಿ ಯಕ್ಷಗಾನ ಹಿಮ್ಮೇಳ, ಮುಮ್ಮೇಳ ಕಲಿಸುವ ಬಲಿಪ ಶಿವಶಂಕರ ಭಟ್, ಹರಿನಾರಾಯಣ ಬೈಪಡಿತ್ತಾಯ, ರಾಜೇಶ್ ಐ.ಯವರನ್ನು ಅಭಿನಂದಿಸಲಾಯಿತು. ಪುಚ್ಚಕರೆ ಕೃಷ್ಣ ಭಟ್ ಅಭಿನಂದನೆ ಮಾತುಗಳನ್ನಾಡಿದರು.ಕಟೀಲಿನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಎಂಆರ್‌ಪಿಎಲ್‌ನ ಲಕ್ಷ್ಮೀಕುಮಾರನ್, ಬಜಪೆ ರಾಘವೇಂದ್ರ ಭಟ್ ಮತ್ತಿತರರಿದ್ದರು.ಹರಿನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಪ್ರಸಾದ ಆಸ್ರಣ್ಣ ವಂದಿಸಿದರು. ವಾಸುದೇವ ಶೆಣೈ ಕಾರ್‍ಯಕ್ರಮ ನಿರುಉಪಿಸಿದರು.

ಇದೇ ಸಂದರ್ಭ ಯಕ್ಷಗಾನ ತಾಳಮದ್ದಲೆ, ದುರ್ಗಾ ಮಕ್ಕಳ ಮೇಳದಿಂದ, ಮಡಾಮಕ್ಕಿ ಮೇಳದಿಂದ ಬಡಗುತಿಟ್ಟು ಬಯಲಾಟ, ನೃತ್ಯ ಭಾರತಿ ತಂಡದಿಂದ ಭರತನಾಟ್ಯ ನಡೆಯಿತು.ನಂದಿನೀ ಅವತರಣ ದಿನಾಚರಣೆಯ ಸಲುವಾಗಿ ಶ್ರೀ ಭ್ರಾಮರೀಗೆ ನಾಲ್ಕು ಸಾವಿರ ಬೊಂಡಾಭಿಷೇಕ ನಡೆಯಿತು.
ಚಿತ್ರಗಳು : ಕಟೀಲ್ ಸ್ಟುಡಿಯೋ

















Friday, February 18, 2011

ನಂದಿನಿ ನದಿ ಅವತರಣ ದಿನ







ನಂದಿನಿ ನದಿ ಅವತರಣ ದಿನ
ಹೀಗೊಂದು ಕಲ್ಪನೆಯೇ ಎಷ್ಟೊಂದು ಚೆಂದ!ನದೀ ನಂದಿನೀಯ ಅವತರಣ ದಿನ ಅಥವಾ ಇಳೆಯಲ್ಲಿ ಆಕೆ ಜನ್ಮ ತಾಳಿದ ದಿನ!
ಇದು ಪುರಾಣ ಕಥೆಭೂಮಿಯಲ್ಲಿ ಹನ್ನೆರಡು ವರುಷಗಳ ಭೀಕರ ಬರಗಾಲ. ಎಲ್ಲೆಲ್ಲಿಯೂ ಜನರ ಹಾಹಾಕಾರ. ಇದರಿಮದ ನೊಂದ ಮುನಿ ಜಾಬಾಲಿ ಯಜ್ಞ ಮಾಡಬೇಕೆಂದು ಯೋಚಿಸಿ, ಕಾಮಧೇನುವನ್ನು ಕರೆತರಲು ದೇವಲೋಕಕ್ಕೆ ಹೋದನು. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನುವು ವರುಣಲೋಕಕ್ಕೆ ಯಜ್ಞಕ್ಕಾಗಿ ಹೋಗಿರುವಳೆಂದೂ, ಆಕೆಯ ಮಗಳಾದ ನಂದಿನೀಯನ್ನು ಕಳುಹಿಕೊಡುವುನೆಂದೂ ಹೇಳಿದನು. ಅದರಂತೆ ನಂದಿನೀಯನ್ನು ಕರೆದು, 'ಭೂಲೋಕಕ್ಕೆ ಹೋಗಿ ಜನರ ಕಷ್ಟವನ್ನು ಹೋಗಲಾಡಿಸು' ಎಂದನು. ನಂದಿನಿಯಾದರೋ ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿದಳು. ಒಡನೆ ಕೋಪಗೊಂಡ ಮುನಿ, ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸಿದನು. ತಪ್ಪನ್ನರಿತ ನಂದಿನಿ ಮುನಿಯನ್ನು ಯಾಚಿಸಲು, ಕರುಣಾರ್ದ್ರ ಹೃದಯನಾಗಿ, ಆದಿಮಾಯೆಯನ್ನು ಸ್ತುತಿಸು. ಅವಳೇ ನಿನಗೆ ವಿಶಾಪದ ದಾರಿಯನ್ನು ತೋರುವಳು ಎಂದನು.ನಂದಿನೀ ಅನನ್ಯ ಭಕ್ತಿಯಿಂದ ಸ್ತುತಿಸಲಾಗಿ ಜಗಜ್ಜನನೀ ಪ್ರತ್ಯಕ್ಷಳಾದಳು; ಮಗಳೇ ದುಃಖಿಸದಿರು, ನಿನ್ನ ಮಾತೆಯಾದ ನಾನು ನಿನ್ನ ಮಗಳಾಗಿ ಜನಿಸುವೆನು ಎಂದು ಅಭಯವಿತ್ತಳು.ಕೂಡಲೇ ನಂದಿನಿಯು ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ(ಕನಕಗಿರಿ) ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು.ಅರುಣಾಸುರನನ್ನು ಭ್ರಮರ ರೂಪ ತಾಳಿ ವಧಿಸಿದ ಜಗನ್ಮಾತೆಯನ್ನು ಸುರರು ಹೂಮಳೆಗೈದು ಸ್ತುತಿಸಿದರು. ದೇವೇಂದ್ರನು ಕಲ್ಪವೃಕ್ಷದ ಫಲವನ್ನು ತಂದು ಅಭಿಷೇಕಗೈದನು. ಆಗ ಪ್ರಸನ್ನಳಾದ ಜಗನ್ಮಾಥೆ ದುಷ್ಟನ ಖಡ್ಗಾಘಾತದಿಂದಲೂ, ದುರ್ಜನರ ರಕ್ತಪಾತದಿಂದಲೂ ಈ ಸ್ಥಳವು ಅಪವಿತ್ರವಾಗಿದೆ. ಆದುದರಿಂದ ಇದೇ ನಂದಿನೀ ನದಿ ಮಧ್ಯದಲ್ಲೇ ಪ್ರಸನ್ನಳಾಗುವಳೆಂದು ಅಭಯವನ್ನಿತ್ತು, ಲಿಂಗಕ್ಯಳಾದಳು.
೪೦ಕಿಲೋ ಮೀಟರ್...ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ಉಗಮವಾದದ್ದು ಎನ್ನುತ್ತಾರೆ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತ ಮುಚ್ಚಾರು, ಮಚ್ಚಾರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಕಡಲನ್ನ ಸೇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನೀಯ ಉದ್ದ ೪೦ಕಿಲೋ ಮೀಟರ್. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ ೯೧೧೨ ಹೆಕ್ಟೇರ್ ಪ್ರದೇಶ.ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳಾಯರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಹದಿನೈದರಷ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು, ಗುಂಡಾವು, ನೀರ್ ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಅಜಾರು ಜಲಕದ ಕಟ್ಟೆ, ಕಟೀಲು, ಪರಕಟ್ಟ, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರು ತಡೆಯುವ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತವೆ.
ದೇಗುಲಗಳನ್ನು ಹಾಡುಮಿಜಾರು ವಿಷ್ಣುಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರೀ, ಕಟೀಲು ದುರ್ಗಾಪರಮೇಶ್ವರೀ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಎಕ್ಕಾರು, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಗಳು, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿವೆ.
ಕಟೀಲಿನಲ್ಲಿಂದು ವಿಶೇಷನಂದಿನೀ ಅವತರಣ ದಿನವಾದ ತಾ.೧೮ ಕಟೀಲಿನಲ್ಲಿ ಭ್ರಾಮರಿಗೆ ಒಂದು ಸಾವಿರ ಗೆಂದಾಳಿ ಬೊಂಡ ಸೇರಿದಂತೆ ನಾಲ್ಕು ಸಾವಿರ ಸೀಯಾಳಾಭಿಷೇಕ, ಕ್ಷೀರಾಭಿಷೇಕ, ಕ್ಷೀರ ಪಾಯಸ ಸೇವೆ ಇದೆ. ಮಧ್ಯಾಹ್ನ ತಾಳಮದ್ದಲೆ, ಯಕ್ಷಗಾನ, ನೃತ್ಯ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು ನಂದಿನೀ ನದಿಯಲ್ಲಿ ತೀರ್ಥ ಸ್ನಾನ ವಿಶೇಷವಾಗಿದೆ.

Tuesday, February 15, 2011

ಕಟೀಲು ದೇಗುಲಕ್ಕೆ ಧಾರ್ಮಿಕ ಆಯುಕ್ತ ನಂದಕುಮಾರ್



ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ನಂದಕುಮಾರ್ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ, ಅಭಿವೃದ್ಧಿ ಕಾರ್‍ಯಗಳಿಗೆ ಸೂಚನೆ ನೀಡಿದರು.ದೇಗುಲ ಮತ್ತು ಪರಿಸರದಲ್ಲಿ ಮೂರು ಗಂಟೆಗಳ ಕಾಲ ಸುತ್ತಾಡಿದ ಆಯುಕ್ತರು, ನದಿ, ಸ್ನಾನಘಟ್ಟ, ಪಾಕಶಾಲೆ, ಭೋಜನ ಶಾಲೆ, ಗಣ್ಯರ ವಸತಿಗೃಹ, ಶೌಚಾಲಯ, ಬಸ್‌ನಿಲ್ದಾಣ ಹೀಗೆ ಎಲ್ಲವನ್ನೂ ನೋಡಿದರು. ದೇಗುಲದಲ್ಲಿ ಉಪಯೋಗವಾಗದಿರುವ ಯಂತ್ರಗಳನ್ನು ಬಳಸಲು ಸೂಚಿಸಿದರು. ಸ್ನಾನಘಟ್ಟವನ್ನು ಸರಿಪಡಿಸಬೇಕು, ಸ್ವಚ್ಛತೆಯನ್ನು ಕಾಪಾಡಬೇಕು. ತೋಟಗಾರಿಕೆ ಇಲಾಖೆ ಸಹಕಾರದಿಂದ ಉದ್ಯಾನವನ ನಿರ್ಮಿಸಬೇಕು ಇತ್ಯಾದಿ ಸೂಚನೆಗಳನ್ನು ನೀಡಿದರು. ಸ್ವಚ್ಛತೆಯ ಜೊತೆಗೆ ದೇಗುಲಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ನಂದಕುಮಾರ್ ಹೇಳಿದರು.ಇದೇ ಸಂದರ್ಭ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಗೋಶಾಲೆ, ನಂದಿನಿ ನದಿಯಿಂದ ವಿದ್ಯುತ್ ಉತ್ಪಾದನೆ, ಕುದ್ರುವಿನ ಅಭಿವೃದ್ಧಿ, ಬಾಡಿಗೆ ಅಂಗಡಿಗಳ ಏಲಂ ಹೀಗೆ ಅನೇಕ ಯೋಜನೆಗಳ ಕುರಿತು ಮಾಹಿತಿ ಪಡೆದ ಆಯುಕ್ತ ನಂದಕುಮಾರ್‌ಗೆ ದೇಗುಲಕ್ಕೆ ಜಮೀನು ಖರೀದಿ, ದಾನಿಗಳ ನೆರವಿನಿಂದ ಆಸ್ಪತ್ರೆ ನಿರ್ಮಿಸಲು ಜಮೀನು ನೀಡುವಿಕೆ ಇತ್ಯಾದಿ ವಿಚಾರಗಳ ಬಗ್ಗೆ ಗಮನ ಸೆಳೆಯಲಾಯಿತು.ದೇಗುಲದ ಮಾಸ್ಟರ್ ಪ್ಲಾನ್, ಹಾಗೂ ವಿವಿಧ ಯೋಜನೆಗಳ ಪ್ರಸ್ತಾವನೆಗಳು ಇಲಾಖೆ ದೇಗುಲದ ಆಡಳಿತಾಧಿಕಾರಿ ಸಿಂಧೂರಿ ಹಾಗೂ ದೇಗುಲದ ಪ್ರಬಂಧಕ ವಿಶ್ವೇಶ ರಾವ್ ವಿವರಿಸಿದರು. ಬಾಡಿಗೆ ಅಂಗಡಿಗಳನ್ನು ಸ್ಥಳಾಂತರಿಸುವ ಕುರಿತು ಅಂಗಡಿ ಮಾಲಿಕರನ್ನು ಕರೆದು ಸಭೆ ನಡೆಸಿದರು.ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಧಾರ್ಮಿಕ ದತ್ತಿ ಇಲಾಖೆಯ ಪ್ರಭಾಕರ್, ಕೃಷ್ಣಕುಮಾರ್, ಸುಧಾಕರ್, ಶೇಷಪ್ಪ ಮತ್ತಿತರ ಅಧಿಕಾರಿಗಳಿದ್ದರು.

ರಾಜ್ಯಮಟ್ಟದ ಸಂಸ್ಕೃತ ಸಂಶೋಧನ ಕಾರ್ಯಾಗಾರ

ಕಟೀಲಿನ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ಸಿರಸಿಯ ಸಂಸ್ಕೃತ ಶೋಧ ಸಂಸ್ಥಾನಗಳ ಆಶ್ರಯದಲ್ಲಿ ದಯಾನಂದ ಶಾನಭೋಗರ ಸಂಸ್ಮರಣೆ ನಿಮಿತ್ತ ರಾಜ್ಯ ಸ್ತರೀಯ ಸಂಸ್ಕೃತ ಸಂಶೋಧನ ಕಾರ್‍ಯಾಗಾರ ನಡೆಯಿತು.ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಬೆಂಗಳೂರು ವಿವಿಯ ಬಿ.ವಿ.ಶಶಿರೇಖಾ, ಮೈಸೂರು ವಿವಿಯ ವೀರಭದ್ರ ಸ್ವಾಮಿ, ಬಿ.ಎ.ದೊಡ್ಡಮನಿ, ಡಾ.ಮಹಾದೇವಯ್ಯ, ಧಾರವಾಡದ ಕೆ.ಬಿ.ಅರ್ಚಕ, ಡಾ.ಎಂ.ಎನ್.ಜೋಷಿ ಉಪನ್ಯಾಸ ನೀಡಿದರು. ಡಾ.ಜಿ.ಎನ್.ಭಟ್, ಡಾ.ಎಂ.ಜಿ.ಹೆಗಡೆ, ಪ್ರಾಚಾರ್‍ಯ ನಾಗರಾಜ, ಪದ್ಮನಾಭ ಮರಾಠೆ ಮತ್ತಿತರರಿದ್ದರು.ಚಿತ್ರ ಈಮೆಲ್

Saturday, February 12, 2011

ಕಟೀಲಿನಲ್ಲಿ ಎಂಎಲ್‌ಸಿ ನಾರಾಯಣ ಸ್ವಾಮಿ


ಮೈಸೂರಿನ ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ಪೂಜೆಯಲ್ಲಿ ಪಾಲ್ಗೊಂಡರು.ಸ್ಥಳೀಯ ಜೆಡಿಎಸ್ ಮುಖಂಡ, ಮೆನ್ನಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಸಂಜೀವ ಮಡಿವಾಳ ಪಕ್ಷದ ಕಾರ್‍ಯಕರ್‍ತರ ಸಮಸ್ಯೆಗಳನ್ನು ಶಾಸಕರಲ್ಲಿ ಹೇಳಿಕೊಂಡರು .

Wednesday, February 9, 2011

ಕಟೀಲಿನಲ್ಲಿ ನಂದಿನಿ ಅವತರಣ ದಿನ


ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೧೮ರಂದು ಮಾಘಶುದ್ಧ ಹುಣ್ಣಿಮೆಯಂದು ನಂದಿನೀ ಅವತರಣ ದಿನದಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ.ನದಿ ನಂದಿನಿಯ ಜನ್ಮದಿನದಂದು ನಂದಿನೀ ಸ್ನಾನ, ಶ್ರೀದೇವಿಗೆ ಎಳನೀರು ಅಭಿಷೇಕ, ಕ್ಷೀರಾಭಿಷೇಕ, ಕ್ಷೀರಪಾಯಸ ಸೇವೆ ನಡೆಯಲಿದ್ದು ಶ್ರೀ ಕ್ಷೇತ್ರದಲ್ಲಿ ಮಹತ್ವದ ದಿನವಾಗಿದೆ.ಅಂದು ಕಟೀಲು ದೇಗುಲದಲ್ಲಿ ಅರ್ಚಕರಾಗಿದ್ದ ದಿ. ಕೃಷ್ಣ ಆಸ್ರಣ್ಣರ ಸಂಸ್ಮರಣಾರ್ಥ ಕಮಲಾದೇವಿ ಪ್ರಸಾದ ಆಸ್ರಣ್ಣ, ಕರ್ನಾಟಕ ಯಕ್ಷಗಾನ ಅಕಾಡಮಿ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ವಿವಿಧ ಕಾರ್‍ಯಕ್ರಮಗಳು ನಡೆಯಲಿದೆ.ಮಧ್ಯಾಹ್ನ ಬಲಿಪ, ಕೊರ್ಗಿ ಉಪಾಧ್ಯಾಯ, ಗೋವಿಂದ ಭಟ್, ಸುಣ್ಣಂಬಳ, ವಾಸುದೇವರಂಗ ಭಟ್ ಉಪಸ್ಥಿತಿಯಲ್ಲಿ ವೀರಮಣಿ ಕಾಳಗ ತಾಳಮದ್ದಲೆ, ದುರ್ಗಾಮಕ್ಕಳ ಮೇಳದ ಕಲಾವಿದರಿಂದ ಸಾಂಪ್ರದಾಯಿಕ ಯಕ್ಷಗಾನ ಪೂರ್ವರಂಗ ಬಳಿಕ ಕಲಾಪೋಷಕ ಡಾ.ಭಾಸ್ಕರಾನಂದ ಕುಮಾರ್‌ಗೆ ಕಲಾಪೋಷಕ ಸಂಮಾನ ನಡೆಯಲಿದೆ. ಅಕಾಡಮಿ ಸದಸ್ಯ ಸಿ.ಪಿ.ಅತಿಕಾರಿ, ಲಕ್ಷ್ಮೀನಾರಾಯಣ ಆಸ್ರಣ್ಣ, ಪಿ.ಕೃಷ್ಣ ಭಟ್ ಉಪಸ್ಥಿತಿಯಲ್ಲಿ ಹರಿನಾರಾಯಣ ಬೈಪಡಿತ್ತಾಯ ರಚಿತ ಧೀಂಕಿಟ ಚೆಂಡೆ ಮದ್ದಲೆ ಪಠ್ಯಕ್ರಮ ಕೃತಿಯನ್ನು ಉಳಿತ್ತಾಯ ವಿಷ್ಣು ಅಸ್ರ ಬಿಡುಗಡೆಗೊಳಿಸಲಿದ್ದಾರೆ.ಬಲಿಪ ಶಿವಶಂಕರ ಭಟ್, ಹರಿನಾರಾಯಣ ಹಾಗೂ ರಾಜೇಶ್ ಕಟೀಲ್‌ಗೆ ಗುರುವಂದನೆ ನಡೆಯಲಿದ್ದು, ಹರಿನಾರಾಯಣದಾಸ ಆಸ್ರಣ್ಣ ಅಭಿನಂದಿಸಲಿದ್ದಾರೆ.ಬಳಿಕ ಮಕ್ಕಳ ಮೇಳದವರಿಂದ ಜಾಂಬವತೀ ಕಲ್ಯಾಣ ಹಾಗೂ ಮಡಾಮಕ್ಕಿ ಮೇಳದವರಿಂದ ಯಕ್ಷಗಾನ ಬಯಲಾಟವಿದೆ ಎಂದು ಪ್ರಕಟನೆ ತಿಳಿಸಿದೆ.