Thursday, December 29, 2011

ಪ್ರತಿಮಾಗೆ ಐದನೇ ರಾಂಕ್


ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪ್ರತಿಮಾ ಮಂಗಳೂರು ವಿವಿ ನಡೆಸಿದ ಬಿಎ ಪರೀಕ್ಷೆಯಲ್ಲಿ ಐದನೇ ರ‍್ಯಾಂಕ್ ಗಳಿಸಿದ್ದಾರೆ.

Tuesday, December 27, 2011

ಜ್ಯೋತಿಪ್ರಕಾಶ ಮಿರ್ಜಿ ಕಟೀಲು ದೇಗುಲಕ್ಕೆ ಭೇಟಿ


ಬೆಂಗಳೂರು ನಗರ ಆಯುಕ್ತ ಜ್ಯೋತಿಪ್ರಕಾಶ ಮಿರ್ಜಿ ಕಟೀಲು ದೇಗುಲಕ್ಕೆ ಮಂಗಳವಾರ ಭೇಟಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಅರ್ಚಕ ಕಮಲಾದೇವಿ ಆಸ್ರಣ್ಣ, ಹರಿ ಆಸ್ರಣ್ಣ, ಬಜಪೆ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ ಇದ್ದರು.

ಕಟೀಲು ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ


ಬಿಎಎಸ್‌ಎಫ್ ಇಂಡಿಯಾ ಲಿಮಿಟೆಡ್ ವತಿಯಂದ ಕಟೀಲು ದೇಗುಲ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು. ಬಿಎಎಸ್‌ಎಫ್‌ನ ಪಿ.ಎಂ. ನಟರಾಜ್, ಸಂತೋಷ್, ಉಪಪ್ರಾಚಾರ‍್ಯ ಸುರೇಶ್ ಭಟ್, ಮುಖ್ಯ ಶಿಕ್ಷಕಿ ವೈ. ಮಾಲತಿ, ಶಿಕ್ಷಕ ರಕ್ಷಕ ಸಂಘದ ಹರಿನಾರಾಯಣದಾಸ ಆಸ್ರಣ್ಣ ಮತ್ತಿತರರಿದ್ದರು.

Sunday, December 25, 2011

ಕಟೀಲಿಗೆ ಸದಾನಂದ ಗೌಡ ಭೇಟಿ






ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಸದಾನಂದ ಗೌಡ, ಪೂಜೆ ವೀಕ್ಷಿಸಿ, ಪ್ರಸಾದ ಸ್ವೀಕರಿಸಿದರು.
ಅರ್ಚಕ ಅನಂತ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ ಪ್ರಸಾದ ನೀಡಿದರು.
ಸಾಂಸದ ನಳಿನ್ ಕುಮಾರ್, ನಾಗರಾಜ ಶೆಟ್ಟಿ, ಗಣೇಶ್ ಕಾರ್ಣಿಕ್, ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ನ ಶೈಲಾ ಶೆಟ್ಟಿ, ಜನಾರ್ದನ ಕಿಲೆಂಜೂರು, ಕಿನ್ನಿಗೋಳಿ ದೇವಪ್ರಸಾದ್, ಬಿಜೆಪಿ ಮುಖಂಡರು ಈ ಸಂದರ್ಭ ಇದ್ದರು.

Friday, December 23, 2011

ಹಳ್ಳಿಯೆಡೆಗೆ ಬನ್ನಿ -ಅಭಯಚಂದ್ರ


ಮೂಲ್ಕಿ : ನಾನಾ ಕಾರಣಗಳಿಂದಾಗಿ ಯುವಕರು ಪೇಟೆಯೆಡೆಗೆ ಸಾಗುತ್ತಿದ್ದಾರೆ. ಬದಲಾಗಿ ಹಳ್ಳಿಯಲ್ಲಿದ್ದುಕೊಂಡೇ ಕೃಷಿ ಮುಂತಾದ ಕೆಲಸಗಳಿಂದ ಮಹತ್ತರವಾದುದನ್ನು ಸಾಧಿಸಿ ತೋರಿಸಬೇಕಾಗಿದೆ ಎಂದು ಶಾಸಕ ಅಭಯಚಂದ್ರ ಹೇಳಿದರು.
ಅವರು ಶುಕ್ರವಾರ ಪಡುಪಣಂಬೂರು ಮಾದರಿ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟೀಲು ದೇಗುಲ ಪದವೀ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾ.ಪಂ.ಅಧ್ಯಕ್ಷ ವಿನೋದ್ ಎಸ್.ಸಾಲ್ಯಾನ್, ಮೂಲ್ಕಿ ಅರಸು ಕಂಬಳ ಸಮಿತಿಯ ರಾಮಚಂದ್ರ ನಾಯ್ಕ್, ಕಾಲೇಜಿನ ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಕಲ್ಲಾಪು ದೇಗುಲದ ಕಾಂತಪ್ಪ ಗುರಿಕಾರ, ತಾ.ಪಂ.ಸದಸ್ಯ ರಾಜು ಕುಂದರ್, ಮುಖ್ಯ ಶಿಕ್ಷಕಿ ಭುವನೇಶ್ವರೀ, ಶಿಬಿರಾಧಿಕಾರಿಗಳಾದ ಕೇಶಚ ಎಚ್, ಡಾ.ಕೃಷ್ಣ ಕೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಚಂದ್ರಕಲಾ, ಸುಪ್ರೀತ್, ಪ್ರಮೀಳಾ, ಪ್ರಜ್ವಲ್ ಮತ್ತಿತರರಿದ್ದರು. ಶಿಬಿರ ತಾ.೨೯ರಂದು ಸಮಾಪನಗೊಳ್ಳಲಿದ್ದು, ನದಿಗೆ ತಡೆಗೋಡೆ ರಚನೆ, ಸಮುದ್ರದ ಬದಿ ಕಾಂಡ್ಲಾ ಗಿಡ ನೆಡುವುದು, ರಸ್ತೆ ನಿರ್ಮಾಣ, ಹೂತೋಟ ರಚನೆ, ಬಸದಿ ಪರಿಸರ ಸ್ವಚ್ಛತೆ ಮುಂತಾದ ಕಾರ‍್ಯಗಳನ್ನು ಹಮ್ಮಿಕೊಳ್ಳಲಾಗಿದೆ.

Thursday, December 22, 2011

ಸಕಾರಾತ್ಮಕ ನಿಲುವಿರಲಿ-ವಿಜಯಲಕ್ಷ್ಮೀ ಶಿಬರೂರು


ಕಟೀಲು : ಸಕಾರಾತ್ಮಕ ನಿಲುವಿನೊಂದಿಗೆ ಪಾಠಗಳಷ್ಟೇ ಪಾಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಅವಕಾಶಗಳನ್ನು ಬಳಸಿಕೊಂಡು ಪ್ರತಿಭೆ, ಪ್ರಯತ್ನದೊಂದಿಗೆ ಬೆಳೆದಾಗ ಯಶಸ್ಸು ಲಭ್ಯವಾಗುತ್ತದೆ ಎಂದು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಹೇಳಿದರು.
ಅವರು ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಈ ಸಂದರ್ಭ ಶಾಲೆಯ ಹಳೆವಿದ್ಯಾರ್ಥಿನಿಯೂ ಆಗಿರುವ ಮಾಧ್ಯಮ ಅಕಾಡಮಿ ಪುರಸ್ಕೃತ ವಿಜಯಲಕ್ಷ್ಮೀಯವರನ್ನು ಸಂಮಾನಿಸಲಾಯಿತು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಈಶ್ವರ್, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಜನಾರ್ದನ ಗೌಡ, ಶಿಕ್ಷಕ ರಕ್ಷಕ ಸಂಘದ ಹರಿನಾರಾಯಣ ಆಸ್ರಣ್ಣ, ಬಾಬು ಶೆಟ್ಟಿ, ಪದವಿ ಕಾಲೇಜಿನ ಬಾಲಕೃಷ್ಣ ಶೆಟ್ಟಿ, ಪ್ರಾಥಮಿಕ ಶಾಲೆಯ ಮಾಲತಿ, ಕಟೀಲು ಚರ್ಚ್‌ನ ರಾಬರ್ಟ್ ಕ್ರಾಸ್ತಾ, ವಿದ್ಯಾರ್ಥಿ ನಾಯಕ ರೋಶನ್, ಶಿಕ್ಷಣ ಇಲಖೆಯ ದಿನೇಶ್ ಮತ್ತಿತರರಿದ್ದರು. ಉಪಪ್ರಾಚಾರ‍್ಯ ಸುರೇಶ್ ಭಟ್ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಕೆ.ವಿ.ಶೆಟ್ಟಿ ವಂದಿಸಿದರು.

Wednesday, December 21, 2011

ಕಟೀಲು, ಕೊಲ್ಲೂರು ದೇಗುಲ ಅಭಿವೃದ್ದಿ ಬಗ್ಗೆ ಸಭೆ



ಕಟೀಲು : ಧಾರ್ಮಿಕ ದತ್ತಿ ಇಲಾಖಾ ಆಯುಕ್ತ ನಂದಕುಮಾರ್ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಕಟೀಲು ಮತ್ತು ಕೊಲ್ಲೂರು ದೇಗುಲಗಳ ಅಭಿವೃದ್ಧಿ ಬಗ್ಗೆ ಬುಧವಾರ ಸಂಜೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕಟೀಲಿನಲ್ಲಿ ಡ್ರೈನೇಜು ಕಾಮಗಾರಿಯನ್ನು ದೇಗುಲದ ಸುಮಾರು ರೂ. ೪ಕೋಟಿ ಮೊತ್ತದಲ್ಲಿ ಕೂಡಲೇ ಆರಂಭಿಸುವಂತೆ ಕ್ರಮಕೈಗೊಳ್ಳಬೇಕು. ಸ್ನಾನಘಟ್ಟವನ್ನು ಸರಿಪಡಿಸುವುದು. ಮೂಲಸ್ಥಾನ ಕುದ್ರುವಿನ ಅಭಿವೃದ್ಧಿಗೆ ವೇಗ ಕೊಡುವುದು, ಯಾತ್ರಿ ನಿವಾಸದ ಕಾಮಗಾರಿ ಮಾಸ್ಟರ್ ಪ್ಲಾನ್ ರಚನೆಯ ಕಾರಣಕ್ಕಾಗಿ ವಿಳಂಬವಾಗಿದೆ. ನಲವತ್ತಕ್ಕೂ ಹೆಚ್ಚು ವಿಚಾರಗಳು ಚರ್ಚೆಗೊಳಗಾಗಿದ್ದು, ಜನವರಿ ಕೊನೆಯಲ್ಲಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ತಿಳಿಸಿದ ಆಯುಕ್ತರು, ಕಟೀಲು ದೇಗುಲದ ಚಿನ್ನದ ರಥ ನಿರ್ಮಾಣಕ್ಕೆ ಟೆಂಡರು ಪ್ರಕ್ರಿಯೆ ಮುಗಿದಿದೆ. ಇನ್ನು ಒಂದೆರಡು ತಿಂಗಳಲ್ಲಿ ಪೂರ್ಣವಾಗುವುದು ಎಂದು ತಿಳಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಆಗಮ ಶಾಸ್ತ್ರ ವಿಭಾಗದ ಗಣಪತಿ ಶಾಸ್ತ್ರಿ, ಜಿಲ್ಲೆಯ ಅಧಿಕಾರಿ ಲಕ್ಷ್ಮೀ, ಪ್ರಭಾಕರ್, ಸಹಾಯಕ ಆಯುಕ್ತ ವೆಂಕಟೇಶ್, ಪ್ರಬಂಧಕ ವಿಶ್ವೇಶ ರಾವ್, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊಲ್ಲೂರು ಮೂಕಾಂಬಿಕಾ ದೇಗುಲದ ಶಿಲಾಮಯ ಗರ್ಭಗೃಹ ಸೋರುವ ಕಾರಣಕ್ಕೆ ತಾಮ್ರ ಮುಚ್ಚಿಸುವುದು, ಸೌಪರ್ಣಿಕಾ ಸ್ನಾನಘಟ್ಟವನ್ನು ಉತ್ತಮವಾಗಿಸುವುದು, ನದಿಯ ಸ್ವಚ್ಛತೆ, ಆನೆಬಾಗಿಲು ಹೊಸತಾಗಿಸುವುದು, ಹೊಸ ದಾಸೋಹಗೃಹ ರಚನೆ ಮುಂತಾದ ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಚರ್ಚೆ ನಡೆಯಿತು.
ಕುಂದಾಪುರ ಉಪವಿಭಾಗಾಧಿಕಾರಿ, ಆಡಳಿತಾಧಿಕಾರಿ ಸದಾಶಿವ ಪ್ರಭು, ಕಾರ‍್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ, ಇಂಜಿನಿಯರುಗಳಾದ ಮುರಳಿ, ಪ್ರದೀಪ, ಅರ್ಚಕರಾದ ವಿಶ್ವನಾಥ ಅಡಿಗ, ಮಂಜುನಾಥ ಅಡಿಗ, ಶ್ರೀಕಾಂತ ಅಡಿಗ, ಶ್ರೀಧರ ಅಡಿಗ ಮತ್ತಿತರರಿದ್ದರು.

Tuesday, December 20, 2011

ಕಟೀಲಿನಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ




ಕಟೀಲು : ದ.ಕ.ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವೀ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಸಹಯೋಗದಲ್ಲಿ ೧೪-೧೭ರ ವಯೋಮಿತಿಯ ಬಾಲಕ ಬಾಲಿಕೆಯರ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಮಂಗಳವಾರ ಕಟೀಲಿನಲ್ಲಿ ಆರಂಭವಾಯಿತು.
ಶಾಸಕ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಶಾಸಕ ಅಭಯಚಂದ್ರ ಕ್ರೀಡಾಳುಗಳಿಂದ ವಂದನೆ ಸ್ವೀಕರಿಸಿದರು. ಮಂಗಳೂರು ತಾ.ಪಂ.ಅಧ್ಯಕ್ಷೆ ಭವ್ಯಾ ಗಂಗಾಧರ್ ಧ್ವಜಾರೋಹಣಗೈದರು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಜಿ.ಪಂ.ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ಕರಾಟೆ ಸಮಿತಿಯ ಈಶ್ವರ್, ಉಪಪ್ರಾಚಾರ‍್ಯ ಸುರೇಶ್ ಭಟ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎನ್.ಎಸ್.ಅಂಗಡಿ, ಗ್ರಾಂಡ್ ಮಾಸ್ಟರ್ ಗೋಶಿಯನ್ ರ‍್ಯು ಸ್ಟೈಲ್ ಇಂಡಿಯನ್ ಕರಾಟೆಯ ಚೆನೈನ ಬಿ.ಎಂ.ನರಸಿಂಹನ್, ನವೀನ್ ಪುತ್ರನ್ ಮತ್ತಿತರರಿದ್ದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎನ್.ನಾಯಕ್ ಪ್ರಸ್ತಾವನೆಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

ಕರಾಟೆ ಹುಟ್ಟಿದ್ದು ಜಪಾನ್‌ನಲ್ಲಾ? ಭಾರತದಲ್ಲಾ?
ರಾಜ್ಯದ ೩೪ರಲ್ಲಿ ೧೮ಜಿಲ್ಲೆಗಳಿಂದ ಮಾತ್ರ ತಂಡಗಳು ಭಾಗವಹಿಸಿದ್ದು, ಕರಾಟೆ ಸರಕಾರಿ ಶಾಲೆಗಳಲ್ಲಿ ಇಲ್ಲ. ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ಇದೆ. ಶಿಕ್ಷಣದ ಕ್ರೀಡಾ ವಿಭಾಗದಲ್ಲಿ ೨೧ ಆಟಗಳಿದ್ದು, ಕರಾಟೆ ಸೇರ್ಪಡೆಗೆ ವಿವಿಧ ರೀತಿಯ ಕರಾಟೆ ಕ್ರಮಗಳಿರುವುದು ತೊಡಕಾಗಿದೆ. ರಾಜ್ಯದಲ್ಲಿ ಸರಿಯಾದ ಕರಾಟೆ ಶಿಕ್ಷಕರಿಲ್ಲದ ಕಾರಣ, ತೀರ್ಪುಗಾಗಿ ದೂರದ ಚೆನ್ನೈನಿಂದ ಕರಾಟೆ ಶಿಕ್ಷಕರನ್ನು ಕರೆಯಿಸಲಾಗಿದೆ. ಇಲಾಖೆ ೨೦೦೫ರಿಂದ ಕರಾಟೆಯನ್ನು ವಿಶೇಷ ಆಟವೆಂದು ಮಾನ್ಯತೆ ಮಾಡಿದ್ದು, ಕರಾಟೆ ಜಪಾನ್‌ನಲ್ಲಿ ಹುಟ್ಟಿದ ಕ್ರೀಡೆಯಾಗಿದ್ದು ಇತ್ತೀಚಿಗೆಯಷ್ಟೇ ಹೆಚ್ಚು ಜನಪ್ರಿಯತೆ ಕಾಣುತ್ತಿದೆ ಎಂದು ಪ್ರಸ್ತಾವನೆಗೈದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎನ್.ನಾಯಕ್ ಹೇಳಿದರು.
ಬಳಿಕ ಮಾತನಾಡಿದ ಶಾಸಕ ಗಣೇಶ ಕಾರ್ಣಿಕ್ ಹೇಳಿದ್ದು, ಕರಾಟೆ ಜಪಾನ್‌ನಲ್ಲಿ ಹುಟ್ಟಿದ್ದಲ್ಲ. ಅದರ ಮೂಲ ಭಾರತವೇ. ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮದೊಂದಿಗೆ ಕರಾಟೆ ಚೀನಾ, ಜಪಾನ್ ಮತ್ತಿತರ ದೇಶಗಳಿಗೆ ಪ್ರಚಾರ ಆಯಿತು ಎಂದು ಹೇಳಿದರು.

ಕಟೀಲಿನಲ್ಲಿ ರಾಜ್ಯಮಟ್ಟದ ಕರಾಟೆ
ಆತಿಥೇಯ ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರೌಢಶಾಲೆ ಹಾಗೂ ದ.ಕ.ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ೧೪ರಿದ ೧೭ರ ವಯೋಮಿತಿಯವರ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆತಿಥೇಯ ದಕ್ಷಿಣ ಕನ್ನಡ ಜಿಲ್ಲೆ ಬಾಲಕರ ಮತ್ತು ಬಾಲಿಕೆಯರ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಪಡೆಯಿತು.
೧೪ರ ವಯೋಮಿತಿಯಲ್ಲಿ ಬಾಲಕರ ಬಾಲಿಕೆಯರ ವಿಭಾಗಗಳಲ್ಲಿ ದಕ್ಷಿಣ ಕನ್ನಡಕ್ಕೆ ತಂಡ ಪ್ರಶಸ್ತಿ ದೊರೆತರೆ, ೧೭ರ ವಯೋಮಿತಿಯಲ್ಲಿ ದ.ಕ.ದೊಂದಿಗೆ ಮೈಸೂರು ಜಿಲ್ಲೆ ತಂಡ ಪ್ರಶಸ್ತಿ ಹಂಚಿಕೊಂಡಿತು.
ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿಯ ಈಶ್ವರ್, ಇಲಾಖೆಯ ಎನ್.ಎಸ್.ಅಂಗಡಿ, ಚೆನ್ನೈನ ನರಸಿಂಹನ್, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾಣ್, ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಪ್ರಾಚಾರ‍್ಯ ಸುರೇಶ್ ಭಟ್, ಪುರುಷೋತ್ತಮ ಶೆಟ್ಟಿ, ಸಾಯಿನಾಥ ಶೆಟ್ಟಿ, ವೈ.ಮಾಲತಿ, ಕೆ.ವಿ.ಶೆಟ್ಟಿ ಮತ್ತಿತರರಿದ್ದರು.

Wednesday, December 14, 2011

ಕಟೀಲಿನಲ್ಲಿ ಹಾವು ಮತ್ತು ನಾವು





ಹಾವುಗಳಿಂದ ಪ್ರಕೃತಿಯ ಸಮತೋಲನ-ಗುರುರಾಜ ಸನಿಲ್
ಹಾವಿನ ದ್ವೇಷ ಹನ್ನೆರಡು ವರುಷ ನಿಜವಾ?, ಕೇರೆ ಹಾವಿನ ಬಾಲವನ್ನು ಹೆಂಗಸರ
ತಲೆಗೆ ತಾಗಿಸಿದರೆ ಅದು ಉದ್ದವಾಗಿ ಬೆಳೆಯುತ್ತದೆಯಂತೆ ಸತ್ಯವಾ? ಏಳು ಹೆಡೆಯ ನಾಗರ
ಉಂಟಾ?ಹಾವು ಹಾಲು ಕುಡಿಯುವುದಿಲ್ಲವಾ? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ
ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಕೇರೆ, ನೀರೊಳ್ಳೆ, ಇರ್ತಲೆ ಹಾವು,
ಹೆಬ್ಬಾವುಗಳನ್ನು ಕೈಯಲ್ಲೇ ಹಿಡಿದು ಓಓ, ಯಬ್ಬಾ, ಐಸಾ ಅಂತೆಲ್ಲ ಅಚ್ಚರಿ, ಕುತೂಹಲ,
ಭಯ ಮಿಶ್ರಿತ ಖುಷಿಯಿಂದ ಸಂಭ್ರಮಿಸಿದರು.
ಇದು ನಡೆದದ್ದು ಕಟೀಲಿನ ಪದವೀಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ.
ಬುಧವಾರ ಇಲ್ಲಿನ ವಿದ್ಯಾರ್ಥಿಗಳು ಹಾವುಗಳೊಂದಿಗೆ ಕಳೆದರು!
ನೀರೊಳ್ಳೆ ಹಾವು, ಕೇರೆ ಹಾವು, ಕಡಂಬಲ, ನಾಗರ, ಹೆಬ್ಬಾವು, ಇರ್ತಲೆ ಹಾವು ಹೀಗೆ
ಹತ್ತಕ್ಕೂ ಹೆಚ್ಚು ಜಾತಿಯ ಉರಗಗಳನ್ನು ಪ್ರದರ್ಶಿಸಿ, ಅವುಗಳ ಬಗ್ಗೆ ಮಾಹಿತಿ ನೀಡಿ,
ವಿದ್ಯಾರ್ಥಿಗಳ ಕುತೂಹಲ ಭರಿತ ಪ್ರಶ್ನೆಗಳಿಗೆ ಉತ್ತರಿಸಿದವರು ಉಡುಪಿಯ ಗುರುರಾಜ
ಸನಿಲ್. ಕಿನ್ನಿಗೋಳಿಯ ರೋಟರ‍್ಯಾಕ್ಟ್, ಕಟೀಲಿನ ಎನ್‌ಎಸ್‌ಎಸ್ ಹಾಗೂ ಕಟೀಲಿನ
ನಾಗರಿಕರು ಆಯೋಜಿಸಿದ ಹಾವು ನಾವು ಕಾರ‍್ಯಕ್ರಮದಲ್ಲಿ ಗುರುರಾಜ ಸನಿಲ್ ಮಾಹಿತಿ
ನೀಡಿದರು.
ಕಳೆದೆರಡು ದಶಕಗಳಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ
ಬಿಟ್ಟಿದ್ದೇನೆ. ಹನ್ನೆರಡು ಬಾರಿ ವಿಷಪೂರಿತ ಹಾವುಗಳಿಂದ ಕಡಿಸಿಕೊಂಡರೂ
ಬದುಕಿದ್ದೇನೆ. ಪ್ರಥಮ ಚಿಕಿತ್ಸೆಯ ಮೂಲಕ ಹಾವು ಕಚ್ಚಿದರೂ ಬದುಕಬಹುದು. ಇವತ್ತು
ಆಸ್ಪತ್ರೆಗಳಲ್ಲಿ ಔಷಧಿ ಇದೆ. ಹಾವುಗಳಿಂದ ಪ್ರಕೃತಿಯ ಸಮತೋಲನ ಸಾಧ್ಯ. ಹಾಗಾಗಿ
ಹಾವುಗಳನ್ನು ಕೊಲ್ಲಬೇಡಿ. ದಕ್ಷಿಣ ಕನ್ನಡ, ಉಡುಪಿಗಳಲ್ಲಿ ೪೫ಜಾತಿಯ ಹಾವುಗಳಿದ್ದು,
ಅವುಗಳಲ್ಲಿ ಆರು ಜಾತಿಯವುಗಳು ಮಾತ್ರ ವಿಷಯುಕ್ತವಾದುವುಗಳು. ಹಾಗೆಂದು ಹಾವುಗಳು ನಾವು
ತೊಂದರೆ ಮಾಡದಿದ್ದರೆ ಏನೂ ಮಾಡುವುದಿಲ್ಲ ಎಂದು ಹಾವುಗಳ ಕುರಿತು ಗುರುರಾಜ ಸನಿಲ್
ಮಾಹಿತಿ ನೀಡಿದರು.
ಪದವೀಪೂರ್ವ ಕಾಲೇಜಿನ ಪ್ರಾಚಾರ‍್ಯ ಜಯರಾಮ ಪೂಂಜ, ಪದವಿ ಕಾಲೇಜಿನ ಪ್ರಾಚಾರ‍್ಯ
ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಕೇಶವ ಎಚ್, ಕೃಷ್ಣ ಕಾಂಚನ್, ನವೀನ್ ಕುಮಾರ್,
ರೋಟರ‍್ಯಾಕ್ಟ್‌ನ ಗಣೇಶ ಕಾಮತ್, ದಿನೇಶ್ ಕೊಡಿಯಾಲ್‌ಬೈಲ್, ಕೆ.ಬಿ.ಸುರೇಶ್
ಮತ್ತಿತರರಿದ್ದರು.

ವಿದ್ಯಾರ್ಥಿ ನಿಧನ


ಕಟೀಲು : ಇಲ್ಲಿನ ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿ, ತೋಕೂರು ಚಂದ್ರಶೇಖರ್
ಎಂಬವರ ಪುತ್ರ ಸುಶಾಂತ್, ಮಲೇರಿಯಾ ಜ್ವರದಿಂದ ಆಸ್ಪತ್ರೆಯಲ್ಲಿ ಬುಧವಾರ
ಮೃತಪಟ್ಟಿದ್ದಾನೆ.
ಶೋಕಾಚರಣೆ ಪ್ರಯುಕ್ತ ಶಾಲೆಗೆ ರಜೆ ಸಾರಲಾಗಿತ್ತು.

Monday, December 12, 2011

ಕಟೀಲು ಪ.ಪೂ.ಕಾಲೇಜು ವಾರ್ಷಿಕೋತ್ಸವ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ವಾರ್ಷಿಕೋತ್ಸವ ಭಾನುವಾರ ನಡೆಯಿತು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಬದ್ರಿಯಾ ಕಾಲೇಜಿನ ಇಸ್ಮಾಯಿಲ್, ರೆ.ಫಾ.ರಾಬರ್ಟ್ ಕ್ರಾಸ್ತಾ, ನ್ಯಾಯವಾದಿ ದಿನೇಶ್ ಉಳೆಪಾಡಿ, ಪದವೀ ಕಾಲೇಜಿನ ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ ಪ್ರೌಢಶಾಲೆಯ ಉಪಪ್ರಾಚಾರ‍್ಯ ಸುರೇಶ್ ಭಟ್, ಶಿಕ್ಷಕ ರಕ್ಷಕ ಸಂಘದ ಎಕ್ಕಾರು ಮೋನಪ್ಪ ಶೆಟ್ಟಿ, ವಿದ್ಯಾರ್ಥಿ ನಾಯಕ ಆದಿತ್ಯ ಮತ್ತಿತರರಿದ್ದರು. ಪ್ರಾಚಾರ‍್ಯ ಜಯರಾಮ ಪೂಂಜ ಸ್ವಾಗತಿಸಿದರು. ಭಾರತೀ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

Friday, December 9, 2011

ಚೇತನಾಶಕ್ತಿಯ ಜಾಗೃತಿಯಿಂದ ಕಾಯಿಲೆ ದೂರ-ಕಿರಣ್ ಕುಮಾರ್


ಕಟೀಲು : ನಮ್ಮ ದೇಹದ ಚೇತನಾಶಕ್ತಿಯನ್ನು ಅರಿತು ಅದನ್ನು ಜಾಗೃತಗೊಳಿಸುವುದರಿಂದ ಕಾಯಿಲೆಗಳು ದೂರವಾಗುತ್ತವೆ. ನಮ್ಮ ದೇಹವನ್ನು ವ್ಯಾಯಾಮ, ಯೋಗಗಳಿಂದ ಆರೋಗ್ಯವಂತವನ್ನಾಗಿಸಿಡಬಹುದು ಎಂದು ಕೆರೆಕಾಡು ಆರೋಗ್ಯ ಸೇವಾ ಪ್ರತಿಷ್ಟಾನದ ಕಿರಣ್ ಕುಮಾರ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕಗಳು ಹಾಗೂ ಕಿನ್ನಿಗೋಳಿ ರೋಟರ‍್ಯಾಕ್ಟ್ ಆಯೋಜಿಸಿದ ನ್ಯೂರೋಥೆರಪಿ ಚಿಕಿತ್ಸಾ ವಿಧಾನದ ಮಾಹಿತಿ ಹಾಗೂ ಚಿಕಿತ್ಸೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಇಂದಿನ ಅನಿಯಮಿತ ಜೀವನ ಶೈಲಿಯು ಶಾರೀರಿಕ ಶಕ್ತಿಯನ್ನು ಕಡಿಮೆ ಮಾಡಿದೆ. ಮಾನವ ಶರೀರವು ಸ್ವತಃ ಪುನರ್‌ನಿರ್ಮಾಣ ಮಾಡುವ ಮತ್ತು ನಿರೋಗಿಯಾಗಿರುವ ಸಾಮರ್ಥ್ಯ ಹೊಂದಿದೆ. ನ್ಯೂರೋಥೆರಪಿ ಚಿಕಿತ್ಸೆಯಲ್ಲಿ ಶರೀರದ ವಿಭಿನ್ನ ಅಂಗಗಳ ಮೇಲೆ ಒತ್ತಡವನ್ನು ಹಾಕುವುದರ ಮೂಲಕ ರೋಗಿಗೆ ಹೆಚ್ಚು ಲಾಭ ಸಿಗುವಂತಾಗುತ್ತದೆ. ನ್ಯೂರೋಥೆರಪಿಯು ಔಷಧಿ ರಹಿತವಾಗಿ ಚಿಕಿತ್ಸೆ ಮಾಡುತ್ತದೆ. ಶರೀರದ ಆಂತರಿಕ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಈ ಮೂಲಕ ಶರೀರದ ವಿಭಿನ್ನ ಅಂಗಗಳು ರೋಗದ ಬಗ್ಗೆ ಹೋರಾಡಲು ಸ್ವತಃ ಪ್ರತಿರೋಧ ಶಕ್ತಿಯನ್ನು ತಯಾರು ಮಾಡುತ್ತದೆ. ನ್ಯೂರೋಥೆರಪಿಯು ಕೇವಲ ರೋಗಲಕ್ಷಣಗಳ ಕಡೆಗೆ ಮಾತ್ರ ಗಮನ ಹರಿಸದೆ, ರೋಗದ ಮೂಲ ಕಾರಣವನ್ನೇ ದೂರ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ಉಪಪ್ರಾಚಾರ್ಯ ಸುರೇಶ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಕೇಶವ ಎಚ್, ರೋಟರ‍್ಯಾಕ್ಟ್‌ನ ಗಣೇಶ ಕಾಮತ್, ಎನ್‌ಎಸ್‌ಎಸ್‌ನ ಚಂದ್ರಕಲಾ, ಉಷಾ ಮತ್ತಿತರರಿದ್ದರು.

Monday, December 5, 2011

ಬ್ರಹ್ಮರ ಗುಡಿಗೆ ಶಿಲಾನ್ಯಾಸ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಬ್ರಹ್ಮರ ನೂತನ ಗುಡಿಗೆ ಭಾನುವಾರ ಶಿಲಾನ್ಯಾಸ ನೆರವೇರಿತು. ಶಿಬರೂರು ಹಯಗ್ರೀವ ತಂತ್ರಿ, ವೇದವ್ಯಾಸ ತಂತ್ರಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಬೇಬಿ ಕೋಟ್ಯಾನ್, ದಾನಿಗಳಾದ ಬಂಗೇರ ಸಹೋದರರು, ಬಜ್ಪೆ ರವಿರಾಜ ಆಚಾರ‍್ಯ, ವೇದವ್ಯಾಸ ಉಡುಪ ಮತ್ತಿತರರಿದ್ದರು.

ಕಟೀಲಿನಲ್ಲಿ ನ್ಯೂರೋಥೆರಪಿ ಚಿಕಿತ್ಸೆ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕಟೀಲ್ ಸ್ಪೋರ್ಟ್ಸ್ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಕೆರೆಕಾಡು ಆರೋಗ್ಯ ಸೇವಾ ಪ್ರತಿಷ್ಟಾನಗಳ ಸಹಯೋಗದಲ್ಲಿ ಭಾನುವಾರ ಉಚಿತ ನ್ಯೂರೋಥೆರಪಿ ಚಿಕಿತ್ಸಾ ಶಿಬಿರ ನಡೆಯಿತು.
ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಕಿರಣ್ ಕೆರೆಕಾಡು, ಗಣೇಶ್ ಕಾಮತ್, ಕೇಶವ ಕಟೀಲ್, ನವೀನ್ ಕುಮಾರ್ ಮತ್ತಿತರರಿದ್ದರು.

Thursday, December 1, 2011

ಕಟೀಲು ದೇಗುಲದಿಂದ ೪೦೦ ವಿಶೇಷ ಮಕ್ಕಳಿಗೆ ಊಟ ಪೂರೈಕೆ

ಪುರಾಣ ಪ್ರಸಿದ್ಧ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲ ಕಾರ್ಣಿಕ, ಶಾಲೆಗಳು, ಯಕ್ಷಗಾನದಷ್ಟೇ ಪ್ರಸಿದ್ಧಿ ಹೊಂದಿರುವುದು ಅನ್ನದಾನಕ್ಕೆ. ದೇಗುಲದಲ್ಲಿ ದಿನಂಪ್ರತಿ ಐದರಿಂದ ಹತ್ತು ಸಾವಿರದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿನ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಎರಡೂವರೆ ಸಾವಿರ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ದೇವಸ್ಥಾನದಿಂದಲೇ ನಡೆಯುತ್ತಿದೆ. ವಾರ್ಷಿಕ ಎರಡು ಕೋಟಿ ರುಪಾಯಿಗಳನ್ನು ಅನ್ನಪ್ರಾಸಾದಕ್ಕಾಗಿಯೇ ದೇಗುಲ ವೆಚ್ಚ ಮಾಡುತ್ತಿದೆ. ಹಾಗಾಗಿ ಇಲ್ಲಿನ ಅನ್ನದಾನ ಸೇವೆಗೆ ಹೆಚ್ಚು ಮಹತ್ವವಿದೆ. ದೇಗುಲದ ಅನ್ನದಾನ ಸೇವೆಗೆ ಕಾಣಿಕೆ ನೀಡುವವರು ಸಾವಿರಾರು ವಿದ್ಯಾರ್ಥಿಗಳಿಗೆ ಊಟ ನೀಡುತ್ತಿರುವ ಕಾರಣಕ್ಕಾಗಿ ತಾವು ನೀಡಿದ ಕಾಣಿಕೆಯಿಂದಾಗಿ ಆತ್ಮ ಸಂತೃಪ್ತಿಯನ್ನು ಪಡೆಯುತ್ತಿದ್ದರು.
ಇದೀಗ ಅನ್ನದಾನ ಸೇವೆಗೆ ಕಾಣಿಕೆ ನೀಡುವವರು ಇನ್ನಷ್ಟು ಖುಷಿ ಹಾಗೂ ಕೃತಾರ್ಥ ಭಾವವನ್ನು ಹೊಂದಬಹುದು. ಕಾರಣ ಕಟೀಲು ದೇಗುಲ ದಕ್ಷಿಣ ಕನ್ನಡ ಜಿಲ್ಲೆಯ ಏಳು ವಿಶೇಷ ಶಾಲೆಗಳ ನಾಲ್ಕು ನೂರು ವಿದ್ಯಾರ್ಥಿಗಳಿಗೆ ಊಟ ನೀಡುತ್ತಿದೆ. ಪ್ರತಿ ತಿಂಗಳು ಇದ್ದಕ್ಕಾಗಿ ಸುಮಾರು ಒಂದೂ ಕಾಲು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ.
ಕ್ರೈಸ್ತ ಸಂಸ್ಥೆಗಳು ನಡೆಸುವ ವಿಶೇಷ ಶಾಲೆಗಳ ಮಕ್ಕಳಿಗೂ ಊಟದ ಖರ್ಚು ಸಂದಾಯವಾಗುತ್ತಿರುವುದು ಕಟೀಲು ದೇಗುಲದಿಂದ ಎಂಬುದು ಮಹತ್ವದ, ಸಾಮರಸ್ಯದ ಸಂಗತಿಯಾಗಿದೆ.
ಮಂಗಳೂರಿನ ಸೈಂಟ್ ಆಗ್ನೇಸ್ ವಿಶೇಷ ಶಾಲೆ, ಚೇತನಾ ವಿಶೇಷ ಶಾಲೆ, ಸಾನಿಧ್ಯ ವಸತಿಯುತ ವಿಶೇಷ ಶಾಲೆ, ಸುರತ್ಕಲ್‌ನ ಲಯನ್ಸ್ ವಿಶೇಷ ಶಾಲೆ, ಕಿನ್ನಿಗೋಳಿ ಚರ್ಚ್ ನಡೆಸುವ ಸೈಂಟ್ ಮೇರೀಸ್ ವಿಶೇಷ ಶಾಲೆ, ಬೆಳ್ತಂಗಡಿ ವೇಣೂರಿನ ಕ್ರಿಸ್ತರಾಜ್ ನವಚೇತನ ಶಾಲೆ, ಸುಳ್ಯದ ಸಾಂದೀಪ ವಿಶೇಷ ಶಾಲೆಗಳ ಸುಮಾರು ೪೦೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಊಟಕ್ಕೆ ತಲಾ ರೂ.೧೦ರಂತೆ ಕಟೀಲು ದೇಗುಲ ವ್ಯಯಿಸುತ್ತಿದೆ. ಕಳೆದ ಮೂರೂವರೆ ವರ್ಷಗಳಿಂದ ಕಟೀಲು ದೇಗುಲ ಜಿಲ್ಲೆಯ ವಿಶೇಷ ಶಾಲೆಗಳ ಮಕ್ಕಳ ಮಧ್ಯಾಹ್ನದ ಭೋಜನದ ಖರ್ಚು ವಹಿಸುತ್ತಿದೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಟೀಲಿನ ಕ್ರೀಡಾಪಟುವಿಗೆ ಸಂಮಾನ



ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಟೀಲಿನ ಕ್ರೀಡಾಪಟುವಿಗೆ ಸಂಮಾನ
ಕಟೀಲು : ೪೦೦ ಮೀಟರ್ ಓಟ ಹಾಗೂ ೪೦೦ಮೀ ರಿಲೇಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಜಯಲಕ್ಷ್ಮೀ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಾದ ಗೀತಾ ಮತ್ತು ಸುಪ್ರೀತಾರನ್ನು ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ಕಟೀಲು ದೇಗುಲದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಸಂಮಾನಿಸಿದರು. ರೋಟರ‍್ಯಾಕ್ಟ್‌ನ ಗಣೇಶ್, ಕಟೀಲ್ ಸ್ಪೋರ್ಟ್ಸ್ ಕ್ಲಬ್‌ನ ವೆಂಕಟರಮಣ ಮಯ್ಯ, ಮುಖ್ಯ ಶಿಕ್ಷಕಿ ಮಾಲತಿ, ಶಿಕ್ಷಕ ವಾಸುದೇವ ಶೆಣೈ, ಕ್ರೀಡಾ ಶಿಕ್ಷಕ ಕೃಷ್ಣ ಮತ್ತಿತರರಿದ್ದರು.

Sunday, November 20, 2011

ಕಟೀಲಿನಲ್ಲಿ ನೇತ್ರ ಚಿಕಿತ್ಸೆ

ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇಗುಲ, ಕಟೀಲ್ ಸ್ಪೋರ್ಟ್ಸ್ ಗೇಮ್ಸ್ ಕ್ಲಬ್, ಕಿನ್ನಿಗೋಳಿ ರೋಟರಿ, ರೋಟರ‍್ಯಾಕ್ಟ್ ಸಹಯೋಗದಲ್ಲಿ ಕಾರ್ಕಳ ರೋಟರಿ ಕಣ್ಣಿನ ಆಸ್ಪತ್ರೆಯ ವೈದ್ಯರಿಂದ ಕಟೀಲಿನಲ್ಲಿ ನಡೆದ ಉಚಿತ ಕಣ್ಣಿನ ತಪಾಸನೆ, ಶಸ್ತ್ರಕ್ರಿಯೆ, ಕನ್ನಡಕ ವಿತರಣೆ ಶಿಬಿರದಲ್ಲಿ ೧೬೫ಮಂದಿ ಪ್ರಯೋಜನ ಪಡೆದರು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಡಾ.ಲಲಿತ್, ರೋಟರಿಯ ಜಯರಾಮ ಪೂಂಜ, ಹೆರಿಕ್ ಪಾಯಸ್, ಯಶವಂತ, ಕೆ.ಬಿ.ಸುರೇಶ್, ರೋಟರ‍್ಯಾಕ್ಟ್‌ನ ಗಣೇಶ್, ಗೇಮ್ಸ್ ಕ್ಲಬ್‌ನ ಕೇಶವ್, ವೆಂಕಟರಮಣ ಮಯ್ಯ, ದಾಮೋದರ್ ಮತ್ತಿತರರಿದ್ದರು.
ಆರು ಮಂದಿಗೆ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ೭೦ಮಂದಿಗೆ ಉಚಿತ ಕನ್ನಡಕಗಳನ್ನು ತಾ.೨೫ರಂದು ವಿತರಿಸಲಾಗುವುದೆಂದು ಪ್ರಕಟನೆ ತಿಳಿಸಿದೆ.

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ


ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಹೋಬಳಿ ಮಟ್ಟ, ತಾಲೂಕು ಮಟ್ಟ ಹಾಗೂ ಜಿಲ್ಲಾಮಟ್ಟದ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಬ್ರಹ್ಮಾವರದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಅನುದಾನಿತ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಗಳಾದ ಜಯಲಕ್ಷ್ಮೀ, ಗೀತಾ, ಸುಪ್ರೀತಾ ಆಯ್ಕೆಯಾಗಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಜಯಲಕ್ಷ್ಮೀ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ 200 ಮೀ, 400 ಮೀ, 600 ಮೀ ಹಾಗೂ 4×100 ಮೀಗಳಲ್ಲಿ ಚಿನ್ನ ಮತ್ತು ವೈಯಕಿಕ ಚಾಂಪಿಯನ್ ಶಿಪ್‌ನೊಂದಿಗೆ ಬ್ರಹ್ಮಾವರದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

Saturday, November 19, 2011

ಕಟೀಲು ೫ ಮೇಳಗಳ ತಿರುಗಾಟ

ಕಟೀಲು : ಯಕ್ಷಗಾನ ನಂಬಿ ಬದುಕು ಕಷ್ಟ ಎಂಬ ತರ್ಕ ಜಾರಿಯಲ್ಲಿರುವಂತೆಯೇ ಕಲಾವಿದರಿಗೆ ಮತ್ತಷ್ಟು ಭದ್ರತೆ ಒದಗಿಸಿ, ಯಕ್ಷಗಾನವನ್ನು ವೃತ್ತಿಯನ್ನಾಗಿ ಧೈರ‍್ಯವಾಗಿ ಸ್ವೀಕರಿಸಬಹುದು ಎಂಬ ಭರವಸೆ ಹುಟ್ಟಿಸುವ ಕೆಲಸಗಳು ಕಟೀಲು ಮೇಳಗಳಲ್ಲಿ ವರುಷದಿಂದ ವರುಷಕ್ಕೆ ಹೆಚ್ಚುತ್ತಿದ್ದು, ಈ ಬಾರಿ ಎಲ್ಲ ಕಲಾವಿದರ ಕುಟುಂಬಗಳಿಗೆ ಆರೋಗ್ಯ ವಿಮೆ ಮಾಡುವ ಚಿಂತನೆ ಮಾಡಲಾಗಿದೆ.
ಈಗಾಗಲೇ ಐದೂ ಮೇಳಗಳ ಇನ್ನೂರೈವತ್ತು ಕಲಾವಿದರಿಗೆ ಸಣ್ಣಪುಟ್ಟ ಔಷಧಿ ಖರ್ಚಿಗಾಗಿ ಕ್ಷೇಮನಿಧಿಯಿಂದ ಆರ್ಥಿಕ ಸಹಾಯ ನೀಡಲಾಗುತ್ತಿತ್ತು. ಯಕ್ಷಗಾನ ಬಯಲಾಟ ಆಡಿಸುವವರ ವೀಳ್ಯದಲ್ಲಿ ೩೦೦ರೂ.ಗಳನ್ನು ಕಲಾವಿದರ ಕ್ಷೇಮನಿಧಿಗೆಂದು ತೆಗೆದಿರಿಸಲಾಗುತ್ತಿತ್ತು. ಕಳೆದ ವರುಷ ಸುಮಾರು ಒಂದು ಲಕ್ಷ ರೂ.ಗಳನ್ನು ಕಲಾವಿದರ ಸಣ್ಣಪುಟ್ಟ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿದೆ. ಇದಲ್ಲದೆ ಕಟೀಲು ಮೇಳಗಳ ಭಕ್ತರು ಸ್ಥಾಪಿಸಿರುವ ಯಕ್ಷಧರ್ಮಬೋಧಿನೀ ಟ್ರಸ್ಟ್ ಬಾಡಿಗೆಗೆ ನೀಡುವ ಬಸ್ಸು ಮತ್ತು ರಂಗಸ್ಥಳಗಳಿಂದ ಬಂದ ಆದಾಯದ ೧೬ಲಕ್ಷ ರೂ.ಗಳನ್ನು ಎಲ್ಲ ಕಲಾವಿದರ ಆರು ತಿಂಗಳ ರಜಾಕಾಲದ ಗೌರವಧನ ನೀಡಲು ಬಳಸಲಾಗಿದೆ. ಹೀಗೆ ಕಲಾವಿದರಿಗೆ ಒಂದಿಷ್ಟು ಧೈರ‍್ಯ ತುಂಬುವ ಕೆಲಸವನ್ನು ಈ ಬಾರಿ ಇನ್ನಷ್ಟು ಹೆಚ್ಚಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಕಟೀಲಿನ ಐದು ಮೇಳಗಳಲ್ಲಿ ೧೨೫ಕಲಾವಿದರು, ೧೨೫ ಇತರ ಕರ್ಮಚಾರಿಗಳಿದ್ದಾರೆ. ಅಂದರೆ ಒಟ್ಟು ೨೫೦ಮಂದಿ. ಪ್ರತಿಯೊಬ್ಬನ ಕುಟುಂಬದ ಐದು ಮಂದಿ ಸದಸ್ಯರಿಗೆ ಪ್ರಯೋಜನವಾಗುವಂತೆ ಆರೋಗ್ಯ ವಿಮೆ ಮಾಡುವ ಚಿಂತನೆ ಮಾಡಲಾಗಿದೆ.
ಉಡುಪಿಯ ಕಲಾರಂಗದವರು ವಿವಿಧ ಮೇಳಗಳ ೨೦೦ಮಂದಿಗೆ ಈಗಾಗಲೇ ಆರೋಗ್ಯ ವಿಮೆ ಮಾಡಿದ್ದು, ಕಳೆದ ವರ್ಷ ಒಂದು ಲಕ್ಷ ರೂ.ಗಳಷ್ಟು ವಿಮೆಯನ್ನು ವಿವಿಧ ಕಲಾವಿದರು ಪಡೆದಿದ್ದಾರೆ. ಇದೇ ಮಾದರಿಯಲ್ಲಿ ಕಟೀಲು ಮೇಳಗಳ ಎಲ್ಲ ಕಲಾವಿದರಿಗೆ ಆರೋಗ್ಯವಿಮೆ ಮಾಡುವ ಬಗ್ಗೆ ಯೋಚನೆ ಮಾಡಲಾಗಿದೆ. ಇದರಿಂದ ಕಲಾವಿದ ಅಥವಾ ಕಲಾವಿದನ ಮನೆಯ ಐದು ಮಂದಿಯಲ್ಲಿ ಒಬ್ಬರು ಸುಮಾರು ರೂ.ಮೂವತ್ತು ಸಾವಿರದಷ್ಟು ಆಸ್ಪತ್ರೆ ಖರ್ಚು ಪಡೆಯುವ ಅವಕಾಶವಿದೆ. ಯಕ್ಷಗಾನಾಭಿಮಾನಿಗಳು ಅಥವಾ ಕಟೀಲು ಮೇಳಗಳ ಆಟವಾಡಿಸುವವರು ಒಂದಿಷ್ಟು ಕಲಾವಿದರ ಆರೋಗ್ಯವಿಮೆಯ ಪ್ರಾಯೋಜಕತ್ವ ಪಡೆದು ತಮ್ಮ ಕಲಾಪ್ರೀತಿ, ಭಕ್ತಿಗಳನ್ನು ವ್ಯಕ್ತಪಡಿಸಲು ಅವಕಾಶವಿದೆ.

ದೇವೀ ಮಾಹಾತ್ಮ್ಯೆಯಲ್ಲಿ ಒಂದಿಷ್ಟು ಬದಲಾವಣೆ
ಆಗಸ್ಟ್ ತಿಂಗಳಲ್ಲಿ ನಡೆದ ದೇವೀಮಾಹಾತ್ಮ್ಯೆ ಕಾರ‍್ಯಾಗಾರದಲ್ಲಿ ಚರ್ಚಿತವಾದಂತೆ ಕೆಲ ಬದಲಾವಣೆಗಳು ಕಟೀಲು ಮೇಳಗಳು ಆಡುವ ದೇವೀ ಮಾಹಾತ್ಮ್ಯೆ ಪ್ರಸಂಗದಲ್ಲಿ ಕಂಡು ಬರಲಿದೆ.
ತ್ರಿಮೂರ್ತಿಗಳ ಬಣ್ಣಗಳಲ್ಲಿ ಬದಲಾವಣೆಯಾಗಲಿದೆ. ಉದಾಹರಣೆಗೆ ವಿಷ್ಣು ನೀಲಿ ಬದಲಿಗೆ ಹಸುರು ಬಣ್ಣಧಾರಿಯಾಗಲಿದ್ದಾನೆ.
ವಿದ್ಯುನ್ಮತಿ ಪ್ರಸಂಗದಲ್ಲಿ ಇದುವರೆಗೆ ಬರುತಿದ್ದ ಬ್ರಾಹ್ಮಣ ಪುರೋಹಿತ ರಾಕ್ಷಸ ಪುರೋಹಿತ(ಮೇದೋಹುತ)ನ ರೂಪದಲ್ಲಿ ಬರಲಿದ್ದಾನೆ. ಮೂಲ ಪ್ರಸಂಗದಲ್ಲಿ ವಿದ್ಯುನ್ಮತಿ, ಮಾಲಿನಿ ವಿವಾಹ ಪ್ರಸಂಗವಿಲ್ಲದಿದ್ದರೂ ಹಾಸ್ಯ, ಮನೋರಂಜನೆಗಾಗಿ ಇದನ್ನು ಉಳಿಸಿಕೊಳ್ಳಲಾಗಿದೆ.
ಪಿಂಗಲಾಕ್ಷನ ಕಣ್ಣಿಗೆ ಕೆಂಪು ಬಣ್ಣ ಬರಲಿದೆ. ವಿದುನ್ಮತಿ ಮರಣಾನಂತರ ಬಾ ಮಗನೇ ಮಹಿಷಾ ಎಂದು ಮಾಲಿನಿ ಕರೆದು, ಮಹಿಷನ ರಂಗ ಪ್ರವೇಶವಾಗುವಾಗ ಮಾಲಿನಿ ಪಾತ್ರಧಾರಿ ವಿಧವೆಯಂತೆ ಬಿಳಿ ಸೀರೆ ಉಟ್ಟು ಬರುವುದನ್ನು ನಿಲ್ಲಿಸಿ, ಕೇವಲ ಕುಂಕುಮ ಅಳಿಸುವುದುದೆಂದು ನಿರ್ಣಯಿಸಲಾಗಿದೆ. ಸುಗ್ರೀವನ ಪಾತ್ರಧಾರಿ ನಾಟಕೀಯ ಕಿರೀಟ ಬಿಟ್ಟು ಧರ್ಮರಾಯನ ಪಾತ್ರದಂತೆ ಕಿರೀಟ ಧರಿಸುವುದು. ಮಧುಕೈಟಭರು ಕಿರೀಟ ಧರಿಸುವುದು, ರಕ್ತೇಶ್ವರೀ ಭೂತ ಕೋಲದಂತೆ ಅಣಿ ಧರಿಸಿ ಬರುವುದರ ಬದಲಾಗಿ ಕುತ್ತರಿ ಹಾಕಿ, ವೀರಗಾಸೆಯನ್ನು ನಾಲಗೆಯಂತೆ ಮಾಡಿ ಯಕ್ಷಗಾನೀಯ ವೇಷಭೂಷಣಗಳಿಂದ ರಂಗಕ್ಕೆ ಬರುವುದೆಂದು ತೀರ್ಮಾನವಾಗಿದೆ. ಆದರೆ ಅನಗತ್ಯವಾದರೂ ರಂಜನೆಯ ದೃಷ್ಟಿಯಿಂದ ರಕ್ತೇಶ್ವರೀಯೊಂದಿಗೆ ಬರುವ ದೈವದ ಪಾತ್ರಧಾರಿಯನ್ನು ಈ ವರುಷದ ಮಟ್ಟಿಗೆ ಮುಂದುವರಿಸಲಾಗಿದೆ.
ದೇವೀ ಪಾತ್ರದ ವೇಷಭೂಷಣಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನಂತೆಯೇ ದೇವಿಯ ವೇಷ ಇತ್ಯಾದಿಗಳು ಇರುತ್ತವೆ. ಆದರೆ ಪಾತ್ರಗಳ ಮಾತುಗಾರಿಕೆಯ ಮೌಲ್ಯವನ್ನು ಹೆಚ್ಚಿಸಲಾಗಿದೆ. ಎಲ್ಲ ಪಾತ್ರಗಳ ಮಾತುಗಳಿಗೆ ಇನ್ನಷ್ಟು ಜೀವ, ಸತ್ವ, ಗಟ್ಟಿತನಗಳನ್ನು ತುಂಬಲಾಗಿದೆ. ಬ್ರಹ್ಮ ವಿಷ್ಣು ಮಹೇಶ್ವರರ ವಾದಗಳು, ಸುಗ್ರೀವ, ರಕ್ತಬೀಜ ಪಾತ್ರಗಳ ಮಾತು ಹಿಂದಿಗಿಂತಲೂ ಚೆಂದವಾಗಿ ಮೂಡಿಬರಲಿದೆ. ದೇವೀಸ್ತುತಿ ಶ್ಲೋಕಗಳಲ್ಲಿ ಅಗತ್ಯ ಬದಲಾವಣೆ ಇದೆ. ಒಟ್ಟಾರೆ ದೇವೀ ಮಾಹಾತ್ಮ್ಯೆ ಪ್ರಸಂಗವನ್ನು ಸುಂದರವಾಗಿಸುವ ಪ್ರಯತ್ನವನ್ನು ಈ ಬಾರಿಯ ಪ್ರದರ್ಶನಗಳಲ್ಲಿ ಕಾಣಬಹುದಾಗಿದೆ.
ಕಟೀಲು ಮೇಳಗಳಾಡುವ ದೇವೀ ಮಾಹಾತ್ಮ್ಯೆ ಪ್ರಸಂಗಕ್ಕೆ ಇಷ್ಟೆಲ್ಲ ಮಹತ್ವ ಯಾಕೆಂದರೆ ಐದು ಮೇಳಗಳು ಒಂದು ತಿರುಗಾಟದಲ್ಲಿ ಆಡುವ ಒಂದು ಸಾವಿರ ಪ್ರದರ್ಶನಗಳಲ್ಲಿ ಐನೂರು ಪ್ರದರ್ಶನ ಕಾಣುವ ಪ್ರಸಂಗ ದೇವೀ ಮಾಹಾತ್ಮ್ಯೆಯೇ ಆಗಿರುವುದು. ಉಳಿದಂತೆ ಕಟೀಲು ಕ್ಷೇತ್ರ ಮಾಹಾತ್ಮ್ಯೆ, ಶ್ರೀದೇವಿ ಲಲಿತೋಪಾಖ್ಯಾನ ಅಲ್ಲದೆ ಇತರ ಪೌರಾಣಿಕ ಪ್ರಸಂಗಗಳೂ ಪ್ರದರ್ಶನ ಕಾಣುತ್ತವೆ.
ಯಕ್ಷಗಾನ ಮೇಳಗಳಿಗೆ ಪ್ರೇಕ್ಷಕರ, ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕದ ಮಧ್ಯೆಯೇ ಕಟೀಲಿನ ಮೇಳಗಳಿಗೆ ಹತ್ತಕ್ಕಿಂತಲೂ ಹೆಚ್ಚು ಕಲಾವಿದರು ಈ ವರುಷ ಸೇರಿರುವುದು ಮತ್ತು ಮುಂದಿನ ಇಪ್ಪತ್ತೈದು ವರುಷಗಳಿಗೆ ಬಾಕಿ ಇರುವಷ್ಟು ಅಂದರೆ ಸುಮಾರು ಹನ್ನೆರಡೂವರೆ ಸಾವಿರಗಳಷ್ಟು ಹರಕೆಯಾಟಗಳು ಮುಂಗಡ ಬುಕ್ಕಿಂಗ್ ಆಗಿರುವುದು. ಅದರಲ್ಲೂ ಹತ್ತು ಸಮಸ್ತರು ಆಡಿಸುವ ಆಟಗಳನ್ನು ಲೆಕ್ಕ ಹಾಕಿ ಸುಮಾರು ೪೫೦ರಷ್ಟು ಖಾಯಂ ಆಟಗಳು ಕಟೀಲು ಮೇಳಗಳಿಗಿರುವುದು ದಾಖಲೆಯ ಮಹತ್ವದ ಸಂಗತಿಯಾಗಿದೆ. ಇಂದು(ತಾ.೨೦) ಕಟೀಲಿನ ಐದು ಮೇಳಗಳು ತಿರುಗಾಟ ಆರಂಭಿಸಲಿದ್ದು, ಮೇ ತಿಂಗಳ ಪತ್ತಜಾನೆಯಂದು ಮೇಳಗಳು ಒಳಗಾಗಲಿವೆ.

Thursday, November 17, 2011

ಕಟೀಲಿನಲ್ಲಿ ದೀಪೋತ್ಸವ

ಕಟೀಲು ದೇಗುಲದಲ್ಲಿ ಬುಧವಾರ ರಾತ್ರಿ ದೀಪೋತ್ಸವ ನಡೆಯಿತು.
ತರಕಾರಿ, ಹಣ್ಣುಗಳಿಂದ ರಚಿತವಾದ ಮಂಟಪದಲ್ಲಿ ಶ್ರೀ ಭ್ರಾಮರೀ ದೇವರನ್ನಿಟ್ಟು ಪೂಜಿಸಲಾಯಿತು. ರಥಬೀದಿಯಲ್ಲಿ ಸಾವಿರಾರು ಹಣತೆಗಳನ್ನು ಬೆಳಗಿಸಲಾಯಿತು. ಬಾನ್ಸುರಿ ತಂಡದಿಂದ ಭಕ್ತಿ ಸಂಗೀತ ರಸಮಂಜರಿ, ಗೂಡು ದೀಪ ಸ್ಪರ್ಧೆ ಆಯೋಜಿಸಲಾಗಿತ್ತು.

ನೂತನ ಧ್ವಜಸ್ತಂಭ



ಕಟೀಲು ದೇಗುಲಕ್ಕೆ ಸುಮಾರು ನಲವತ್ತು ಅಡಿಯ ನೂತನ ಧ್ವಜಸ್ತಂಭಕ್ಕಾಗಿ ಬುಧವಾರ ಪ್ರಭಾಕರ ರಾವ್ ದಾನರೂಪದಲ್ಲಿ ನೀಡಿದ ತೇಗದ ಮರವನ್ನು ಕಡಿಯಲಾಯಿತು. ಬಳಿಕ ದೇಗುಲದ ಬಳಿಯಲ್ಲಿ ಎಳ್ಳೆಣ್ಣೆಯಲ್ಲಿ ಮುಳುಗಿಸಿಡಲಾಯಿತು. ಎರಡು ವರ್ಷಗಳ ಬಳಿಕ ಧ್ವಜಸ್ತಂಭಕ್ಕೆ ನಾಲ್ಕು ಕೆಜಿ ಬಂಗಾರ ಅಳವಡಿಸಲಾಗುವುದು. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಧ್ವಜಸ್ತಂಭ ಸ್ಥಾಪಿಸಲಾಗುವುದು ಎಂದು ದೇಗುಲದ ಮೂಲಗಳು ತಿಳಿಸಿವೆ.

ಕಟೀಲು ಬ್ರಹ್ಮ ಗುಡಿಗೆ ಸಂಕೋಚ, ನೂತನ ಧ್ವಜಸ್ಥಂಭ


ಕಟೀಲು : ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದ ಬ್ರಹ್ಮರಗುಡಿಗೆ ಬುಧವಾರ ಸಂಕೋಚ ನಡೆಯಿತು.
ಡಿಸೆಂಬರ್ ೪ರಂದು ಶಿಲಾನ್ಯಾಸಗೊಂಡು, ಮಾರ್ಚ್ ೧ರಂದು ಬ್ರಹ್ಮಕಲಶ ಕಾಣಲಿರುವ ನೂತನ ಬ್ರಹ್ಮರ ಗುಡಿಯನ್ನು ಸುಮಾರು ರೂ.೯.೫ಲಕ್ಷದಲ್ಲಿ ಪುನರ್‌ನಿರ್ಮಿಸಲಾಗುವುದು. ಈ ಹಿನ್ನಲೆಯಲ್ಲಿ ಬುಧವಾರ ಹಳೆ ಗುಡಿಯನ್ನು ತೆಗೆಯುವ ಕಾರ‍್ಯ ನಡೆಸಲಾಯಿತು. ಬ್ರಹ್ಮದೇವರನ್ನು ಬಾಲಾಲಯದಲ್ಲಿಡಲಾಯಿತು.
ಯಾವುದಾದರೂ ವಸ್ತು ಕಳೆದು ಹೋದರೆ ಇಲ್ಲಿನ ದೇವರಲ್ಲಿ ಪ್ರಾರ್ಥಿಸಿದರೆ ಅದು ಮರಳಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಸಂಕೋಚದ ಸಂದರ್ಭ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಸಹೋದರರಾದ ಲಕ್ಷ್ಮೀನಾರಾಯಣ, ಅನಂತಪದ್ಮನಾಭ, ಹರಿನಾರಾಯಣ, ಪ್ರಸಾದ, ಕುಮಾರ, ಹಯಗ್ರೀವ ತಂತ್ರಿ, ಸಾಂಸದ ನಳಿನ್ ಕುಮಾರ್, ಐಕಳ ಹರೀಶ್ ಶೆಟ್ಟಿ, ಜಿ.ಪಂ.ಸದಸ್ಯ ಈಶ್ವರ್ ಮುಂತಾದವರಿದ್ದರು.




Wednesday, November 9, 2011

ಕಟೀಲು ಮೇಳಗಳ 20 ಕಲಾವಿದರಿಗೆ ಆರೋಗ್ಯ ಕಾರ್ಡ್


ಕಟೀಲು ದೇವಳದ ಐದು ಮೇಳಗಳ ಯಕ್ಷಗಾನ ಕಲಾವಿದರಲ್ಲಿ ತಲಾ 5 ಮಂದಿಯಂತೆ 20 ಕಲಾವಿದರ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ಮಾಡಲು ಹತ್ತುಸಾವಿರ ರೂಪಾಯಿಗಳ ಕೊಡುಗೆಯನ್ನು ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನಿಂದ ನೀಡಲಾಯಿತು. ಕಟೀಲು ದೇವಳದ ಪ್ರಬಂಧಕ ವಿಶ್ವೇಶ ರಾವ್, ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ರೋಟರಾಕ್ಟ್ ವಲಯ ಪ್ರತಿನಿಧಿ ಹರೀಶ್ ಅಡ್ಯಾರ್, ದಿನೇಶ್ ಕೊಡಿಯಾಲ್ ಬೈಲ್, ಕಿನ್ನಿಗೋಳಿ ಕ್ಲಬ್‌ನ ಅಧ್ಯಕ್ಷ ಗಣೇಶ್ ಕಾಮತ್, ಜಾಕ್ಸನ್, ಕ್ಲಬ್ ಸಭಾಪತಿ ಕೆ.ಬಿ.ಸುರೇಶ್, ಸುಮಿತ್ ಮತ್ತಿತರರಿದ್ದರು.

Friday, October 28, 2011

ಎಂಟು ಕೃತಿಗಳ ಬಿಡುಗಡೆ



ಸಾಹಿತ್ಯದಿಂದ ಉತ್ತಮ ವಾತಾವರಣ- ಕೋಟ ಶ್ರೀನಿವಾಸ ಪೂಜಾರಿ

ಕಿನ್ನಿಗೋಳಿ : ಸಾಹಿತ್ಯದಿಂದ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಓದುವಿಕೆ ಎಲ್ಲರ ಹವ್ಯಾಸವಾಗಬೇಕು. ಸಾಹಿತ್ಯ ರಚಿಸಿದ ಎಷ್ಟೋ ಬರಹಗಾರರು ಆರ್ಥೀಕವಾಗಿ ಶ್ರೀಮಂತರಾಗಿರುವುದಿಲ್ಲ. ಅಥವಾ ಅವರನ್ನು ಪ್ರೋತ್ಸಾಹಿಸುವವರಿರುವುದಿಲ್ಲ. ಈ ಹಿನ್ನಲೆಯಲ್ಲಿ ಸಾಹಿತಿಗಳನ್ನು ಬೆಂಬಲಿಸುವ ಕಾರ‍್ಯ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಗುರುವಾರ ಸಂಜೆ ಕಿನಿಗೋಳಿಯ ನೇಕಾರ ಸೌಧದಲ್ಲಿ ನಡೆದ ಅನಂತ ಪ್ರಕಾಶ ಸಂಸ್ಥೆಯ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ ಎಂಟು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಡಾ.ವಿಶ್ವನಾಥ ಕಾರ್ನಾಡರ ಸಾಹಿತ್ಯ ಲೇಖನಗಳ ಸ್ಪಂದನ, ಕೆ.ಜಿ.ಭದ್ರಣ್ಣವರ ಹನಿಗವನ ಭಂಡಾರ, ಸೂರ‍್ಯನಾರಾಯಣ ರಾವ್‌ರ ಕೋಟಿ ಚೆನ್ನಯ ನಾಟಕ, ಮಸುಮರ ನಾಟಕ ಹಬಾಶಿಕಾ, ಕವನ ಸಂಕಲನ ಮಕರಂದ, ವಿಶ್ವಂಭರ ಉಪಾಧ್ಯಾಯರ ನಾಗನೂಪುರ, ಅರ್ಪಿತಾರ ಮಳೆಬಿಲ್ಲು, ಕೆ.ಜಿ.ಸುಪ್ರದಾ ರಾವ್‌ರ ಕವನ ಸಂಕಲನ ನಾಡು ಹಾಡು ಬಿಡುಗೊಳಿಸಲಾಯಿತು.

ಉಮೇಶ್ ರಾವ್ ಎಕ್ಕಾರು, ಉಪೇಂದ್ರ ಸೋಮಯಾಜಿ ಮತ್ತಿತರರಿದ್ದರು. ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಸ್ವಾಗತಿಸಿದರು. ಗಾಯತ್ರೀ ಉಡುಪ ಕಾರ‍್ಯಕ್ರಮ ನಿರೂಪಿಸಿದರು. ಬಳಿಕ ನಿಡ್ಲೆ ಮಹಾಗಣಪತಿ ಮಂಡಳಿಯವರಿಂದ ಹರಿದರ್ಶನ ಯಕ್ಷಗಾನ ಜರಗಿತು.

ಬಂಗಾರದ ಸರ ಕಾಣಿಕೆ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಮಂಗಳೂರಿನ ಉದ್ಯಮಿ ಮನಮೋಹನ ಮಲ್ಲಿ ದಂಪತಿಗಳು ೧೯೮ಗ್ರಾಂ. ತೂಕದ ನವದುರ್ಗೆಯರ ಪದಕವುಳ್ಳ ಬಂಗಾರದ ಸರವನ್ನು ಕಾಣಿಕೆಯಾಗಿ ನೀಡಿದರು.
ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದರು.

Monday, October 24, 2011

ಯಕ್ಷಗಾನ, ಜಾನಪದ ವಿದ್ವಾಂಸ ಪು.ಶ್ರೀನಿವಾಸ ಭಟ್ಟ ಇನ್ನಿಲ್ಲ


ಕಟೀಲು : ನಿವೃತ್ತ ಶಿಕ್ಷಕ, ಯಕ್ಷಗಾನ, ಜಾನಪದ ವಿದ್ವಾಂಸ ಪು.ಶ್ರೀನಿವಾಸ ಭಟ್(೭೨ವ.) ಸೋಮವಾರ ಕಟೀಲಿನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಸೋಮವಾರ ಬೆಳಿಗ್ಗೆ ಬಜಪೆಯ ಬಂಟ್ಸ್ ಪಾಪ್ಯುಲರ್ ಶಾಲೆಯಲ್ಲಿ ದೀಪಾವಳಿ ಆಚರಣೆ ಕಾರ‍್ಯಕ್ರಮದಲ್ಲಿ ಉಪನ್ಯಾಸ ಮುಗಿಸಿ, ರಿಕ್ಷಾದಲ್ಲಿ ಮನೆಗೆ ಬಂದು ಕೂತ ಶ್ರೀನಿವಾಸ ಭಟ್ಟರು ಹೃದಯಾಘಾತವಾಗಿ ಕುಸಿದು ಮೃತಪಟ್ಟರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಕಟೀಲು ಪ್ರಾಥಮಿಕ ಶಾಲೆಯಲ್ಲಿ ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶ್ರೀನಿವಾಸ ಭಟ್ಟರು, ಯಕ್ಷಗಾನ ಕಲಾವಿದರು, ಶ್ರೀ ದೇವೀ ಶತಕ, ದಾವಿದ ವಿಜಯ ಯಕ್ಷಗಾನ ಪ್ರಸಂಗ, ಕೋಲ ಬಲಿ, ಜನಪದ ಶತಪಥ, ಶ್ರೀ ಗಣಪತಿ ಶತ ಕಥಾವಳಿ, ತುಳು ದೇವೀ ಮಾಹಾತ್ಮ್ಯೆ, ಶ್ರೀ ಕೃಷ್ಣ ದೇವರಾಯ ಸೇರಿದಂತೆ ಹನ್ನೊಂದು ಕೃತಿಗಳನ್ನು ರಚಿಸಿದ್ದರು. ನಾಡಿನ ವಿವಿಧ ಪತ್ರಿಕೆಗಳಿಗೆ ೫೫೦ಕ್ಕೂ ಹೆಚ್ಚು ಮೌಲಿಕ ಲೇಖನಗಳನ್ನು ಬರೆದಿದ್ದರು. ಕುಬೆವೂರು ಪುಟ್ಟಣ್ಣ ಶೆಟ್ಟಿ, ಕೊ.ಅ.ಉಡುಪ ಪ್ರಶಸ್ತಿ, ಸುರಗರಿ ಗುರುರಾಜ ಪ್ರಶಸ್ತಿ, ತಾಲೂಕು ಸಮ್ಮೇಳನ, ಮುಂಬೈ ಯಕ್ಷಗಾನ ಸಮ್ಮೇಳನ, ತುಳು ಅಕಾಡಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ೪೦ಕಡೆಗಳಲ್ಲಿ ಸಂಮಾನ ಗೌರವ ಪಡೆದಿದ್ದರು. ವಿವಿಧೆಡೆ ಯಕ್ಷಗಾನ ತಾಳಮದ್ದಲೆಗಳ ತೀರ್ಪುಗಾರರಾಗಿ, ಅಷ್ಟಾವಧಾನ ಪೃಚ್ಚಕರಾಗಿ, ನೂರಾರು ಕಡೆ ಉಪನ್ಯಾಸಗಳನ್ನು ನೀಡಿದ್ದರು.
ಕಟೀಲಿನಲ್ಲಿ ಯಕ್ಷಗಾನೀಯ ವಾತಾವರಣವನ್ನುಂಟು ಮಾಡಿದವರಲ್ಲಿ ಭಟ್ಟರೂ ಒಬ್ಬರು. ಸಾವಿರಾರು ಅಮೂಲ್ಯ ಕೃತಿಗಳ ಸಂಗ್ರಾಹರಾಗಿ, ಪರಿಸರದ ಶಿಲಾಶಾಸನಗಳ ಸಂಶೋಧಕರಾಗಿ ಅಧ್ಯಯನಕಾರರಿಗೆ ಆಕರ ವ್ಯಕ್ತಿಯಾಗಿದ್ದರು.

Tuesday, October 11, 2011

ಕಟೀಲಿನಲ್ಲಿ ಪ್ರಾಥಮಿಕ ಶಿಕ್ಷಾವರ್ಗ: ಸಮಾರೋಪ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಥಮಿಕ ಶಿಕ್ಷಾವರ್ಗ ಕಟೀಲು ದೇಗುಲದ ಪದವೀಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿತು.
ಉದ್ಘಾಟನೆ ನೆರವೇರಿಸಿದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಧರ್ಮ ಮತ್ತು ರಾಷ್ಟ್ರ ಜಾಗೃತಿಯಲ್ಲಿ ಸಂಘದ ಪಾತ್ರ ಮಹತ್ತರವಾದುದು. ತಾನೂ ಕೂಡ ಸ್ವಯಂಸೇವಕನಾಗಿದ್ದೆ ಎನ್ನಲು ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಮಧುಕರ್ ಪ್ರಸ್ತಾವನೆಗೈದರು.
ವರ್ಗ ಶಿಬಿರಾಧಿಕಾರಿ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ತಾ.೧೬ರಂದು ಸಮಾರೋಪ ನಡೆಯಲಿದ್ದು, ಸುರೇಶ್ ಪರ್ಕಳ, ಗಿರೀಶ್ ಶೆಟ್ಟಿ
ಭಾಗವಹಿಸಲಿದ್ದಾರೆ.

ಸಮಾರೋಪ
ಕಟೀಲು : ಹಿಂದೂ ಎಂದರೆ ಜಾತಿಯಲ್ಲ, ಕೋಮುವಲ್ಲ. ಹಿಂದೂ ಎಂದರೆ ಜೀವನ
ಮೌಲ್ಯ, ಜೀವನ ದರ್ಶನ. ಹಿಂದುತ್ವದಲ್ಲಿ ರಾಷ್ಟ್ರೀಯತೆಯ ಸಿದ್ದಾಂತವಿದೆ ಎಂದು ಆರ್‌ಎಸ್‌ಎಸ್‌ನ ಪುತ್ತೂರು ಜಿಲ್ಲೆ ಸಹ

ಬೌದ್ಧಿಕ್ ಪ್ರಮುಖ್ ಸುರೇಶ ಪರ್ಕಳ ಹೇಳಿದರು.
ಅವರು ಭಾನುವಾರ ಕಟೀಲು ದೇಗುಲದ ಪದವೀಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಾಧ್ಯಮಗಳು ದೋಷಪೂರಿತವಾಗಿವೆ. ಪತ್ರಿಕೆಗಳು ವಿಶ್ವಾಸ ಕಳಕೊಂಡಿವೆ. ರೇಡಿಯೋ ಮಿರ್ಚಿ ಬದಲಾಗುತ್ತ ಹಾಟ್ ಮಗಾ ಎಂದು ಹಾದಿ ತಪ್ಪಿಸುವ ಸ್ಥಿತಿ ಬಂದಿದೆ. ದೇಶದ ಅಸಲೀ ವಿಚಾರ ಬಿಟ್ಟು ಸುದ್ದಿಗಳು ಬರುತ್ತಿವೆ. ಈ ಬಗ್ಗೆ ಎಚ್ಚರಿಕೆ, ಜಾಗೃತಿ ನಮ್ಮಲ್ಲಾಗಬೇಕು. ಇಂತಹ ಶಿಬಿರಗಳಿಂದ ಸಂಸ್ಕಾರ, ರಾಷ್ಟ್ರ ಜಾಗೃತಿಯ ನಿರ್ಮಾಣ ಕಾರ‍್ಯ ಸಾಧ್ಯವಾಗುತ್ತಿದೆ ಎಂದು ಸುರೇಶ್ ಪರ್ಕಳ ಹೇಳಿದರು.
ಕಟೀಲಿನ ಉದ್ಯಮಿ ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು. ವರ್ಗ ಶಿಬಿರಾಧಿಕಾರಿ ಸುರೇಶ್ ಶೆಟ್ಟಿ ವರದಿ ವಾಚಿಸಿದರು. ಗಣೇಶ ಕಿನ್ನಿಗೋಳಿ ಸ್ವಾಗತಿಸಿದರು. ಶ್ರೀನಿವಾಸ ಬಪ್ಪನಾಡು ವಂದಿಸಿದರು.
೧೫೫ ಶಿಬಿರಾರ್ಥಿಗಳಿಂದ ಕಟೀಲು ರಥಬೀದಿಯಲ್ಲಿ ಆಕರ್ಷಕ ಪಥ ಸಂಚಲನ ಬಳಿಕ ಶಾರೀರಿಕ ಪ್ರದರ್ಶನ ನಡೆಯಿತು.

Thursday, October 6, 2011

ಭರತನಾಟ್ಯ

ಕಟೀಲು ದೇಗುಲದಲ್ಲಿ ನವರಾತ್ರೋತ್ಸವ, ವಿಜಯ ದಶಮಿ ಸಲುವಾಗಿ ಖ್ಯಾತ ಗಾಯಕ ದಿ.ಅಶ್ವಥ್‌ರ ಮಗಳು ಮೈಸೂರಿನ ವಿಜಯಮೂರ್ತಿಯವರ ತಂಡದಿಂದ ಭರತನಾಟ್ಯ ನಡೆಯಿತು.

ಕಟೀಲು ದೇಗುಲದ ನೂತನ ಧ್ವಜಸ್ತಂಭಕ್ಕೆ ಮರದ ಕೊಡುಗೆ


ಕಟೀಲು : ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದ ನೂತನ ಧ್ವಜಸ್ತಂಭಕ್ಕೆ ಕಟೀಲಿನ ಹರಿಶ್ಚಂದ್ರ ರಾಯರ ಮಕ್ಕಳು ಕೊಡುಗೆಯಾಗಿ ನೀಡಿದ ತೇಗದ ಮರವನ್ನು ಗುರುವಾರ ಶಾಸ್ತ್ರೀಯವಾಗಿ ದೇವರಿಗೆ ಬಿಟ್ಟುಕೊಡಲಾಯಿತು.
ಸುಮಾರು ಐವತ್ತು ಅಡಿ ಎತ್ತರದ ಮರಕ್ಕೆ ಶ್ರೀ ದೇವರ ಪ್ರಸಾದ ಹಾಕುವ ಮೂಲಕ ಮರದ ಸ್ವೀಕಾರ ಕಾರ‍್ಯ ನಡೆಯಿತು. ಈ ಸಂದರ್ಭ ದಾನಿಗಳಾದ ಪ್ರಭಾಕರ ರಾವ್ ದಂಪತಿಗಳು, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಸಂಜೀವನಿ ಟ್ರಸ್ಟ್‌ನ ಡಾ.ಸುರೇಶ್ ರಾವ್, ರಾಮಣ್ಣ ಶೆಟ್ಟಿ, ಎಕ್ಕಾರು ಹರೀಶ್ ಶೆಟ್ಟಿ ಮತ್ತಿತರರಿದ್ದರು.
ನೂತನ ಧ್ವಜ ಸ್ತಂಭಕ್ಕೆ ಸುಮಾರು ನಾಲ್ಕು ಕೆಜಿ ಬಂಗಾರದ ಲ್ಯಾಮಿನೇಟೆಡ್ ಮುಚ್ಚಿಗೆ ಹಾಕುವ ಯೋಜನೆಯಿದ್ದು, ಎರಡು ವರ್ಷಗಳ ಒಳಗೆ ನೂತನ ಧ್ವಜಸ್ತಂಭ ಆಗುವ ಅಂದಾಜಿದೆ ಎಂದು ಅರ್ಚಕ ಅನಂತ ಆಸ್ರಣ್ಣ ತಿಳಿಸಿದ್ದಾರೆ.

Saturday, October 1, 2011

ಮಕ್ಕಳಿಗೆ ಮೊಬೈಲು ಕೊಡಬೇಡಿ- ಪ್ರೊ.ಶಂಕರ್.


ಕಟೀಲು: ಮಕ್ಕಳಿಗೆ ಮೊಬೈಲು ಕೊಡಬೇಡಿ. ಮಕ್ಕಳು ಸರಿಯಾಗಿ ಕಾಲೇಜಿಗೇ ಹೋಗುತ್ತಾರಾ? ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರಾ ಇತ್ಯಾದಿ ವಿಚಾರಗಳನ್ನು ಗಮನಿಸಬೇಕು. ಕೇವಲ ಕಾಲೇಜಿಗೆ ಕಳುಹಿಸಿದಾಕ್ಷಣ ಹೆತ್ತವರ ಜವಾಬ್ದಾರಿ ಮುಗಿಯುದಿಲ್ಲ. ಮಕ್ಕಳನ್ನು ಗಮನಿಸದಿದ್ದರೆ ಅವರು ಹಾದಿ ತಪ್ಪುವ ಸಾಧ್ಯತೆಯೇ ಹೆಚ್ಚು ಎಂದು ವಿಜಯ ಕಾಲೇಜಿನ ಪ್ರಾಚಾರ‍್ಯ ಶಂಕರ್ ಹೇಳಿದರು.
ಅವರು ಕಟೀಲು ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಶನಿವಾರ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯಲ್ಲಿ ಮಾತನಾಡಿದರು.
ಪ್ರಾಚಾರ‍್ಯ ಜಯರಾಮ ಪೂಂಜ, ಶಿಕ್ಷಕ ರಕ್ಷಕ ಸಂಘದ ಎಕ್ಕಾರು ಮೋನಪ್ಪ ಶೆಟ್ಟಿ, ವನಿತಾ ಜೋಷಿ, ರಾಘವೇಂದ್ರ ಭಟ್, ಶಶಾಂಕ ಆರ್.ಕೋಟ್ಯಾನ್, ಮಧುಸೂಧನ್ ಮತ್ತಿತರರಿದ್ದರು.

ಕಟೀಲಿನಲ್ಲಿ ಲಲಿತಾ ಪಂಚಮಿ: ೧8ಸಾವಿರ ಮಂದಿಗೆ ಸೀರೆ ವಿತರಣೆ


ಕಟೀಲು ದೇಗುಲದಲ್ಲಿ ನವರಾತ್ರಿಯ ಪ್ರಯುಕ್ತ ವಿಶೇಷ ಚಂಡಿಕಾಹೋಮ ನಡೆಯಿತು.

ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿಯ ಲಲಿತಾ ಪಂಚಮಿಯ ದಿನವಾದ ಶನಿವಾರ ಸುಮಾರು 18ಸಾವಿರಕ್ಕೂ ಹೆಚ್ಚು ಹುಡುಗಿಯರು, ಮಹಿಳೆಯರಿಗೆ ಶ್ರೀ ದೇವೀಯ ಶೇಷವಸ್ತ್ರಗಳನ್ನು(ಸೀರೆಗಳನ್ನು) ಪ್ರಸಾದ ರೂಪವಾಗಿ ವಿತರಿಸಲಾಯಿತು.
ಕಟೀಲು ದೇಗುಲಕ್ಕೆ ಹರಕೆ ರೂಪದಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತು ಸಾವಿರದಷ್ಟು ಸೀರೆಗಳು ಸಮರ್ಪಣೆಯಾಗುತ್ತಿದ್ದು, ಲಲಿತಾ ಪಂಚಮಿಯ ದಿನದಂದು ಅನ್ನಪ್ರಸಾದ ಸ್ವೀಕರಿಸುವ ಸಂದರ್ಭ ಮಹಿಳೆಯರಿಗೆ ಶೇಷವಸ್ತ್ರಗಳನ್ನು ನೀಡಲಾಗುತ್ತದೆ.
ದೇಗುಲಕ್ಕೆ ಅನ್ನಪ್ರಸಾದ ಸೇರಿದಂತೆ ವಿಶೇಷ ಸೇವೆಗಳನ್ನು ನೀಡುವ ಭಕ್ತರಿಗೆ ದೇಗುಲದ ವತಿಯಿಂದ ಶ್ರೀದೇವಿಯ ಶೇಷವಸ್ತ್ರಗಳನ್ನು ನೀಡಲಾಗುತ್ತದೆ. ದೇಗುಲಕ್ಕೆ ಭೇಟಿ ನೀಡುವ ಗಣ್ಯರಿಗೂ ಸೀರೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಉಳಿದಂತೆ ಕಟೀಲಿನ ಐದು ಯಕ್ಷಗಾನ ಮೇಳಗಳಿಗೆ ವೇಷಗಳಿಗೆ ಸುಮಾರು ೨ಸಾವಿರದಷ್ಟು ಸೀರೆಗಳನ್ನು ನೀಡಲಾಗುತ್ತದೆ. ಎರಡು ವರ್ಷಗಳ ಹಿಂದೆ ಬಳ್ಳಾರಿಯ ಸಿರಗುಪ್ಪದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಕಟೀಲಿನಿಂದ ಹತ್ತು ಸಾವಿರ ಸೀರೆಗಳನ್ನು ನೀಡಲಾಗಿತ್ತು. ಹೀಗೆ ಕಟೀಲಿನಲ್ಲಿ ಭಕ್ತರಿಂದ ನೀಡಲ್ಪಟ್ಟ ಸೀರೆಗಳನ್ನು ಏಲಂ ಮಾಡದೆ ಭಕ್ತರಿಗೇ ನೀಡುವ ಸಂಪ್ರದಾಯ ಬೆಳೆದು ಬಂದಿದೆ. ರವಿಕೆ ಕಣಗಳನ್ನೂ ದೇಗುಲಕ್ಕೆ ಭಕ್ತರು ನೀಡುತ್ತಿದ್ದು ಇವುಗಳನ್ನೂ ಭಕ್ತರಿಗೇ ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. ಸುಮಾರು ಇನ್ನೂರು ರೂಪಾಯಿಗಳಿಂದ ಹತ್ತು ಸಾವಿರ ರೂ.ಮೌಲ್ಯಗಳವರೆಗೂ ಸೀರೆ ದೇವರಿಗೆ ಸಂದಾಯವಾದದ್ದುಂಟು. ವೈಶಾಖ ಅಂದರೆ ಮೇ ತಿಂಗಳಲ್ಲಿ ಮೂರು ಸಾವಿರದಷ್ಟು ಬಂದದ್ದುಂಟು. ದಿನವೊಂದಕ್ಕೆ ಇನ್ನೂರರಷ್ಟು ಸೀರೆಗಳು ಬಂದದ್ದೂ ಉಂಟು. ತಿಂಗಳಿಗೆ ಒಂದು ಸಾವಿರಕ್ಕಿಂತ ಹೆಚ್ಚು ಸೀರೆಗಳು ಬರುತ್ತಿದ್ದು, ಜುಲೈ ತಿಂಗಳಲ್ಲಿ ಮಾತ್ರ ಕಡಿಮೆ ಸಂಖ್ಯೆಯಲ್ಲಿ ಬರುತ್ತವೆ.
ವಿವಾಹ, ಮಕ್ಕಳ ಬೇಡಿಕೆ, ಗೃಹ ನಿರ್ಮಾಣ ಇತ್ಯಾದಿ ಇಷ್ಟಾರ್ಥ ಸಿದ್ದಿ ಮುಂತಾದ ಕಾರಣಗಳಿಗಾಗಿ ಭಕ್ತರು ದೇವರಿಗೆ ಸೀರೆ ಕಾಣಿಕೆ ಸಲ್ಲಿಸುತ್ತಾರೆ. ಸೀರೆ ಸಮರ್ಪಿಸುವವರಿಗೆ ದೇಗುಲದಲ್ಲೇ ಮಾರಾಟ ಕೌಂಟರ್ ಇದ್ದು, ಬೇರೆ ಕಡೆಗಳಿಂದಲೂ ತರಬಹುದಾಗಿದೆ.
ಶನಿವಾರ ಕಟೀಲಿನಲ್ಲಿ ಸಂಜೆ ಏಳು ಗಂಟೆಯ ಹೊತ್ತಿಗೇನೇ ಅನ್ನಪ್ರಸಾದ ಊಟದ ವ್ಯವಸ್ಥೆ ಆರಂಭವಾಗಿದ್ದು, ಹನ್ನೆರಡು ಗಂಟೆಯವರೆಗೂ ಜನ ಬರುತ್ತಲೇ ಇದ್ದರು. ಭಕ್ತರ ಸಾಲು ಅರ್ಧಕಿಲೋಮೀಟರ್ ದೂರದವರೆಗೂ ಹಬ್ಬಿತ್ತು. ೧೨ಸಾವಿರದಷ್ಟು ಸೀರೆಗಳನ್ನು ೧೫ಸಾವಿರದಷ್ಟು ಮಂದಿಗೆ ವಿತರಿಸಲಾಯಿತು. ರಾಥ್ರಿಯ ಹೊತ್ತು ೨೫ಸಾವಿರಕ್ಕೂ ಹೆಚ್ಚು ಮಂದಿ ಕಟೀಲಿಗೆ ಆಗಮಿಸಿದ್ದರು. ಬಜಪೆ ಪೋಲೀಸರು ಸಂಚಾರ ವ್ಯವಸ್ಥೆಯನ್ನು ನೋಡಿಕೊಂಡಿದ್ದು, ವಿಪರೀತ ವಾಹನಗಳ ಕಾರಣದಿಂದ ಕಟೀಲಿನ ರಸ್ತೆಗಳು ಬ್ಲಾಕ್ ಆಗುವುದು ಮಾಮೂಲಾಗಿತ್ತು.
ಕೊಡೆತ್ತೂರು ಗ್ರಾಮದಿಂದ ನವರಾತ್ರಿಯ ವೈಭವದ ಹುಲಿವೇಷ ಮೆರವಣಿಗೆಯೂ ಶನಿವಾರ ಕಟೀಲು ದೇಗುಲಕ್ಕೆ ಬಂತು. ನೂರಾರು ವೇಷಗಳು, ಸ್ತಬ್ದಚಿತ್ರಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದ್ದವು.
ಚಿತ್ರ : ಕಟೀಲ್ ಸ್ಟುಡಿಯೋ