Tuesday, June 29, 2010

ಕಟೀಲು ಪಿಯುಸಿ ಎನ್‌ಎಸ್‌ಎಸ್


ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಪ್ರಸಕ್ತ ಸಾಲಿನ ಯೋಜನೆಗಳನ್ನು ಶಿರ್ವ ಕಾಲೇಜಿನ ಉಪನ್ಯಾಸಕ ಡಾ. ಪದ್ಮನಾಭ ಭಟ್ ಎಕ್ಕಾರು ಉದ್ಘಾಟಿಸಿದರು.

ಪ್ರಾಚಾರ್ಯ ಜಯರಾಮ ಪೂಂಜ, ನಿವೃತ್ತ ತಹಶೀಲ್ದಾರ್ ಕೃಷ್ಣಪ್ಪ, ಬಜಪೆ ಉಪನ್ಯಾಸಕ ಆಲ್ವಿನ್ ಮಿನೇಜಸ್ ಉಪಸ್ಥಿತರಿದ್ದರು. ಯೋಜನಾಧಿಕಾರಿ ಶಂಕರ ಮರಾಠೆ ಸ್ವಾಗತಿಸಿದರು.

ಭಾರತೀ ಎನ್.ಶೆಟ್ಟಿ ವಂದಿಸಿದರು. ಶೆಹನಾಜ್ ಕಾರ‍್ಯಕ್ರಮ ನಿರೂಪಿಸಿದರು.

ಸೇವಾ ಲಿಸ್ಟ್


ಕನ್ನಡ ಸೇವಾ ದರ

ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು



ಕಟೀಲು ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುತ್ತದೆ. ದೇಗುಲದ ಭೋಜನ ಶಾಲೆಯ ಆ ಕಡೆ ಎಕ್ಕಾರು ಗ್ರಾಮ ಪಂಚಾಯತ್.
ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಶೈಲಾ ಶೆಟ್ಟಿ ಉಲ್ಲಂಜೆ ಉಪಾಧ್ಯಕ್ಷರಾಗಿ ಜನಾರ್ದನ ಕಿಲೆಂಜೂರು ಆಯ್ಕೆಯಾಗಿದ್ದಾರೆ. ಕಟೀಲಿನ ಅಭಿವ್ರದ್ಧಿಯಲ್ಲಿ ಪಂಚಾಯತ್ ಕೂಡ ತೊಡಗಿಸಿಕೊಳ್ಳಬೇಕಾಗುತ್ತದೆ.

Friday, June 25, 2010

ಮಕ್ಕಳ ಯಕ್ಷಗಾನ ಸ್ಪರ್ಧೆ




ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ವಾರ್ಷಿಕೋತ್ಸವ ಪ್ರಯುಕ್ತ ಸಪ್ಟಂಬರ್ 5ರ ರವಿವಾರ 16ವರುಷದೊಳಗಿನ ಮಕ್ಕಳ ತೆಂಕುತಿಟ್ಟು ಯಕ್ಷಗಾನ ಬಯಲಾಟ ಸ್ಪರ್ಧೆ ನಡೆಯಲಿದ್ದು, ಭಾಗವಹಿಸುವ ತಂಡಗಳು ಜುಲೈ ೨೦ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.

ಆಸಕ್ತರು ವಿವರಗಳಿಗೆ 9448480515 ಅಥವಾ ೦೮೨೪-೨೨೦೦೫೪೬ ಇಲ್ಲಿ ಸಂಪರ್ಕಿಸಬಹುದು.

ಕಟೀಲಿನಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯಾಗಾರ


ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಗೆ ದೊಡ್ಡ ಮೊತ್ತದ ಯೋಜನೆಗಳಿಗಾಗಿ ಕಾಯದೆ, ಆಯಾಯ ಸಂಸ್ಥೆಗಳೇ ವ್ಯವಸ್ಥೆ ಮಾಡಿಕೊಂಡಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕಷ್ಟವಲ್ಲ ಎಂದು ದ.ಕ.ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಹೇಳಿದರು. ಅವರು ಶುಕ್ರವಾರ (ಜೂನ್ ೨೫) ಕಟೀಲಿನ ಸೌಂದರ್ಯ ಪ್ಯಾಲೇಸಿನ ಸಭಾಂಗಣದಲ್ಲಿ ದ.ಕ.ಜಿ.ಪಂ., ಮೈಸೂರಿನ ಭಾಗೀರಥಿ ಸಂಸ್ಥೆ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್‌ಗಳ ಆಶ್ರಯದಲ್ಲಿ ಗ್ರಾ.ಪಂ.ಸದಸ್ಯರಿಗಾಗಿ ಆಯೋಜಿಸಲಾದ ಘನ ಹಾಗೂ ದ್ರವ ತ್ಯಾಜ್ಯಗಳ ವಿಲೇವಾರಿ ಕುರಿತು ಕಾರ್ಯಗಾರದಲ್ಲಿ ಮಾತನಾಡಿದರು. ಮೈಸೂರಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಆಗುವಂತೆ ಭಾಗೀರಥೀ ಸಂಸ್ಥೆ ಮಾಡಿರುವ ಕಾರ್‍ಯವನ್ನು ಗಮನಿಸಿದ್ದೇವೆ. ದಕ್ಷಿಣ ಕನ್ನಡದಲ್ಲೂ ಇದೇ ರೀತಿ ಗ್ರಾಮ ಪಂಚಾಯತ್‌ಗಳಲ್ಲಿ ಜಾಗೃತಿ ಮಾಡಿ, ಸ್ವಚ್ಛತೆಯ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಶಿವಶಂಕರ್ ಹೇಳಿದರು.ಕಟೀಲು ಪ್ರದೇಶದಲ್ಲಿ ನೀರಿನ ಯೋಜನೆಗಳ ಸಂಖ್ಯೆ ಎಷ್ಟಿದೆ ಎಂದು ಶಿವಶಂಕರ್ ಸಭೆಯಲ್ಲಿ ಉಪಸ್ಥಿತರಿದ್ದ ಇಂಜಿನಿಯರೊಬ್ಬರಲ್ಲಿ ಮಾಹಿತಿ ಕೇಳಿದಾಗ ಇಂಜಿನಿಯರ್ ನಿರುತ್ತರರಾದರು. ಆಗ ಇಂಜಿನಿಯರುಗಳು ಹೀಗೆಯೇ; ಸಚಿವರು, ಉನ್ನತ ಇಲಾಖಾಧಿಕಾರಿಗಳು ಸಭೆಗಳಲ್ಲಿ ಮಾಹಿತಿ ಕೇಳಿದಾಗ ಸರಿಯಾಗಿ ಹೇಳುವುದಿಲ್ಲ, ತಪ್ಪು ತಪ್ಪು ಮಾಹಿತಿ ನೀಡಿ ಜಾರಿಕೊಳ್ಳುತ್ತಾರೆ. ಹಾಗಾಗಿ ಅನೇಕ ಯೋಜನೆಗಳು ಅನುಷ್ಟಾನಗೊಳ್ಳುವುದಿಲ್ಲ. ಹಾಳಾಗುತ್ತವೆ ಎಂದ ಶಿವಶಂಕರ್, ಕಟೀಲಿನಲ್ಲಿ ೧೬ನೀರಿನ ಯೋಜನೆಗಳಿವೆ ಎಂದು ತಾವೇ ಮಾಹಿತಿ ನೀಡಿದರು.ಕಟೀಲು ಜಿ.ಪಂ.ಸದಸ್ಯೆ ಶೈಲಾ ಸಿಕ್ವೇರಾ ಕಾರ್ಯಾಗಾರ ಉದ್ಘಾಟಿಸಿದರು. ಮಂಗಳೂರು ತಾ.ಪಂ. ಕಾರ್‍ಯನಿರ್ವಹಣಾಧಿಕಾರಿ ತಾಕತ್ ರಾವ್, ಮಾಧುರಿ, ಕಟೀಲು ದೇಗುಲದ ಪ್ರಬಂಧಕ ವಿಶ್ವೇಶರಾವ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಕಿನ್ನಿಗೋಳಿ ಗ್ರಾ.ಪಂ.ಅಧ್ಯಕ್ಷ ದೇವಪ್ರಸಾದ್, ಸಿ.ಎಂ.ಕುಲಕರ್ಣಿ, ವಿಶ್ವನಾಥ ಪೂಜಾರಿ, ಚಂದ್ರಶೇಖರ್, ಸೌಂದರ್‍ಯ ಪ್ಯಾಲೇಸ್‌ನ ಮೇನೇಜರ್ ರೆಬೆಲ್ಲೋ ಮತ್ತಿತರರಿದ್ದರು. ಸರೋಜಿನಿ, ರೇವತಿ ಪ್ರಾರ್ಥಿಸಿದರು. ಮೆನ್ನಬೆಟ್ಟು ಗ್ರಾ.ಪಂ.ಕಾರ್ಯದರ್ಶಿ ಗಣೇಶ ಬಡಿಗೇರ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Monday, June 21, 2010

ಕೃಷಿ ಆರಂಭ

ಕಟೀಲಿನಲ್ಲಿ ಹರಿದು ಹೋಗುವ ನದೀ ನಂದಿನೀ ಆಸುಪಾಸಿನ ಊರುಗಳಲ್ಲಿ ಕೃಷಿಗೆ ದೊಡ್ಡ ಆಸರೆ. ಮಚ್ಚಾರು, ಎಕ್ಕಾರು, ಶಿಬರೂರು, ಅತ್ತೂರು, ಚೇಳಾಯರು, ಪಾವಂಜೆ ಹೀಗೆ ನದೀ ಹರಿದು ಹೋಗುವ ಪ್ರದೇಶಗಳಲ್ಲಿ ಗದ್ದೆಗಳಲ್ಲಿ ಹಚ್ಚಹಸುರು ಕಾಣಬಹುದು. ಕೃಷಿಯಿಂದ ಲಾಭವಿಲ್ಲ. ಗದ್ದೆ ಕೆಲಸಕ್ಕೆ ಜನ ಸಿಗುವುದಿಲ್ಲ. ಬೆಳೆದ ಬೆಳೆ ಹಾನಿಯಾದರೆ ಕೇಳುವವರಿಲ್ಲ ಇತ್ಯಾದಿ ಕಾರಣಗಳಿಂದ ಕೃಷಿ ಚಟುವಟಿಕೆಯಿಂದ ರೈತರು ದೂರವಾಗುತ್ತಿದ್ದಾರೆ. ಕೃಷಿ ಭೂಮಿಯನ್ನು ಉದ್ದಿಮೆಗಳಿಗೆ ಮಾರುತ್ತಿದ್ದಾರೆ. ಇನ್ನೆಷ್ಟು ದಿನವೋ ಇಂತಹ ಉತ್ತುವುದು, ಬಿತ್ತುವುದು, ಕೊಯ್ಯುವುದು, ಪಾಡ್ದನ, ಓಬೇಲೆ...

ಪ.ಪೂ.ಕಾಲೇಜಿನಲ್ಲಿ ಪರಿಸರ ದಿನ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ.ಪೂ.ಕಾಲೇಜಿನಲ್ಲಿ ಎನ್.ಎಸ್.ಎಸ್.ಘಟಕದ ಆಶ್ರಯದಲ್ಲಿ ನಡೆದ ಪರಿಸರದಿನ ಆಚರನೆಯಲ್ಲಿ ಉಪನ್ಯಾಸಕ ಸುರೇಶ್ ಶೆಟ್ಟಿ ಪರಿಸರ ಕುರಿತು ಮಾಹಿತಿ ನೀಡಿದರು. ಯೋಜನಾಧಿಕಾರಿ ಶಂಕರ ಮರಾಠೆ, ಭಾರತೀ ಶೆಟ್ಟಿ, ಪ್ರಾಚಾರ್ಯ ಜಯರಾಮ ಪೂಂಜ ಉಪಸ್ಥಿತರಿದ್ದರು. ಶಹನಾಜ್ ಸ್ವಾಗತಿಸಿದರು. ದೀಕ್ಷಿತಾ ವಂದಿಸಿದರು.


ಪರೀಕ್ಷೆ ಕುರಿತು ಮಾಹಿತಿ

ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಚಂದ್ರಶೇಖರ ಶೆಟ್ಟಿ ಸಿ.ಎ., ಐಸಿಡಬ್ಲೂಎ ಇನ್ನಿತರ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾಚಾರ್ಯ ಜಯರಾಮ ಪೂಂಜ, ಉಪನ್ಯಾಸಕರಾದ ನಿರೇಂದ್ರ, ಶ್ರೀಮತಿ ಅಕ್ಷಯಾ ಶೆಟ್ಟಿ ಉಪಸ್ಥಿತರಿದ್ದರು. ಪುಂಡರೀಕ ಕಾರ್ಯಕ್ರಮ ನಿರೂಪಿಸಿದರು.

Thursday, June 17, 2010

ಮಳೆಗೆ ನಂದಿನಿಯ ಅಬ್ಬರ








ಕಟೀಲು ದೇಗುಲ ಇರುವುದು ನಂದಿನಿಯ ಕಟಿ ಪ್ರದೇಶದಲ್ಲಿ. ಅಂದರೆ ನದೀ ಮಧ್ಯದ ಬಂಡೆಯ ಮೇಲೆ ದೇಗುಲ ಕಟ್ಟಲಾಗಿದೆ. ದೇಗುಲದ ನಾಲ್ಕೂ ಬದಿಯಿಂದಲೂ ನದಿ ಹರಿಯುತ್ತದೆ. ಮಳೆಗಾಲದಲ್ಲಿ ನದಿಯ ಅಬ್ಬರಕ್ಕೆ ಮಾತನಾಡಿದ್ದೂ ಕೇಳದು. ನೀರ ಸೊಬಗು ನೋಡಿದಷ್ಟೂ ಸಾಲದು. ನಿಮಗಾಗಿ ಒಂದಿಷ್ಟು ಚಿತ್ರಗಳು


Tuesday, June 15, 2010

ಕಟೀಲಿನಲ್ಲಿ ಅನ್ನಪ್ರಾಶನ ಸೇವೆ


ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಕಳೆದ ವರ್ಷದ ಎಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ತನಕದ ಒಂದು ವರುಷದ ಅವಧಿಯಲ್ಲಿ ೫೧೭೫ ಮಕ್ಕಳಿಗೆ ಅನ್ನಪ್ರಾಶನ ಸೇವೆ ನಡೆದಿದ್ದು, ೨೦೧೦ರ ಎಪ್ರಿಲ್‌ನಲ್ಲಿ ೪೨೪, ಮೇನಲ್ಲಿ ೫೫೭ ಮಕ್ಕಳಿಗೆ ಅನ್ನಪ್ರಾಶನವನ್ನು ಮಾಡಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ೫೮೨ ಮಕ್ಕಳಿಗೆ ಅನ್ನಪ್ರಾಶನ ಸಂಸ್ಕಾರ ಮಾಡಿರುವುದು ದಾಖಲೆಯ ಸಂಖ್ಯೆಯಾಗಿದೆ.ಶ್ರೀ ದೇವೀ ಸನ್ನಿಧಿಯಲ್ಲಿ ಮೊದಲ ಬಾರಿಗೆ ಮಗುವಿಗೆ ಅನ್ನಪ್ರಾಶನ ಮಾಡುವುದಾಗಿ ಅನೇಕ ಹೆತ್ತವರು ಹರಕೆ ಹೊತ್ತಿರುತ್ತಾರೆ. ಅಥವಾ ದೇವೀ ಸನ್ನಿಧಿಯಲ್ಲೇ ಅನ್ನಪ್ರಾಶನ ಮಾಡಿಸುವುದು ಒಂದು ಸಂಪ್ರದಾಯವೂ ಆಗಿದೆ. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆಯಾದ ಬಳಿಕ ದೇವರಿಗೆ ಸಮರ್ಪಿತವಾದ ಹಾಲುಪಾಯಸ, ಬೆಲ್ಲತೆಂಗಿನಕಾಯಿ ಹಾಕಿ ಮಾಡಿದ ಗುಡಾನ್ನ ಅಂದರೆ ಗಟ್ಟಿಪಾಯಸವನ್ನು ಅರ್ಚಕರು ಮಂತ್ರ ಹೇಳುತ್ತಿದ್ದಂತೆ ತಾಯಂದಿರು ತಮ್ಮ ಮಕ್ಕಳಿಗೆ ಉಣಿಸುವ ಮೂಲಕ ಅನ್ನಪ್ರಾಶನದ ಸಂಸ್ಕಾರವನ್ನು ಮಾಡಲಾಗುತ್ತದೆ. ನಾನಾ ದೇಗುಲಗಳಲ್ಲಿ ಈ ಸಂಪ್ರದಾಯವಿದ್ದು, ಮನೆಗಳಲ್ಲೂ ಈ ಸಂಸ್ಕಾರವಿದೆ. ಆದರೆ ಕಟೀಲು ದೇವೀ ಸನ್ನಿಧಿಯಲ್ಲಿ ತಮ್ಮ ಮಕ್ಕಳಿಗೆ ಮೊದಲ ಬಾರಿಗೆ ಅನ್ನ ಉಣಿಸುವ ಸಂಸ್ಕಾರವನ್ನು ಮಾಡುವುದು ವಿಶೇಷ ಎಂಬುದು ಭಕ್ತರ ಅನಿಸಿಕೆ. ಕಟೀಲು ದೇಗುಲದಲ್ಲಿ ಅನ್ನಪ್ರಾಶನ ಸೇವೆಗೆ ಕಾಣಿಕೆ ರೂ. ೨೫.

Wednesday, June 9, 2010

ಕಟೀಲು ಸೀರೆ ಕಾಣಿಕೆಯ ದಾಖಲೆ


ಕಟಿಲಿನ ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಕಳೆದ ವರ್ಷದ ಎಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ವರೆಗಿನ ಒಂದು ವರ್ಷದ ಅವಧಿಯಲ್ಲಿ ದಾಖಲೆಯ ೧೫೩೮೦ರಷ್ಟು ಸೀರೆಗಳೂ, ಸುಮಾರು ಮೂರು ಸಾವಿರದಷ್ಟು ಕೆಂಪು ಪಟ್ಟೆ ಕಣಗಳೂ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಮರ್ಪಣೆಯಾಗಿವೆ. ಕಳೆದ ಎಪ್ರಿಲ್ ತಿಂಗಳಲ್ಲಿ ಸುಮಾರು ೨ಸಾವಿರ ಹಾಗೂ ಮೇಯ ಒಂದೇ ತಿಂಗಳಲ್ಲಿ ಎರಡೂವರೆ ಸಾವಿರದಷ್ಟು ಸೀರೆಗಳು ಸಮರ್ಪಣೆಯಾಗಿರುವುದು ಕೂಡ ದಾಖಲೆಯೆನಿಸಿದೆ. ಮೇ ತಿಂಗಳ ಶುಕ್ರವಾರಗಳಂದು ಇನ್ನೂರರಷ್ಟು ಸೀರೆಗಳು ನೀಡಲ್ಪಟ್ಟಿರುವುದು ವಿಶೇಷ.ಕಟೀಲು ದೇಗುಲಕ್ಕೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ, ಮದುವೆ ಮುಂತಾದ ಶುಭ ಸಮಾರಂಭಗಳ ಸಂದರ್ಭದಲ್ಲಿ, ಜವುಳಿ ಖರೀದಿಸುವ ಸಂದರ್ಭ, ಆರೋಗ್ಯ ಮತ್ತಿತರ ಕಾರಣಗಳಿಗಾಗಿ ಹರಕೆ ಹೇಳಿಕೊಂಡು ಸೀರೆ ಸಮರ್ಪಣೆ ಮಾಡುತ್ತಾರೆ. ಸೀರೆಗಳ ಮೌಲ್ಯ ಸುಮಾರು ಇನ್ನೂರು ರೂಪಾಯಿಯಿಂದ ಹನ್ನೆರಡು ಸಾವಿರ ರೂ.ವರೆಗಿನವರೆಗೆ ಇದೆ ಎಂದು ಲೆಕ್ಕ ಹಾಕಲಾಗಿದೆ. ಕಟೀಲು ದೇಗುಲದಲ್ಲಿ ದೇವರಿಗೆ ನೀಡಲಾದ ಸೀರೆಗಳನ್ನು ಏಲಂ ಮಾಡುವುದಿಲ್ಲ. ಬದಲಾಗಿ ವಾಪಾಸು ಭಕ್ತರಿಗೇ ಪ್ರಸಾದ ರೂಪದಲ್ಲಿ ನೀಡುವುದು ಗಮನೀಯ.ನವರಾತ್ರಿಯ ಲಲಿತಾ ಪಂಚಮಿಯ ದಿನದಂದು ಭೋಜನ ಪ್ರಸಾದ ಸ್ವೀಕರಿಸುವ ಸಂದರ್ಭ ಮಹಿಳಾ ಭಕ್ತರಿಗೆ ಶ್ರೀ ದೇವಿಯ ಶೇಷವಸ್ತ್ರವನ್ನು ನೀಡಲಾಗುತ್ತದೆ. ಕಳೆದ ನವರಾತ್ರಿಯ ದಿನ ಇಪತ್ತು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಸೀರೆಗಳನ್ನು ರವಿಕೆಕಣಗಳನ್ನಾಗಿ ಮಾಡಿ ವಿತರಿಸಲಾಗಿತ್ತು. ಅಲ್ಲದೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಹತ್ತು ಸಾವಿರ ಸೀರೆಗಳನ್ನು ಕೊಂಡೊಯ್ದು ನೀಡಲಾಗಿತ್ತು. ದೇಗುಲಕ್ಕೆ ವಿಶೇಷ ಕಾಣಿಕೆ, ಕೊಡುಗೆಗಳನ್ನು ನೀಡಿದವರಿಗೆ, ದೇಗುಲಕ್ಕೆ ಭೇಟಿ ನೀಡುವ ರಾಜಕಾರಣಿ, ಗಣ್ಯರಿಗೆ, ಕಲಾವಿದರಿಗೆ ದೇವಿಯ ಶೇಷವಸ್ತ್ರವನ್ನು ಗೌರವ ಹಾಗೂ ಪ್ರಸಾದ ರೂಪವಾಗಿ ನೀಡಲಾಗುತ್ತದೆ. ಅಲ್ಲದೆ ನಾಲ್ಕು ಯಕ್ಷಗಾನ ಮೇಳಗಳಿಗೆ ವೇಷಕ್ಕೆ, ಕಲಾವಿದರಿಗೆ ಪ್ರಸಾದ ರೂಪದಲ್ಲೂ ನೀಡಲಾಗುತ್ತದೆ. ಹೀಗೆ ಒಂದು ಸಾವಿರದಷ್ಟು ಸೀರೆಗಳನ್ನು ನೀಡಲಾಗುತ್ತದೆ. ಭಕ್ತರು ತಾವೇ ಖರೀದಿಸಿ ತಂದು ಸೀರೆಗಳನ್ನು ನೀಡಬಹುದು. ಅನುಕೂಲವಾಗುವಂತೆ ದೇಗುಲದಲ್ಲಿಯೂ ಸೀರೆ ಮಾರಾಟ ಕೌಂಟರ್ ತೆರೆಯಲಾಗಿದೆ. ದೇಗುಲದ ಒಳಗೆ ದೇವರ ಎದುರು ಪ್ರಾರ್ಥಿಸಿ, ಪ್ರಸಾದ ಸ್ವೀಕರಿಸಿ, ಕಚೇರಿಯಲ್ಲಿ ಮೂವತ್ತು ರೂ. ಅಲಂಕಾರ ಕಾಣಿಕೆ ನೀಡಿ ಸಮರ್ಪಿಸಬಹುದಾಗಿದೆ.ವರ್ಷದಿಂದ ವರ್ಷಕ್ಕೆ ಕಟೀಲು ದೇವರಿಗೆ ಭಕ್ತರು ನೀಡುತ್ತಿರುವ ಸೀರೆಗಳ ಸಂಖ್ಯೆ ಏರುತ್ತಲೇ ಇರುವುದು ಕ್ಷೇತ್ರದ ಕಾರ್ಣಿಕಕ್ಕೆ ಉದಾಹರಣೆಯಾಗಿದೆ. ಮತ್ತು ಆ ಸೀರೆಗಳು ಸದುಪಯೋಗವಾಗುತ್ತಿರುವುದೂ ಹೌದು.

Monday, June 7, 2010

ಕಟೀಲು ಶಿಕ್ಷಣ ಸಂಸ್ಥೆಗಳು


ಕಟೀಲು ದೇಗುಲದಿಂದ ವತಿಯಿಂದ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬ ವಿದ್ಯಾರ್ಥಿ ಒಂದನೇ ಇಯತ್ತೆಗೆ ಸೇರಿದರೆ ಸಂಸ್ಕ್ರತದಲ್ಲಿ ಎಂ.ಎ. ಪದವಿ ಪಡೆಯುವಷ್ಟರ ಮಟ್ಟಿಗಿನ ವ್ಯವಸ್ಥೆ ಇದೆ.
ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಗೆ ಇನ್ನೇನು ನಾಲ್ಕೈದು ವರುಷ ಕಳೆದರೆ ಶತಮಾನೋತ್ಸವದ ಸಂಭ್ರಮ. ಸುಮಾರು 300ಕ್ಕಿಂತಲೂ ಹೆಚ್ಚು ಮಕ್ಕಳು ಇಲ್ಲಿ ಶಿಕ್ಷಣಾಭ್ಯಾಸ ಮಾಡುತ್ತಿದ್ದಾರೆ. ಪ್ರೌಢ ಶಾಲೆ, ಪದವೀ ಪೂರ್ವ ಕಾಲೇಜುಗಳಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪದವೀ ಕಾಲೇಜಿನಲ್ಲಿ ವಾಣಿಜ್ಯ ಕಲಾ ವಿಭಾಗಗಳಿದ್ದು, ಐನೂರು ವಿದ್ಯಾರ್ಥಿಗಳಿದ್ದಾರೆ. ಸಂಸ್ಕ್ರತ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಇಪ್ಪತ್ತರಷ್ಟು ವಿದ್ಯಾರ್ಥಿಗಳಿದ್ದು, ಮಂಗಳೂರು ವಿವಿಯ ಏಕೈಕ ಸಂಸ್ಕ್ರತ ಎಂ.ಎ.ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯಿದೆ. ಉಳಿದಂತೆ ದಿನಂಪ್ರತಿ ಎರಡು ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ದೇಗುಲದ ವತಿಯಿಂದಲೇ ಮಧ್ಯಾಹ್ನದ ಊಟದ ವ್ಯವಸ್ಥೆಯಿದೆ.
ನೂರಕ್ಕೂ ಹೆಚ್ಚು ಶಿಕ್ಷಕ ಶಿಕ್ಷಕೇತರ ಸಿಬಂದಿಗಳು ಇಲ್ಲಿನ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡೊನೇಷನ್ ರಹಿತ ಶಿಕ್ಷಣ ಇಲ್ಲಿನ ವಿಶೇಷ.

Wednesday, June 2, 2010

ರಕ್ತೇಶ್ವರೀ ಕಲ್ಲು

ಇದು ಕಟೀಲಿನಲ್ಲಿರುವ ರಕ್ತೇಶ್ವರೀ ಬಂಡೆ ಕಲ್ಲು.
ದುಂಬಿಯ ರೂಪ ತಾಳಿದ ದುರ್ಗೆ ಈ ಕಲ್ಲಿನಲ್ಲಿ ಅಡಗಿ ಕುಳಿತಾಗ ಅರುಣಾಸುರ ಖಡ್ಗದಿಂದ ಬಡಿದ. ಆಗ ಆಕೆ ಆತನನ್ನು ಕೊಂದಳಂತೆ. ಅರುಣಾಸುರನನ್ನು ದುಂಬಿಯಾಗಿ ಬಂದು ಕೊಂದು ಭ್ರಾಮರಿಯೆನಿಸಿದ ದುರ್ಗಾಪರಮೇಶ್ವರೀಗೆ ಯಕ್ಷಗಾನ ಅತಿಪ್ರಿಯವಂತೆ.
ಆಕೆ ಇದೇ ಕಲ್ಲಿನಲ್ಲಿ ಕೂತು ಯಕ್ಷಗಾನ ನೋಡುತ್ತಾಳೆ ಎಂಬುದು ಪ್ರತೀತಿ.

ನಂದಿನೀ ನದಿ




ಕಟೀಲಿನ ನಂದಿನೀ ನದಿ ಕ್ಷೇತ್ರದ ಆಕರ್ಷಣೆಗಳಲ್ಲೊಂದು.
ಕಾಮಧೇನುವಿನ ಮಗಳು ನಂದಿನೀಯನ್ನು ಬರಗಾಲ ನಿವಾರಣೆಗೆ ಇಳೆಗೆ ಬರಲು ಕೇಳಿಕೊಂಡಾಗ ಆಕೆ ಒಪ್ಪಲಿಲ್ಲವೆಂದು ಮುನಿ ಜಾಬಾಲಿಯಿಂದ ಶಾಪಿತಳಾಗಿ ಮಾಘಶುದ್ಧ ಪೌರ್ಣಮಿಯ ದಿನ ನಂದಿನಿ ನದಿಯಾಗಿ ಹರಿದಳು. ಕನಕಾದ್ರಿಯಲ್ಲಿ(ಈಗಿನ ಮಿಜಾರು) ಹುಟ್ಟಿ ಪಡುಗಡಲು ಸೇರುವ ನಂದಿನಿಯ ಕಟಿ ಪ್ರದೇಶದಲ್ಲಿ ದುರ್ಗಾಮಾತೆಯು ಲಿಂಗ ರೂಪದಲ್ಲಿ ಆವಿರ್ಭವಿಸಿದ ಪರಿಣಾಮ ಈ ಕ್ಷೇತ್ರ ಕಟೀಲು ಆಯಿತು.
ಇಂಥಾ ನಂದಿನಿಯ ಹೊಳೆ ಹುಟ್ಟಿ ಹರಿದು ಸಮುದ್ರ ಸೇರುವ ಮಧ್ಯ ಭಾಗದಲ್ಲಿ ಕಟೀಲು ಬರುತ್ತದೆ. ಸುಮಾರು 32ಕೀಮೀ ಎಂಬುದು ಒಂದು ಲೆಕ್ಕಾಚಾರ. ಮುಚ್ಚೂರು, ಮಚ್ಚಾರು, ಅಜಾರು, ಕಟೀಲು, ಎಕ್ಕಾರು, ಶಿಬರೂರು, ಪುಚ್ಚಾಡಿ, ಚೇಳಾಯರು, ಪಾವಂಜೆ ಹೀಗೆ ಹನ್ನೆರಡಕ್ಕೂ ಹೆಚ್ಚು ಕಡೆ ಈ ಹೊಳೆಗೆ ಅಣೆಕಟ್ಟುಗಳನ್ನು ಕಟ್ಟಲಾಗಿದೆ.
ಮಳೆಗಾಲದಲ್ಲಿ ನಂದಿನೀಯ ಅಬ್ಬರ ಸೋಡುವುದಕ್ಕೇ ಸೊಬಗು. ನೂರಾರು ರೈತರ ಬಾಳು ಬಂಗಾರವಾಗಲು ನಂದಿನಿಯ ಕೊಡುಗೆ ಅಪಾರ.
ಕಟೀಲಿನಲ್ಲಿ ನಂದಿನಿಯಲ್ಲಿ ಮಿಂದರೆ ತೀರ್ಥ ಸ್ನಾನಗೈದಂತೆ.

ಕಟೀಲು ಮೇಳಗಳ ತಿರುಗಾಟ ಮುಕ್ತಾಯ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕು ಮೇಳಗಳು ಮೊನ್ನೆ ಮೇ 25ರ ಪತ್ತನಾಜೆಯ ದಿನದಂದು ಪ್ರಸಕ್ತ ಸಾಲಿನ ಕೊನೆಯ ಬಯಲಾಟ ಸೇವೆಯನ್ನು ಕಟೀಲು ರಥಬೀದಿಯಲ್ಲಿ ನಡೆಸಿದವು.
ನಾಲ್ಕೂ ಮೇಳಗಳಲ್ಲಿರುವ ಮೇಳದ ಗಣಪತಿ ದೇವರಿಗೆ ಪೂಜೆಯ ಬಳಿಕ ನಾಲ್ಕು ದೇವರೂ ನಾಲ್ಕು ರಂಗಸ್ಥಳಗಳಿಗೂ ಹೋಗಿ ಅಲ್ಲಿ ಕಲಾವಿದರು ದೇವರಿಗೆ ನಮಿಸಿ ಬಳಿಕ ಒಂದೇ ರಂಗಸ್ಥಳದಲ್ಲಿ ನಾಲ್ಕು ಮೇಳಗಳ ಎಲ್ಲ ಕಲಾವಿದರೂ ಕುಣಿದು ವರುಷದ ಕೊನೆಯ ಸೇವೆಯಾಟ ನಡೆಸುವರು.
ಬಳಿಕ ಬೆಳಿಗ್ಗೆ ದೇಗುಲದ ಒಳಗೆ ಶ್ರೀ ಭ್ರಾಮರೀಯ ಎದುರು ಕುಣಿದು, ಗೆಜ್ಜೆ ಬಿಚ್ಚುವರು. ಈ ಸಂದರ್ಭ ನಾಲ್ಕೂ ಮೇಳಗಳ ಹಿರಿಯ ಭಾಗವತರು ಉಪಸ್ಥಿತರಿರುವರು.
ಮುಂದಿನ ಮೇಳಗಳ ತಿರುಗಾಟ ನವೆಂಬರ್ ತಿಂಗಳಲ್ಲಿ ಆರಂಭವಾಗುವುದು. ನಾಲ್ಕು ಮೇಳಗಳಲ್ಲಿ ಕಲಾವಿದರು, ಸಿಬಂದಿಗಳು ಎಲ್ಲ ಒಟ್ಟು ಸೇರಿ ಸುಮಾರು 200ಮಂದಿಯಿದ್ದಾರೆ.












Tuesday, June 1, 2010

ಕಟೀಲಿನ ಕೆಲ ಚಿತ್ರಗಳು







ಕಾರ್ಣಿಕ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಾಲಯ ಮತ್ತು ಇಲ್ಲಿನ ಜಾತ್ರೆಯ ಕೆಲ ಚಿತ್ರಗಳು.